ಹಾವೇರಿಯ ಈ ಗ್ರಾಮದ ಮಸೀದಿಯಲ್ಲಿ ಕನ್ನಡದಲ್ಲಿಯೇ ಪ್ರಾರ್ಥನೆ: ಸಾಮರಸ್ಯದ ಜೀವನಕ್ಕೆ ಮಾದರಿ

ಹೈಲೈಟ್ಸ್‌:

  • ಹಾವೇರಿ ಜಿಲ್ಲೆಯ ರಟ್ಟೀಹಳ್ಳಿ ತಾಲೂಕಿಮ ಚಿಕ್ಕ ಕಬ್ಬಾರ ಗ್ರಾಮ
  • ಹಿಂದಿನಿಂದಲೂ ಕನ್ನಡದಲ್ಲಿಯೇ ಪ್ರಾರ್ಥನೆ ಮತ್ತು ಪ್ರವಚನ
  • ಮಸೀದಿಯಲ್ಲಿ ಉರ್ದು ಅಥವಾ ಅರೇಬಿಕ್ ಬಳಕೆ ಇಲ್ಲ

ಹಾವೇರಿ: ಜಗತ್ತಿನೆಲ್ಲೆಡೆ ಮಸೀದಿಗಳಲ್ಲಿ ಸಾಮಾನ್ಯವಾಗಿ ಧಾರ್ಮಿಕ ಪ್ರಾರ್ಥನೆಯು ಅರೇಬಿಕ್ ಭಾಷೆಯಲ್ಲಿ ಇರುತ್ತದೆ. ಕೆಲವು ಕಡೆ ಪ್ರಾದೇಶಿಕ ಭಾಷೆ ಬಳಕೆಯ ನಿದರ್ಶನಗಳೂ ಇವೆ. ಹಾವೇರಿ ಜಿಲ್ಲೆಯ ರಟ್ಟೀಹಳ್ಳಿ ತಾಲೂಕಿನ ಚಿಕ್ಕ ಕಬ್ಬಾರದಲ್ಲಿನ ಹಜರತ್ ಮೆಹಬೂಬ್ ಸುಬಾನಿ ದರ್ಗಾದಲ್ಲಿ ಕನ್ನಡದಲ್ಲಿಯೇ ಪ್ರಾರ್ಥನೆ ಸಲ್ಲಿಸಲಾಗುತ್ತಿದೆ.

ಚಿಕ್ಕ ಕಬ್ಬಾರ ಗ್ರಾಮದಲ್ಲಿ ಇರುವ ಈ ದರ್ಗಾದಲ್ಲಿ 150 ವರ್ಷಗಳಿಂದಲೂ ಕನ್ನಡದಲ್ಲಿಯೇ ಪ್ರಾರ್ಥನೆ ಸಲ್ಲಿಸಲಾಗುತ್ತಿದೆ. ಇಲ್ಲಿರುವ ಸುಮಾರು 400 ಮುಸ್ಲಿಮರ ಕುಟುಂಬಗಳಲ್ಲಿ ಹೆಚ್ಚಿನವರಿಗೆ ಉರ್ದು ಅಥವಾ ಅರೇಬಿಕ್ ಬರುವುದಿಲ್ಲ. ಹೀಗಾಗಿ ದಿನಕ್ಕೆ ಐದು ಬಾರಿಯೂ ಇಲ್ಲಿನ ಮೌಲ್ವಿ ತಮ್ಮ ಸಮುದಾಯದ ಜನರೊಂದಿಗೆ ಕನ್ನಡದಲ್ಲಿಯೇ ಸಂವಹನ ನಡೆಸುತ್ತಾರೆ.

ಕಳೆದ ದಶಕದಲ್ಲಿಯಷ್ಟೇ ಮಕ್ಕಳು ಶಾಲೆಯಲ್ಲಿ ಉರ್ದು ಕಲಿಯುವುದನ್ನು ಆರಂಭಿಸಿದ್ದಾರೆ. ಆದರೆ ಮಸೀದಿಯ ಒಳಗೆ ಹೊರಗೆ ಇರುವ ಫಲಕಗಳಲ್ಲಿ ಕನ್ನಡವನ್ನೇ ಬಳಸಲಾಗಿದೆ.

