Tamannaah Bhatia: ಖ್ಯಾತ ನಟಿ ತಮನ್ನಾರಿಂದ ನಿರ್ಮಾಪಕರಿಗೆ 5 ಕೋಟಿ ರೂಪಾಯಿ ನಷ್ಟ! ಕಾರಣವೇನು ಗೊತ್ತಾ..?
ಕೆಲವೊಮ್ಮೆ ಟಿವಿಯಲ್ಲಿ ಪ್ರಸಾರವಾಗುವ ಈ ರಿಯಾಲಿಟಿ ಶೋಗಳು(Reality Show) ತುಂಬಾ ಜನಪ್ರಿಯವಾದರೆ, ಶೋ ನಡೆಸಿಕೊಟ್ಟ ನಟ ನಟಿಯರಿಗೆ ಕೈ ತುಂಬಾ ದುಡ್ಡು ದೊರೆಯುವುದು ಗ್ಯಾರಂಟಿ. ಆದರೆ ಅದೇ ರಿಯಾಲಿಟಿ ಶೋಗಳು ನಿರೀಕ್ಷೆಯ ಮಟ್ಟದ ಯಶಸ್ಸು ಕಾಣದೆ ಹೋದರೆ, ನಟ ನಟಿಯರು ಚಿತ್ರೀಕರಣವನ್ನು ಸಮಯಕ್ಕೆ ಮುಗಿಸದೆ ಇದ್ದರೆ ಮತ್ತು ಹಣವು ಸರಿಯಾಗಿ ನೀಡದಿದ್ದರೆ ಆಗ ಶುರುವಾಗುತ್ತೆ ಈ ಆರೋಪ ಪ್ರತ್ಯಾರೋಪಗಳ ಆಟ.ಇಲ್ಲಿಯೂ ಸಹ ಅಂತಹದೇ ಒಂದು ಘಟನೆ ನಡೆದಿದ್ದು, ತೆಲುಗು ರಿಯಾಲಿಟಿ ಶೋನ (Telugu Reality Show) ಮಾಜಿ ನಿರೂಪಕಿ ಮತ್ತು ನಟಿ ತಮಗೆ ಬರಬೇಕಾದ ಹಣ ಇನ್ನೂ ನಿರ್ಮಾಪಕರು ಬಾಕಿ ಉಳಿಸಿಕೊಂಡಿದ್ದಾರೆ ಎಂದು ಆರೋಪಿಸಿದರೆ, ಇತ್ತ ನಿರ್ಮಾಪಕರು ನಟಿಯಿಂದ ಇಷ್ಟೊಂದು ಹಣ ನಮಗೆ ನಷ್ಟವಾಗಿದೆ ಎಂದು ನಟಿಯನ್ನು ದೋಷಿಸಿದ್ದಾರೆ. ಯಾರಪ್ಪಾ ಇವರು ಅಂತೀರಾ?
ತೆಲುಗಿನ ‘ಮಾಸ್ಟರ್ ಚೆಫ್’ (MasterChef) ರಿಯಾಲಿಟಿ ಶೋನ ಮಾಜಿ ನಿರೂಪಕಿಯಾದ ನಟಿ ತಮನ್ನಾ ಭಾಟಿಯಾ (Tamannaah Bhatia) ತನಗೆ ಕೊಡಬೇಕಾದ ಹಣವು ಇನ್ನೂ ಕೊಡುವುದು ಬಾಕಿ ಇದೆ ಎಂದು ಆರೋಪಿಸಿ ನಿರ್ಮಾಪಕರಿಗೆ ಕಾನೂನು ನೋಟಿಸ್ ಕಳುಹಿಸಿದ್ದರು. ಇದರ ನಂತರ ರಿಯಾಲಿಟಿ ಶೋ ನಿರ್ಮಾಪಕರಾದ ಇನ್ನೋವೇಟಿವ್ ಫಿಲ್ಮ್ ಅಕಾಡೆಮಿ (IFA) ಸಹ ನಟಿ ತಮನ್ನಾರಿಂದ ನಮಗೆ ಬರೋಬ್ಬರಿ 5 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ದೂಷಿಸಿದ್ದಾರೆ.
