Bitcoin| ರಾಹುಲ್, ಮಲ್ಯ ಟ್ವಿಟರ್ ಹ್ಯಾಕ್ ಮಾಡಿದ್ದ ಶ್ರೀಕಿ..!
* ಟ್ವೀಟ್ ಖಾತೆ ನಿರ್ವಹಿಸುತ್ತಿದ್ದ ಕಂಪನಿಯಿಂದ ಹಣ ಸುಲಿಗೆ
* ಪೊಲೀಸರ ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖ
* ಮತ್ತೊಮ್ಮೆ ಹಣಕ್ಕೆ ಪೀಡಿಸಿದಾಗ ದೂರು ನೀಡಿದ್ದ ದೆಹಲಿ ಕಂಪನಿ
ಬೆಂಗಳೂರು(ನ.12): ರಾಜ್ಯವನ್ನೇ ಬೆಚ್ಚಿಬೀಳಿಸಿರುವ ಬಿಟ್ಕಾಯಿನ್(Bitcoin) ಪ್ರಕರಣದ ರೂವಾರಿ ಮತ್ತು ಅಂತಾರಾಷ್ಟ್ರೀಯ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ(Shreeki), ರಾಷ್ಟ್ರದ ಗಣ್ಯ ವ್ಯಕ್ತಿಗಳ ಟ್ವಿಟರ್(Twitter) ಸೇರಿದಂತೆ ಸಾಮಾಜಿಕ ಜಾಲತಾಣಗಳ ಖಾತೆಗಳನ್ನು ಹ್ಯಾಕ್ ಮಾಡಿ ಬಿಟ್ಕಾಯಿನ್ ರೂಪದಲ್ಲಿ ಹಣ ಸಂಗ್ರಹಿಸುತ್ತಿದ್ದ ಎಂಬ ಮಾಹಿತಿ ಲಭ್ಯವಾಗಿದೆ.
ಕಾಂಗ್ರೆಸ್(Congress) ಮುಖಂಡ ರಾಹುಲ್ ಗಾಂಧಿ(Rahul Gandhi), ಉದ್ಯಮಿ ವಿಜಯ್ ಮಲ್ಯ(Vijay Mallya), ಪತ್ರಕರ್ತೆ ಬರ್ಖಾದತ್(Barkha Dutt) ಸೇರಿದಂತೆ ಹಲವರ ಸಾಮಾಜಿಕ ಜಾಲತಾಣಗಳನ್ನು(Social Media) ಶ್ರೀಕಿ ಹ್ಯಾಕ್(Hack) ಮಾಡಿದ್ದ ಎಂಬ ಅಂಶ ಪೊಲೀಸರ(Police) ಮುಂದೆ ಆತ ನೀಡಿರುವ ಹೇಳಿಕೆಯಿಂದ ಗೊತ್ತಾಗಿದೆ. ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಆರೋಪಿ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ವಿರುದ್ಧ ನ್ಯಾಯಾಲಯಕ್ಕೆ(Court) ದೋಷಾರೋಪ ಪಟ್ಟಿ ಸಲ್ಲಿಕೆಯಾಗಿದೆ. ಅದರಲ್ಲಿ ಶ್ರೀಕಿ ನೀಡಿರುವ ಹೇಳಿಕೆಯನ್ನು ದಾಖಲಿಸಲಾಗಿದೆ. ಶ್ರೀಕಿ ಹೇಳಿಕೆಯ ಸಾರಾಂಶದ ಮಾಹಿತಿಯು ‘ಕನ್ನಡಪ್ರಭ’ಕ್ಕೆ(Kananda Prabha) ಸಿಕ್ಕಿದೆ.
ಬಿಟ್ಕಾಯಿನ್ ಸೇರಿದಂತೆ ಕ್ರಿಪ್ಟೋ ಕರೆನ್ಸಿ ಹ್ಯಾಕ್ ಮಾಡುವಲ್ಲಿ ಪರಿಣತನಾಗಿರುವ ಶ್ರೀಕಿ, ಗಣ್ಯರ ಸಾಮಾಜಿಕ ಜಾಲತಾಣ ಹ್ಯಾಕ್ ಮಾಡಿರುವ ಬಗ್ಗೆ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾನೆ. ಹ್ಯಾಕ್ ಆಗಿರುವ ವ್ಯಕ್ತಿಗಳ ಹೆಸರನ್ನು ತಪ್ಪೊಪ್ಪಿಗೆ ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾನೆ. ರಾಹುಲ್ ಗಾಂಧಿ, ವಿಜಯ್ ಮಲ್ಯ, ಬರ್ಖಾದತ್ ಸೇರಿದಂತೆ ಇತರೆ ಗಣ್ಯರ ಟ್ವಿಟರ್ ಸೇರಿದಂತೆ ಸಾಮಾಜಿಕ ಜಾಲತಾಣ ಖಾತೆಗಳನ್ನು ಆತ ಹ್ಯಾಕ್ ಮಾಡಿರುವ ಬಗ್ಗೆ ಸಂಪೂರ್ಣ ಮಾಹಿತಿ ಆರೋಪಪಟ್ಟಿಯಲ್ಲಿ ದಾಖಲಾಗಿದೆ.