‘ಚಿಕ್ಕ ಕಬ್ಬಾರ ಗ್ರಾಮದ ಬಹುತೇಕ ಮುಸ್ಲಿಮರಿಗೆ ಅರೇಬಿಕ್ ಅಥವಾ ಉರ್ದು ಬರುವುದಿಲ್ಲ. ಹೀಗಾಗಿ ಇಲ್ಲಿ ಪ್ರಾರ್ಥನೆ ವೇಳೆ ಆ ಭಾಷೆಗಳನ್ನು ಬಳಸುವುದರಿಂದ ಪ್ರಯೋಜನ ಇಲ್ಲ. ಆದರೆ ಪ್ರಾರ್ಥನೆ ಮತ್ತು ಪ್ರವಚನಗಳನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲು ಸಾಧ್ಯ ಎಂಬ ಕಾರಣಕ್ಕೆ ಹಿಂದಿನಿಂದಲೂ ಮೌಲ್ವಿಗಳು ಕನ್ನಡದಲ್ಲಿಯೇ ಪ್ರವಚನ ನೀಡುತ್ತಾ ಬಂದಿದ್ದಾರೆ’ ಎಂದು ಈಗಿನ ಮೌಲ್ವಿ ಮೊಹಮ್ಮದ್ ಪೀರನಸಾಬ್ ತಿಳಿಸಿದ್ದಾರೆ.

ಗ್ರಾಮದಲ್ಲಿ ಮುಸ್ಲಿಮೇತರರು ಕೂಡ ಕನ್ನಡದ ಪ್ರಾರ್ಥನೆಯನ್ನು ಆಲಿಸುತ್ತಾರೆ. ಭಾಷೆಗಿಂತಲೂ ಮುಖ್ಯವಾಗಿ ಧರ್ಮದ ತತ್ವ ಹಾಗೂ ಪ್ರಾರ್ಥನೆಯ ಮಹತ್ವವನ್ನು ಅರ್ಥಮಾಡಿಕೊಳ್ಳುವುದರಲ್ಲಿ ಇದರ ಉದ್ದೇಶವಿದೆ ಎಂದು ಅವರು ಹೇಳಿದ್ದಾರೆ.

ಕನ್ನಡದಲ್ಲಿಯೇ ಪ್ರಾರ್ಥನೆ ಸಲ್ಲಿಸುವುದಕ್ಕೆ ಮೌಲ್ವಿ ಅವರಿಗೆ ಅಂಜುಮನ್ ಇಸ್ಲಾಂ ಸಮಿತಿ ಅಧ್ಯಕ್ಷ ಹುಸೇನ್‌ಸಾಬ್ ಬಿಲ್ಲಲ್ಲಿ ಒಪ್ಪಿಗೆ ನೀಡಿದ್ದರು. ಜನರಿಗೆ ಪ್ರಾರ್ಥನೆ ಅರ್ಥವಾಗದೆ ಇದ್ದರೆ ಧರ್ಮವನ್ನು ಪಾಲಿಸಲು ಸಾಧ್ಯವಿಲ್ಲ. ಹೀಗಾಗಿ ಮಸೀದಿಗಳಲ್ಲಿ ಅರೇಬಿಕ್ ಮತ್ತು ಉರ್ದುವಿನಲ್ಲಿ ಪ್ರಾರ್ಥನೆ ಸಲ್ಲಿಸುವುದರಿಂದ ಯಾವುದೇ ಪ್ರಯೋಜನವಿಲ್ಲ. ಕನ್ನಡದ ಪ್ರಾರ್ಥನೆಯು ಬರಹ ರೂಪದಲ್ಲಿ ಇಲ್ಲದೆ ಇದ್ದರೂ, ಸಮುದಾಯಕ್ಕೆ ಅರ್ಥಮಾಡಿಕೊಳ್ಳಲು ಬಹಳ ಸುಲಭ ಎಂದು ತಿಳಿಸಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *