ಬಿಎಸ್​ವೈ ಕಣ್ಣೀರಿಗಿಂತ ಖರ್ಗೆ, ಪರಮೇಶ್ವರ್ ಕಣ್ಣೀರು ಹೆಚ್ಚಿದೆ; ಡಿಕೆ ಶಿವಕುಮಾರ್​ಗೆ ನಳಿನ್ ಕುಮಾರ್ ತಿರುಗೇಟು

ಬಾಗಲಕೋಟೆ: ‘ಯಡಿಯೂರಪ್ಪ ಕಣ್ಣೀರಿನಲ್ಲಿ ಬಿಜೆಪಿ ಕೊಚ್ಚಿಕೊಂಡು ಹೋಗುತ್ತೆ’ ಎಂಬ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಹೇಳಿಕೆಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು (Nalin Kumar Kateel) ತಿರುಗೇಟು ನೀಡಿದ್ದಾರೆ. ಬಿಎಸ್​ ಯಡಿಯೂರಪ್ಪನವರ ಕಣ್ಣೀರಿಗಿಂತ ಖರ್ಗೆ, ಪರಮೇಶ್ವರ್ ಕಣ್ಣೀರು ಹೆಚ್ಚಿದೆ. ಮುಖ್ಯಮಂತ್ರಿ ಮಾಡಲಿಲ್ಲ ಅಂತ ಖರ್ಗೆ, ಸೋಲಿಸಿದಿರಿ ಅಂತ ಪರಮೇಶ್ವರ್ ಕಣ್ಣೀರು ಹೆಚ್ಚಿದೆ ಅಂತ ಕಟೀಲು ಹೇಳಿದ್ದಾರೆ.

ಖರ್ಗೆ, ಪರಮೇಶ್ವರ್ ಕಣ್ಣೀರಿನಲ್ಲಿ ಕಾಂಗ್ರೆಸ್ ಸರ್ವನಾಶವಾಗಿದೆ. ಅದಕ್ಕೇನು ಉತ್ತರ ಕೊಡುತ್ತೀರಿ? ಎಂದು ಪ್ರಶ್ನಿಸಿದ ನಳಿನ್ ಕುಮಾರ್ ಕಟೀಲು, ಪರಮೇಶ್ವರ್, ಮಲ್ಲಿಕಾರ್ಜುನ ಖರ್ಗೆ ಬಗ್ಗೆ ಡಿಕೆಶಿಗೆ ಚಿಂತೆಯಿಲ್ಲ. ಚಿಂತೆ ಇರುವುದು ಸಿದ್ದರಾಮಯ್ಯ ಬಗ್ಗೆ ಮಾತ್ರ. ಸಿದ್ದರಾಮಯ್ಯ, ಡಿಕೆಶಿ ಸಿಎಂ ಕುರ್ಚಿಗೆ ಟವೆಲ್ ಹಾಕಿ ಕುಳಿತಿದ್ದಾರೆ. ಬೈಎಲೆಕ್ಷನ್ ಮುಗಿದ ಮೇಲೆ ಕಾಂಗ್ರೆಸ್ ಎರಡು ಹೋಳಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಸಿದ್ದರಾಮಯ್ಯ ಸಿಎಂ ಆಗಲು ಡಿಕೆ ಶಿವಕುಮಾರ್ ಯಾವ ಕಾರಣಕ್ಕೂ ಬಿಡಲ್ಲ. ಡಿಕೆಶಿ ಅಧ್ಯಕ್ಷರಾಗಿ ಮುಂದುವರಿಯಲು ಸಿದ್ದರಾಮಯ್ಯ ಬಿಡಲ್ಲ. ಇದು ಕಾಂಗ್ರೆಸ್ ಅಂತ ಬಾಗಲಕೋಟೆಯಲ್ಲಿ ನಳಿನ್ ಕುಮಾರ್ ಕಟೀಲು ವಾಗ್ದಾಳಿ ನಡೆಸಿದ್ದಾರೆ.

ಮುಂದುವರಿದು ಮಾತನಾಡಿದ ಕಟೀಲು, ಉಪಚುನಾವಣೆಯಲ್ಲಿ ಗೋಣಿಚೀಲದಲ್ಲಿ ಹಣ ತಂದು ಹಂಚಿದ್ದಾರೆ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದಾರೆ. ನೀವು ಸುದೀರ್ಘ ಅವಧಿಯಲ್ಲಿ ರಾಜಕಾರಣ ಮಾಡಿದ್ದೀರಿ. ಹಾಗಾದರೆ ಎಲ್ಲ ಚುನಾವಣೆಯಲ್ಲೂ ಹಣ ಹಂಚಿ ಗೆದ್ರಾ? ಇದಕ್ಕೆಲ್ಲ ಉತ್ತರ ಅವರೆ ಕೊಡಲಿ ಅಂತ ಹೇಳಿದರು.

