ದೇಶದ ಭದ್ರತೆ ವಿಚಾರದಲ್ಲಿ ರಾಜಿ ಮಾಡಿಕೊಳ್ಳಲ್ಲ, ಪಂಜಾಬ್ ಸರ್ಕಾರ ಬಿಎಸ್ಎಫ್ ಆದೇಶ ರಾಜಕೀಯ ಮಾಡಿದೆ- ಕ್ಯಾಪ್ಟನ್ ಅಮರೀಂದರ್
ಚಂಡೀಗಢ: ದೇಶದ ಭದ್ರತೆ ವಿಚಾರದಲ್ಲಿ ರಾಜಿ ಮಾಡಿಕೊಳ್ಳಲ್ಲ ಎಂದಿರುವ ಪಂಜಾಬ್ ನಿಕಟಪೂರ್ವ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಅವರು ಬಿಎಸ್ಎಫ್ ಗಡಿ ವ್ಯಾಪ್ತಿ ವಿಸ್ತರಣೆಯನ್ನು ಬೆಂಬಲಿಸಿ ಮಾತನಾಡಿದ್ದಾರೆ. ಪಂಜಾಬ್ ನಲ್ಲಿ ಗಡಿಯಿಂದ 50 ಕಿಮೀ ವ್ಯಾಪ್ತಿಯವರೆಗೆ ಪ್ರಕರಣ ದಾಖಲಿಸುವ ಅಧಿಕಾರ ಬಿಎಸ್ಎಫ್ ಗೆ ನೀಡಲಾಗಿದೆ. ಆದರೆ ಪಂಜಾಬ್ ಸರ್ಕಾರ ಬಿಎಸ್ಎಫ್ ಆದೇಶವನ್ನು ರಾಜಕೀಯ ಮಾಡಿದೆ. ವಾಸ್ತವವಾಗಿ ಬಿಎಸ್ಎಫ್, ಪಂಜಾಬ್ ಪೊಲೀಸರಿಗೆ ಸಹಾಯ ಮಾಡಲಿದೆ. ಗಡಿಯಲ್ಲಿ ಡ್ರೋಣ್ ಮೂಲಕ ಡ್ರಗ್ಸ್ ಸರಬರಾಜು ಮಾಡಲಾಗುತ್ತಿದೆ ಎಂದು ಹೇಳಿದರು.
ಸದ್ಯದಲ್ಲೇ ಹೊಸ ಪಕ್ಷ ಸ್ಥಾಪನೆ ಘೋಷಣೆ:
ಚಂಡೀಗಢದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕ್ಯಾಪ್ಟನ್ ಅಮರೀಂದರ್ ಸಿಂಗ್ ಪ್ರಣಾಳಿಕೆಯ ಶೇ. 98ರಷ್ಟು ಭರವಸೆ ಈಡೇರಿಸಿದ್ದೇನೆ. ಸದ್ಯದಲ್ಲೇ ಹೊಸ ಪಕ್ಷ ಸ್ಥಾಪನೆ ಘೋಷಣೆ ಮಾಡುವೆ. ಹೊಸ ಪಕ್ಷದ ಹೆಸರು ಇನ್ನೂ ತೀರ್ಮಾನ ಆಗಿಲ್ಲ. ಹೊಸ ಪಕ್ಷದ ಹೆಸರು, ಚುನಾವಣಾ ಚಿಹ್ನೆ ಅಂತಿಮಗೊಳಿಸಲಾಗುತ್ತಿದೆ. ನಾನು ಯಾವಾಗಲೂ ಯುದ್ಧದ ರೀತಿ ಹೋರಾಟ ಮಾಡಿದ್ದೇನೆ. ನಾನು ಎಷ್ಟು ಕೆಲಸ ಮಾಡಿದ್ದೇನೆ ಎನ್ನುವುದರ ಸಂಪೂರ್ಣ ಲೆಕ್ಕ ನೀಡುತ್ತೇನೆ. ನಾನು ಹೊಸ ಪಕ್ಷ ಸ್ಥಾಪಿಸುತ್ತಿದ್ದೇನೆ. ನಮ್ಮ ವಕೀಲರು ಚುನಾವಣಾ ಆಯೋಗದ ಜೊತೆಗೆ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.