ವಿಶ್ವ ವಿಖ್ಯಾತ ಗೋಲಗುಂಬಜ್ ಆವರಣದಲ್ಲಿ ಗಮನಸೆಳೆದ ರಾಜ್ಯೋತ್ಸವ ಗೀತಗಾಯನ
ವಿಜಯಪುರ, ಅ.29-ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಕನ್ನಡಕ್ಕಾಗಿ ಅಭಿಯಾನದ ಅಂಗವಾಗಿ ರಾಜ್ಯೋತ್ಸವದ ಗೀತ ಗಾಯನ ಕಾರ್ಯಕ್ರಮವನ್ನು ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಯೋಗದೊಂದಿಗೆ ವಿಶ್ವವಿಖ್ಯಾತ ಗೋಲಗುಂಬಜ್ ಆವರಣದಲ್ಲಿ ಅರ್ಥಪೂರ್ಣವಾಗಿ ಹಮ್ಮಿಕೊಳ್ಳಲಾಯಿತು.
ಈ ಗೀತಗಾಯನ ಕಾರ್ಯಕ್ರಮದ ಅಂಗವಾಗಿ ಜಿಲ್ಲೆಯ 50 ಕಲಾ ತಂಡಗಳ 250 ಕಲಾವಿದರಿಂದ ಕನ್ನಡದ ಶ್ರೇಷ್ಠತೆಯನ್ನು ಸಾರುವ ಕುವೆಂಪುರವರ ಬಾರಿಸು ಕನ್ನಡ ಡಿಂಡಿಮವ ಕೆ.ಎಸ್ ನಿಸಾರ್ ಅಹಮದ್ ಅವರ ಜೋಗದ ಸಿರಿ ಬೆಳಕಿನಲ್ಲಿ ಹಾಗೂ ಹಂಸಲೇಖ ಅವರ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಈ 3 ಗೀತೆಗಳನ್ನು ಹಾಡಿ ಕನ್ನಡದ ಶ್ರೇಷ್ಠಯನ್ನು ಸಾರಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಜಿಲ್ಲಾಧಿಕಾರಿ ಪಿ. ಸುನೀಲಕುಮಾರ್ ಅವರು ಕನ್ನಡ ಭಾಷೆಯು ಅತ್ಯಂತ ಸುಂದರ ಮತ್ತು ಶ್ರೇಷ್ಠ ಭಾಷೆಯಾಗಿದೆ. ನಾವು ಕೂಡ ಕನ್ನಡ ಭಾಷೆಯನ್ನು ಅರ್ಥಪೂರ್ಣವಾಗಿ ಬರೆಯುವುದು ಹಾಗೂ ಓದುವುದನ್ನು ಕಲಿತಿದ್ದು ಅಭಿಮಾನದ ಸಂಗತಿಯಾಗಿದೆ ಎಂದು ಹೇಳಿ ಕನ್ನಡ ಚಲನಚಿತ್ರದ ಗೀತೆಯಾದ “ಗೊಂಬೆ ಹೇಳುತೈತೆ ಮತ್ತೆ ಹೇಳುತೈತೆ ನೀನೇ ರಾಜಕುಮಾರ” ಹಾಡುವ ಮೂಲಕ ಕನ್ನಡ ಪ್ರೀತಿ ಭಾಷೆಯ ಬಗ್ಗೆ ಭಕ್ತಿಯನ್ನು ಮೆರೆದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ಈರಣ್ಣಾ ಆಶಾಪುರ್, ವಿವಿಧ ಇಲಾಖೆಗಳ ಅಧಿಕಾರಿಗಳು ಶಿಕ್ಷಕರು ವಸತಿ ಶಾಲೆಯ ಮಕ್ಕಳು ಕನ್ನಡ ಭಾಷಾ ಅಭಿಮಾನಿಗಳು ಕಲಾವಿದರು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಇನ್ನಷ್ಟು ಮೆರುಗು ನೀಡಿದರು. ಶಿಕ್ಷಕರಾದ ಮಮದಾಪುರ ಕಾರ್ಯಕ್ರಮ ನಿರ್ವಹಿಸಿ ಕೊನೆಯಲ್ಲಿ ವಂದಿಸಿದರು.