ಬೆಂಗಳೂರಿನಲ್ಲಿ ಗಲಭೆ ಕುರಿತು ಜಮೀರ್ ಅಹ್ಮದ್ ಸರಣಿ ಟ್ವೀಟ್

ಬೆಂಗಳೂರು: ಕೆಜಿ ಹಳ್ಳಿ, ಡಿಜೆ ಹಳ್ಳಿ ಹಾಗೂ ಕಾವಲ್ ಭೈರಸಂದ್ರದಲ್ಲಿ ಮೊನ್ನೆ ರಾತ್ರಿ ನಡೆದ ದಾಂಧಲೆ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಸಚಿವರೂ ಆದ ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್, ‘ಪ್ರವಾದಿ ಮಹಮ್ಮದ್ ಪೈಗಂಬರರನ್ನು ವ್ಯಕ್ತಿಯೊಬ್ಬ ನಿಂದಿಸಿರುವುದು ವೈಯಕ್ತಿಕವಾಗಿ ನನಗೂ ಸಾಕಷ್ಟು ನೋವಾಗಿದೆ. ನಮ್ಮ ನೋವು, ಆಕ್ರೋಶವನ್ನು ಕಾನೂನು ಹೋರಾಟದ ಮೂಲಕದ ತೋರಿಸಿ, ಕಠಿಣ ಶಿಕ್ಷೆಗೆ ಆಗ್ರಹಿಸಬೇಕೇ ಹೊರತು ಅಶಾಂತಿಯ ಮೂಲಕವಲ್ಲ. ನ್ಯಾಯಕ್ಕಾಗಿ ನಡೆಸುವ ಕಾನೂನು ಹೋರಾಟದಲ್ಲಿ ನಾನೂ ನಿಮ್ಮ ಜೊತೆಗಿರುತ್ತೇನೆ’ ಎಂದಿದ್ದಾರೆ.
ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೊನ್ನೆ(ಮಂಗಳವಾರ) ರಾತ್ರಿ ಹಿಂಸಾಚಾರ ಭುಗಿಲೆದ್ದಿತ್ತು. ಉದ್ರಿಕ್ತ ಗುಂಪು ಕಾಂಗ್ರೆಸ್ ಶಾಸಕಅಖಂಡ ಶ್ರೀನಿವಾಸ ಮೂರ್ತಿ ಮನೆ, ಪೊಲೀಸ್ ಠಾಣೆಗೂ ಬೆಂಕಿ ಇಟ್ಟು ದಾಂಧಲೆ ನಡೆಸಿತ್ತು. ಸಾರ್ವಜನಿಕರ, ಪೊಲೀಸರ ವಾಹನಕ್ಕೂ ಬೆಂಕಿ ಇಟ್ಟು ಹಲ್ಲೆ ನಡೆಸಿತ್ತು. ಅಂದು ಸ್ಥಳಕ್ಕೆ ಭೇಟಿ ನೀಡಿದ್ದ ಜಮೀರ್ ಅಹಮದ್, ಪರಿಸ್ಥಿತಿ ನಿಯಂತ್ರಿಸಲು ಪ್ರಯತ್ನಿಸಿದರೂ ಫಲಿಸಲಿಲ್ಲ. ಆ ವೇಳೆ ಅವರ ಕೈಗೆ ಗಾಯವಾಗಿತ್ತು. ಈ ಘಟನೆ ಬಗ್ಗೆ ಇಂದು(ಗುರುವಾರ)ಟ್ವೀಟ್ ಮಾಡಿರುವ ಜಮೀರ್, ‘ಗೋಲಿಬಾರ್‌ನಿಂದ ಮೃತಪಟ್ಟ ಯುವಕರ ಮನೆಗೆ ನಿನ್ನೆ ಭೇಟಿ ನೀಡಿದ್ದೆ, ನಿಜಕ್ಕೂ ಅವರ ಕುಟುಂಬಗಳ ಪರಿಸ್ಥಿತಿ ಕಂಡು ಕಣ್ಣೀರು ಬಂತು. ಇದ್ದ ಒಬ್ಬ ಮಗನನ್ನು ಕಳೆದುಕೊಂಡ ತಾಯಿ, ತಂಗಿಗೆ ಯಾರು ದಿಕ್ಕು? ಯಾರೋ ಕಿಡಿಗೇಡಿಗಳು ಕಲ್ಲು ತೂರಿ, ಬೆಂಕಿ ಹಚ್ಚಿದರು, ಬಲಿಯಾದವರು ಇನ್ಯಾರೋ… ಎಂದು ಬೇಸರ ವ್ಯಕ್ತಪಡಿಸಿದ್ದಾರೆ.