ತಮ್ಮ ಇತ್ತೀಚಿನ ಅಧಿಕೃತ ಹೇಳಿಕೆಯಲ್ಲಿ, IFA ಈ ರಿಯಾಲಿಟಿ ಶೋ ಪೂರ್ಣಗೊಳಿಸುವಲ್ಲಿ ತಮನ್ನಾ ತಮ್ಮ ವೈಯಕ್ತಿಕ ಕಾರಣಗಳಿಗಾಗಿ ವಿಳಂಬ ಮಾಡಿದ್ದು, ಇದರಿಂದ ನಮಗೆ ಸುಮಾರು 5 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಆರೋಪಿಸಿದ್ದಾರೆ.
ಈ ರಿಯಾಲಿಟಿ ಶೋ ಅನ್ನು 18 ದಿನಗಳಲ್ಲಿ ಚಿತ್ರೀಕರಣ ಮುಗಿಸಲು ನಟಿ ತಮನ್ನಾ ಭಾಟಿಯಾರಿಗೆ 2 ಕೋಟಿ ರೂಪಾಯಿ ಸಂಭಾವನೆ ನೀಡುವುದಾಗಿ ನಾವು ಮೊದಲು ಹೇಳಿದ್ದೆವು. ಅಲ್ಲದೆ, ತಮನ್ನಾ 16 ದಿನಗಳ ಚಿತ್ರೀಕರಣದಲ್ಲಿ ಭಾಗಿಯದ್ದಕ್ಕಾಗಿ ನಟಿಗೆ 1.56 ಕೋಟಿ ರೂಪಾಯಿಯನ್ನು ಪಾವತಿ ಮಾಡಲಾಗಿದೆ ಎಂದು ಅವರು ಹೇಳಿದರು. ಅಂತಿಮ ಹಂತದ ಚಿತ್ರೀಕರಣ ಪೂರ್ಣಗೊಳಿಸುವ ಸಲುವಾಗಿ ತಮನ್ನಾ ರಿಯಾಲಿಟಿ ಶೋನ ಎರಡನೇ ಸೀಸನ್ ಗೆ ಮುಂಗಡವಾಗಿ ಪಾವತಿ ಮಾಡುವುದಾಗಿ ಒತ್ತಾಯಿಸುತ್ತಿದ್ದಾರೆ ಎಂದು ನಿರ್ಮಾಪಕರು ಆರೋಪಿಸಿದ್ದಾರೆ.

ತಮನ್ನಾ ಇತ್ತೀಚೆಗೆ ‘ಬಾಕಿ ಪಾವತಿಸದ’ ಆರೋಪದ ಮೇಲೆ ನಿರ್ಮಾಪಕರ ವಿರುದ್ಧ ಮೊಕದ್ದಮೆ ಹೂಡಿದ್ದಾರೆ. “ಮಾಸ್ಟರ್ ಚೆಫ್ ತೆಲುಗು ಶೋನ ಬಾಕಿ ಪಾವತಿಸದ ಕಾರಣ ಮತ್ತು ನಿರ್ಮಾಣ ಸಂಸ್ಥೆ ಇನ್ನೋವೇಟಿವ್ ಫಿಲ್ಮ್ ಅಕಾಡೆಮಿಯಿಂದ ವೃತ್ತಿಪರವಲ್ಲದ ನಡವಳಿಕೆಯಿಂದಾಗಿ, ತಮನ್ನಾ ಭಾಟಿಯಾ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಮಾಡಿದೆ. ನಿರಂತರ ಪಾವತಿ ಮಾಡದ ಮತ್ತು ವೃತ್ತಿಪರವಲ್ಲದ ವಿಧಾನದ ಹೊರತಾಗಿಯೂ, ಅವರು ಇತರ ಬದ್ಧತೆಗಳನ್ನು ರದ್ದುಗೊಳಿಸಿ ಇಡೀ ಯೋಜನೆ ಪೂರ್ಣಗೊಳಿಸಲು ನಿರ್ಧರಿಸಿದರು. ಆದರೂ, ನಿರ್ಮಾಪಕರು ರಾತ್ರೋರಾತ್ರಿ ಅವರೊಂದಿಗೆ ಮಾತಾಡುವುದನ್ನೇ ನಿಲ್ಲಿಸಿರುವುದರಿಂದ, ಈಗ ಅವರ ವಿರುದ್ಧ ಕಾನೂನು ದಾವೆ ಹೂಡಿದ್ದಾರೆ” ಎಂದು ವಕೀಲರು ಹೇಳಿಕೆ ನೀಡಿದ್ದಾರೆ.