ದೆಹಲಿಯ ನೆಟ್4ಇಂಡಿಯಾ(Net4India) ಕಂಪನಿಯು ಸಾಮಾಜಿಕ ಜಾಲತಾಣಗಳ ಡೋಮೇನ್ ಮತ್ತು ಹೋಸ್ಟಿಂಗ್ ಸೇವೆ ನೀಡುತ್ತಿದ್ದು, ರಾಹುಲ್ಗಾಂಧಿ, ವಿಜಯ್ ಮಲ್ಯ, ಬರ್ಖಾದತ್ ಅವರ ಜಾಲತಾಣಗಳನ್ನು ನಿರ್ವಹಣೆ ಮಾಡುತ್ತಿತ್ತು. ಈ ಬಗ್ಗೆ ಮಾಹಿತಿ ಪಡೆದ ಶ್ರೀಕಿ ನೆಟ್4ಇಂಡಿಯಾದ ಸರ್ವರ್ ಅನ್ನು ಹ್ಯಾಕ್ ಮಾಡಿ ದತ್ತಾಂಶ ಕಳ್ಳತನ ಮಾಡಿದ್ದ. ತಾಂತ್ರಿಕವಾಗಿ ನೈಪುಣ್ಯತೆ ಗಳಿಸಿದ್ದ ಆರೋಪಿ ರಿಮೋಟ್ ಕೋಡ್ ಎಕ್ಸಿಕ್ಯೂಷನ್ ತಂತ್ರಜ್ಞಾನದ ಮೂಲಕ ಕಳ್ಳತನ ಮಾಡಿದ್ದ. 2016ರ ಡಿಸೆಂಬರ್ ತಿಂಗಳಲ್ಲಿ ದತ್ತಾಂಶವನ್ನು ಹ್ಯಾಕ್ ಮಾಡಿದ್ದ. ರಾಹುಲ್ ಗಾಂಧಿ, ವಿಜಯ್ ಮಲ್ಯ ಮತ್ತು ಬರ್ಖಾದತ್ ಜಾಲತಾಣಗಳ ಡ್ಯಾಶ್ಬೋಡ್ಗಳನ್ನು ಚಾಕಚಕ್ಯತೆಯಿಂದ ತನ್ನ ಸುಪರ್ದಿಗೆ ತೆಗೆದುಕೊಂಡಿದ್ದಾಗಿ ಹೇಳಿಕೆ ನೀಡಿದ್ದಾನೆ.
ಗಣ್ಯರ ಟ್ವಿಟರ್ ಖಾತೆಯ ಸಂಪೂರ್ಣ ಮಾಹಿತಿ ಮತ್ತು ಡಿಎನ್ಎಸ್ ವಿಳಾಸದ ದತ್ತಾಂಶವನ್ನು ಕಳ್ಳತನ ಮಾಡಿದ್ದ. ಅದನ್ನೇ ಬಳಸಿಕೊಂಡು ಡ್ಯಾಶ್ಬೋರ್ಡ್ ಮತ್ತು ಟ್ವಿಟರ್ ಖಾತೆಗಳ ಪಾಸ್ವರ್ಡ್ ಬದಲಾಯಿಸಿದ್ದ. ತಾನು ಅಂದುಕೊಂಡಂತೆ ದತ್ತಾಂಶಗಳನ್ನು ಕಳ್ಳತನ ಮಾಡಿದ ಬಳಿಕ ಬಿಟ್ಕಾಯಿನ್ ರೂಪದಲ್ಲಿ ಹಣ ನೀಡುವಂತೆ ನೆಟ್4ಇಂಡಿಯಾಗೆ ಸಂದೇಶವನ್ನು ರವಾನಿಸಿದ್ದ. ಆರೋಪಿ ಶ್ರೀಕೃಷ್ಣ, ಲಿಜಿಯೊನ್ ಹೆಸರಿನಿಂದ ಗುರುತಿಸಿಕೊಂಡು ಸ್ಕೈಪೇ ಮೂಲಕ ಸಂದೇಶ ಕಳುಹಿಸಿದ್ದ. ಸಂಸ್ಥೆಗೆ ಬೆದರಿಕೆ ಹಾಕಿ ಬಿಟ್ಕಾಯಿನ್ ರೂಪದಲ್ಲಿ ಹಣ ನೀಡುವಂತೆ ಒತ್ತಾಯ ಮಾಡಿದ್ದ. ಒಂದು ವೇಳೆ ಹಣ ನೀಡದಿದ್ದರೆ ಎಲ್ಲಾ ದತ್ತಾಂಶಗಳನ್ನು ಅಳಿಸಿ ಹಾಕುವ ಬಗ್ಗೆ ಬೆದರಿಕೆವೊಡ್ಡಿದ್ದ ಎಂಬ ಅಂಶವು ಆರೋಪಪಟ್ಟಿಯಲ್ಲಿ ದಾಖಲಾಗಿದೆ.