ಜೆಡಿಎಸ್​ನ ಬಿ ಟೀಂ ಕಾಂಗ್ರೆಸ್ ಎಂದು ಸಿದ್ದರಾಮಯ್ಯ ಹೇಳಬೇಕು
ಕುಮಾರಸ್ವಾಮಿಯನ್ನು ಸಿಎಂ ಮಾಡಿದ್ದು ಯಾರು ಸ್ವಾಮಿ? ಬಿಬಿಎಂಪಿಯಲ್ಲಿ ಹೊಂದಾಣಿಕೆ ಮಾಡಿಕೊಂಡಿದ್ದು ಯಾರು? ಮೈಸೂರು ಪಾಲಿಕೆಯಲ್ಲಿ ಹೊಂದಾಣಿಕೆ ಮಾಡಿಕೊಂಡಿದ್ರಿ. ಹೀಗಾಗಿ ಕಾಂಗ್ರೆಸ್ ಪಕ್ಷದ ಬಿ ಟೀಂ ಜೆಡಿಎಸ್ ಪಕ್ಷ. ಕಾಂಗ್ರೆಸ್ ಪಕ್ಷದಲ್ಲಿ ಇರೋರು ಜೆಡಿಎಸ್​ನಲ್ಲೂ ಇರ್ತಾರೆ. ಅಲ್ಲಿಂದ ಇಲ್ಲಿಗೆ ಇಲ್ಲಿಂದ ಅಲ್ಲಿಗೆ ಪಕ್ಷ ಬದಲಿಸುತ್ತಿರುತ್ತಾರೆ ಎಂದರು.

ಜೆಡಿಎಸ್​ನ ಬಿ ಟೀಂ ಕಾಂಗ್ರೆಸ್ ಎಂದು ಸಿದ್ದರಾಮಯ್ಯ ಎಲ್ಲೇ ಇದ್ದರೂ ಈ ಮಾತು ಹೇಳಬೇಕು. ಸಿದ್ದರಾಮಯ್ಯ ಜೆಡಿಎಸ್ ಪಕ್ಷದಿಂದ ಬಂದಿರುವ ಹಿನ್ನೆಲೆ ಜೆಡಿಎಸ್​ನ ಬಿ ಟೀಂ ಕಾಂಗ್ರೆಸ್ ಎಂದು ಹೇಳಬೇಕು. ಸಿದ್ದರಾಮಯ್ಯ ಎಲ್ಲಿ ನಾಯಕರಾಗ್ತಾರೋ ಅದನ್ನ ತುಳೀತಾರೆ. ಅವರು ನಾಯಕರಾಗಿ ಬೆಳೆದ ಪಕ್ಷವನ್ನ ಅವರು ತುಳೀತಾರೆ. ಈ ಹಿಂದೆ ಇಂದಿರಾ ಗಾಂಧಿಯನ್ನು ಕೂಡ ಟೀಕಿಸಿದ್ದರು. ಬೇಕಿದ್ದರೆ ಇತಿಹಾಸ ತೆಗೆದು ನೋಡಲಿ ಎಂದ ಕಟೀಲು ಹೇಳಿದರು.

ಕಾಂಗ್ರೆಸ್ ಸುದೀರ್ಘ ಆಡಳಿತದಲ್ಲಿ 4 ಕೊಡುಗೆ ಕೊಟ್ಟಿದೆ. ಒಂದು ಭಯೋತ್ಪಾದನೆ, ಎರಡನೆಯದು ಭ್ರಷ್ಟಾಚಾರ. ಮೂರನೇಯದ್ದು ಬಡತನ, ನಾಲ್ಕನೆಯದ್ದು ನಿರುದ್ಯೋಗ ಅಂತ ಕಾಂಗ್ರೆಸ್ ವಿರುದ್ಧ ನಳಿನ್ ಕುಮಾರ್ ಆರೋಪ ಮಾಡಿದ್ದಾರೆ. ಮೋದಿ ಭಯೋತ್ಪಾದನೆ, ಭ್ರಷ್ಟಾಚಾರ ಮುಕ್ತ ಮಾಡಿದ್ದಾರೆ. ಬಡತನ ನಿರ್ಮೂಲನೆಗೆ ಪ್ರಯತ್ನಗಳು ನಡೆಯುತ್ತಿವೆ ಎಂದರು.

ಜೆಡಿಎಸ್ ಒಂದು ಕುಟುಂಬದ ಪಾರ್ಟಿ
ಜೆಡಿಎಸ್ ಒಂದು ಕುಟುಂಬದ ಪಾರ್ಟಿಯಾಗಿದೆ. ಹೀಗಾಗಿ ಆ ಕುಟುಂಬವೇ ಪ್ರಚಾರ ಮಾಡುತ್ತಿದೆ ಎಂದು ಬಾಗಲಕೋಟೆಯಲ್ಲಿ ನಗರದಲ್ಲಿ ಕಟೀಲು ಹೇಳಿಕೆ ನೀಡಿದರು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *