ಭೂಮಿಯೊಳಗಿನ ಕೆಲ ರಾಸಾಯನಿಕ ಪ್ರಕ್ರಿಯೆಗಳಿಂದ ಲಘು ಭೂಕಂಪನ ಸಂಭವಿಸುತ್ತಿದೆ -ತಜ್ಞರ ಅಧ್ಯಯನ
ಕಲಬುರಗಿ: ಕಲಬುರಗಿ ಮತ್ತು ವಿಜಯಪುರ ಜಿಲ್ಲೆಯ ಕೆಲ ಗ್ರಾಮಗಳಲ್ಲಿ ನಿರಂತರ ಭೂ ಕಂಪನವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಳೆದ ಕೆಲವು ದಿನಗಳಿಂದ ತಜ್ಞರು ಈ ಬಗ್ಗೆ ಅಧ್ಯಯನ ನಡೆಸುತ್ತಿದ್ದಾರೆ. ಸದ್ಯ ಈಗ ರಾಸಾಯನಿಕ ಪ್ರಕ್ರಿಯೆಗಳಿಂದಾಗಿ ಕಲಬುರಗಿ, ವಿಜಯಪುರ ಜಿಲ್ಲೆಗಳಲ್ಲಿ ಲಘು ಭೂಕಂಪವಾಗ್ತಿದೆ. ಸಣ್ಣ ಪ್ರಮಾಣದ ಭೂಕಂಪದಿಂದ ಆತಂಕಕ್ಕೊಳಗಾಗಬೇಕಿಲ್ಲ ಎಂದು ತಿಳಿಸಿದ್ದಾರೆ.
ನಿರಂತರ ಭೂ ಕಂಪನದಿಂದ ಕಲಬುರಗಿ ಮತ್ತು ವಿಜಯಪುರ ಜಿಲ್ಲೆಯ ಜನ ಆತಂಕಕ್ಕೆ ಒಳಗಾಗಿದ್ದರು. ಸದ್ಯ ತಜ್ಞರಿಂದ ಸಿಕ್ಕ ಮಾಹಿತಿ ಜನರನ್ನು ಆತಂಕದಿಂದ ಕೊಂಚ ದೂರ ಮಾಡಿದೆ. ಅಧ್ಯಯನ ನಡೆಸಿದ ತಜ್ಞರ ತಂಡ 5 ದಿನದಲ್ಲಿ ಸರ್ಕಾರಕ್ಕೆ ಈ ಬಗ್ಗೆ ವರದಿ ನೀಡಲಿದೆ. ಅಧ್ಯಯನ ನಡೆಸಿದ ತಜ್ಞರು, ರಾಸಾಯನಿಕ ಪ್ರಕ್ರಿಯೆಗಳಿಂದಾಗಿ ಕಲಬುರಗಿ, ವಿಜಯಪುರ ಜಿಲ್ಲೆಗಳಲ್ಲಿ ಲಘು ಭೂಕಂಪವಾಗ್ತಿದೆ. ಸಣ್ಣ ಪ್ರಮಾಣದ ಭೂಕಂಪದಿಂದ ಆತಂಕಕ್ಕೊಳಗಾಗಬೇಕಿಲ್ಲ. ರಾಜ್ಯದಲ್ಲಿ ಭಾರಿ ಪ್ರಮಾಣದ ಭೂಕಂಪ ಆಗುವುದಿಲ್ಲ. ಹೀಗಾಗಿ ರಾಜ್ಯದ ಜನರ ಭಯಪಡಬೇಕಾದ ಅಗತ್ಯವಿಲ್ಲ. ಜಗತ್ತಿನಲ್ಲಿ ಪ್ರತಿ ವರ್ಷ 20 ಲಕ್ಷ ಭೂಕಂಪಗಳು ಆಗುತ್ತವೆ ಎಂದು ಅಧ್ಯಯನ ಮಾಡಿದ ವಿಜ್ಞಾನಿಗಳ ತಂಡ ಮಾಹಿತಿ ನೀಡಿದೆ.
ಕಳೆದ ಕೆಲವು ದಿನಗಳಿಂದ ಭೂಕಂಪ ಪೀಡಿತ ಗ್ರಾಮಗಳಿಗೆ ಭೇಟಿ ನೀಡಿ ತಜ್ಞರು ಅಧ್ಯಯನ ನಡೆಸಿದ್ದು ಜನರನ್ನು ಆತಂಕದಿಂದ ಪಾರು ಮಾಡಿದ್ದಾರೆ. ತಜ್ಞರ ಮಾಹಿತಿಯಿಂದ ಜನ ನಿಟ್ಟುಸಿರುಬಿಟ್ಟಿದ್ದಾರೆ. ಸದ್ಯ 5 ದಿನದಲ್ಲಿ ರಾಜ್ಯ ವಿಪತ್ತು ನಿರ್ವಹಣಾ ತಜ್ಞರ ತಂಡ ಸರ್ಕಾರಕ್ಕೆ ವರದಿ ನೀಡಲಿದೆ.