ಬೆದರಿಕೆ ಹಾಕಿದ್ದ ಶ್ರೀಕಿಗೆ ಮೊದಲ ಬಾರಿ ನೆಟ್4ಇಂಡಿಯಾ ಹಣ ನೀಡಿತ್ತು. ಕಂಪನಿಯ ಅಧಿಕಾರಿಗಳು ಹಣ ನೀಡಿರುವ ಬಗ್ಗೆಯೂ ಶ್ರೀಕಿ ಹೇಳಿಕೆಯಲ್ಲಿ ದಾಖಲಾಗಿದೆ. ಮತ್ತೆ ಹಣಕ್ಕೆ ಬೇಡಿಕೆ ಇಟ್ಟಾಗ ನೆಟ್4 ಇಂಡಿಯಾ ಕಂಪನಿಯ ಅಧಿಕಾರಿಗಳು ದೆಹಲಿಯ ಆರ್ಥಿಕ ಅಪರಾಧ ದಳಕ್ಕೆ ದೂರು ನೀಡಿದ್ದರು. ಅಧಿಕಾರಿಗಳಿಗೆ ಆರೋಪಿ ಶ್ರೀಕಿ, ತನ್ನ ಹೆಸರು ಲಿಜಿಯೊನ್ ಎಂದು ಹೇಳಿದ್ದರಿಂದ ಅದೇ ಹೆಸರಲ್ಲಿ ದೂರು ದಾಖಲಾಗಿತ್ತು. ಹೀಗಾಗಿ ಪ್ರಕರಣದಲ್ಲಿ ಶ್ರೀಕೃಷ್ಣನ ಯಾವುದೇ ಮಾಹಿತಿಯು ಇರಲಿಲ್ಲ. ಗಣ್ಯರ ಸಾಮಾಜಿಕ ಜಾಲತಾಣಗಳನ್ನು ನೆಟ್4ಇಂಡಿಯಾ ಕಂಪನಿ ನಿರ್ವಹಣೆ ಮಾಡುತ್ತಿದ್ದರಿಂದ ತನ್ನ ಕಂಪನಿಯ ವರ್ಚಸ್ಸನ್ನು ಉಳಿಸಿಕೊಳ್ಳಲು ಮೊದಲು ಹಣ ನೀಡಿತ್ತು ಎನ್ನಲಾಗಿದೆ. ಕೇವಲ ನೆಟ್4ಇಂಡಿಯಾ ಕಂಪನಿ ಮಾತ್ರವಲ್ಲದೇ, ಎನ್ಡಿಟಿವಿ ವಾಹಿನಿಯ(NDTV Channel) ಜಾಲತಾಣವನ್ನು ಹ್ಯಾಕ್ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಎಂಬ ಮಾಹಿತಿಯು ದೋಷಾರೋಪಪಟ್ಟಿಯಲ್ಲಿ ದಾಖಲಾಗಿದೆ.
ಎನ್ಡಿಟಿವಿ ಸಹ ನೆಟ್4ಇಂಡಿಯಾ ಕಂಪನಿ ಮೂಲಕ ಜಾಲತಾಣ ನಿರ್ವಹಣೆ ಮಾಡುತಿತ್ತು. ನೆಟ್4ಇಂಡಿಯಾ ಕಂಪನಿ ಹಲವು ಸಂಸ್ಥೆಗಳ, ಗಣ್ಯರ ಟ್ವಿಟರ್ ಖಾತೆ ಸೇರಿದಂತೆ ಸಾಮಾಜಿಕ ಜಾಲಜಾಣ ನಿರ್ವಹಣೆ ಮಾಡುತ್ತಿದ್ದರಿಂದ ಆ ಕಂಪನಿಯ ಸರ್ವರ್ ಹ್ಯಾಕ್ ಮಾಡಿದ್ದ. ಎಲ್ಲ ಜಾಲತಾಣಗಳ ಯೂಸರ್ನೇಮ್ ಮತ್ತು ಪಾಸ್ವರ್ಡ್ಗಳನ್ನು ಬದಲಿಸಿ ಸಂದೇಶವನ್ನು ಕಳುಹಿಸುತ್ತಿದ್ದ. ಬೆದರಿಕೆ ಹಾಕಿ ಹಣ ಗಳಿಸುತ್ತಿದ್ದ. ಇದರಿಂದ ಕೋಟ್ಯಂತರ ರು. ಗಳಿಸಿದ್ದ ಎಂದು ಹೇಳಲಾಗಿದೆ.