ಆರ್ಯನ್ ಖಾನ್ ಗೆ ಡ್ರಗ್ಸ್ ಪೂರೈಕೆ ಆರೋಪ ತಳ್ಳಿಹಾಕಿದ ಅನನ್ಯಾ ಪಾಂಡೆ, ಸೋಮವಾರ ಮತ್ತೆ ನಟಿಯ ವಿಚಾರಣೆ

ಮುಂಬೈ: ಕ್ರೂಸ್ ಡ್ರಗ್ಸ್ ಪಾರ್ಟಿ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಬಾಲಿವುಡ್ ನಟಿ ಹಾಗೂ ನಟ ಚಂಕಿ ಪಾಂಡೆಯವರ ಪುತ್ರಿ ಅನನ್ಯಾ ಪಾಂಡೆ ಅವರು ಬಂಧಿತ ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಅವರಿಗೆ ಡ್ರಗ್ಸ್ ಪೂರೈಸಿದ ಆರೋಪವನ್ನು ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ. ಆದಾಗ್ಯೂ ಸೋಮವಾರ ಮತ್ತೆ ವಿಚಾರಣೆಗೆ ಹಾಜರಾಗುವಂತೆ ಎನ್ ಸಿಬಿ ನಟಿಗೆ ಸೂಚಿಸಿದೆ.

ಮುಂಬೈ ತೀರದಲ್ಲಿ ಕ್ರೂಸ್ ಹಡಗಿನಲ್ಲಿ ನಿಷೇಧಿತ ಡ್ರಗ್ಸ್ ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ ಸಿಬಿ ಶುಕ್ರವಾರ ಎರಡನೇ ಬಾರಿಗೆ ಅನನ್ಯಾ ಪಾಂಡೆ ಅವರನ್ನು ವಿಚಾರಣೆ ಒಳಪಡಿಸಿತು.

ಪ್ರಕರಣ ಸಂಬಂಧ ಅಕ್ಟೋಬರ್ 2ರಂದು ಬಂಧನಕ್ಕೊಳಗಾದ ಆರ್ಯನ್ ಖಾನ್ ಅವರ ಫೋನಿನಲ್ಲಿ ಪತ್ತೆಯಾದ ವಾಟ್ಸಾಪ್ ಚಾಟ್‌ಗಳ ಆಧಾರದ ಮೇಲೆ ನಟಿಯನ್ನು ವಿಚಾರಣೆ ನಡೆಸಲಾಗಿದೆ ಎಂದು ವರದಿಯಾಗಿದೆ. ಆರ್ಯನ್ ಖಾನ್ ಡ್ರಗ್ಸ್ ಸಂಗ್ರಹಿಸಲು ನಟಿ ಅನನ್ಯಾ ಸಹಾಯ ಮಾಡಿದ್ದಾರೆ ಎಂದು ಎನ್‌ಸಿಬಿ ಹೇಳಿದೆ. ಆದರೆ ಡ್ರಗ್ಸ್ ಪೂರೈಸಿದ ಅಥವಾ ಬಳಸಿದ ಆರೋಪವನ್ನು ಅನನ್ಯಾ ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ.

 

“ಸೋಮವಾರ ಅವರಿಗೆ(ಅನನ್ಯಾ ಪಾಂಡೆ) ಮತ್ತೆ ವಿಚಾರಣೆಗೆ ಕರೆಯಲಾಗಿದೆ. ಹೆಚ್ಚಿನ ವಿಚಾರಣೆಯ ನಂತರ ಮುಂದಿನ ಪ್ರಕ್ರಿಯೆ ನಡೆಯಲಿದೆ ಎಂದು ಎನ್ ಸಿಬಿ ಅಧಿಕಾರಿ ಅಶೋಕ್ ಮುತ್ತ ಜೈನ್ ಅವರು ಹೇಳಿರುವುದಾಗಿ ಎಎನ್ಐ ವರದಿ ಮಾಡಿದೆ.

ಅನನ್ಯ ಪಾಂಡೆ ಅವರು ಮೂರು ಬಾರಿ ಆರ್ಯನ್ ಖಾನ್ ಗೆ ಡ್ರಗ್ಸ್ ಪೂರೈಕೆ ಮಾಡಿದ್ದಾರೆ ಎಂಬುದು ಎನ್ ಸಿಬಿ ವಶಪಡಿಸಿಕೊಂಡ ಮೊಬೈಲ್ ಚಾಟ್ ಗಳಿಂದ ಪತ್ತೆಯಾಗಿದೆ ಎನ್ನಲಾಗಿದೆ.

ಬಾಲಿವುಡ್ ನಟಿ ಅನನ್ಯಾ ಪಾಂಡೆಯವರ ಮುಂಬೈ ನಿವಾಸದ ಮೇಲೆ ಎನ್‌ಸಿಬಿ ಅಧಿಕಾರಿಗಳು ನಿನ್ನೆ ದಾಳಿ ನಡೆಸಿದ್ದು, ಡ್ರಗ್ಸ್ ಆನ್ ಕ್ರೂಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ಲ್ಯಾಪ್ ಟಾಪ್ ಮತ್ತು ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *