ಮತ್ತೆ ಕೊರೊನಾ ಭೀತಿ; ಖ್ಯಾತ ಹಿರಿಯ ಕಿರುತೆರೆ ನಟಿ ಕೊವಿಡ್ಗೆ ಬಲಿ
ಈ ವರ್ಷದ ಆರಂಭದಲ್ಲಿ ಕಾಣಿಸಿಕೊಂಡಿದ್ದ ಕೊವಿಡ್ ಎರಡನೇ ಅಲೆಯ ಸಂದರ್ಭದಲ್ಲಿ ಸಾಕಷ್ಟು ಸೆಲೆಬ್ರಿಟಿಗಳು ಕೊರೊನಾಗೆ ಬಲಿಯಾಗಿದ್ದರು. ಈಗ ಕೊವಿಡ್ ಎರಡನೇ ಅಲೆ ತಣ್ಣಗಾಗಿದೆ. ಆದಾಗ್ಯೂ ಅಲ್ಲೊಂದು ಇಲ್ಲೊಂದು ಸಾವು ಕೊರೊನಾದಿಂದ ಸಂಭವಿಸುತ್ತಿದೆ. ಈಗ ಕಿರುತೆರೆಯ ಹಿರಿಯ ನಟಿ ಕೊವಿಡ್ಗೆ ಬಲಿಯಾಗಿದ್ದಾರೆ. ಮಾರಕ ವೈರಸ್ನಿಂದ ಅವರು ಮೃತಪಟ್ಟಿರುವ ವಿಚಾರ ಸಾಕಷ್ಟು ಮಂದಿಗೆ ನೋವು ತರಿಸಿದೆ. ಈ ಬಗ್ಗೆ ಅವರಿಗೆ ಶ್ರದ್ಧಾಂಜಲಿ ಸಲ್ಲಿಕೆ ಮಾಡಲಾಗುತ್ತಿದೆ.
‘ಅನುಪಮಾ’ ಧಾರಾವಾಹಿಯಲ್ಲಿ ಅನುಪಮಾ ತಾಯಿ ಆಗಿ ಮಾಧವಿ ಗೋಗಟೆ ಕಾಣಿಸಿಕೊಂಡಿದ್ದರು. ಅದ್ಭುತ ನಟನೆ ಮೂಲಕ ಮನೆ ಮಾತಾಗಿದ್ದರು. ಕೆಲ ದಿನಗಳ ಹಿಂದೆ ಅವರಿಗೆ ಕೊವಿಡ್ ಕಾಣಿಸಿಕೊಂಡಿತ್ತು. ಹೀಗಾಗಿ, ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ಅವರಿಗೆ 58 ವರ್ಷ ವಯಸ್ಸಾಗಿತ್ತು.
ಮಾಧವಿ ಅವರನ್ನು ಆಸ್ಪತ್ರೆಗೆ ದಾಖಲು ಮಾಡಿ ಸೂಕ್ತ ರೀತಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಅವರು ಕೊವಿಡ್ನಿಂದ ಚೇತರಿಸಿಕೊಳ್ಳುತ್ತಿದ್ದರು. ಆದರೆ, ಕಳೆದ ಕೆಲ ದಿನಗಳಿಂದ ಅವರ ಪರಿಸ್ಥಿತಿ ತುಂಬಾನೇ ಬಿಗಡಾಯಿಸಿತ್ತು. ಕೊನೆಗೂ ಅವರನ್ನು ಉಳಿಸಿಕೊಳ್ಳೋಕೆ ಸಾಧ್ಯವಾಗಿಲ್ಲ.
‘ಮಾಧವಿ ನೀವು ನನ್ನ ಆತ್ಮೀಯ ಸ್ನೇಹಿತೆ. ನೀವು ನಮ್ಮನ್ನು ಬಿಟ್ಟು ಹೋಗಿದ್ದೀರಿ ಎಂಬುದನ್ನು ನಂಬಲು ಸಾಧ್ಯವಾಗುತ್ತಿಲ್ಲ. ನಿಮ್ಮದು ಇನ್ನೂ ಸಣ್ಣ ವಯಸ್ಸಾಗಿತ್ತು. ನೀವು ನನ್ನ ಮೆಸೇಜ್ಗೆ ಉತ್ತರಿಸದಿದ್ದಾಗ ನಾನು ನನ್ನ ಮೊಬೈಲ್ ತೆಗೆದುಕೊಂಡು ನಿಮಗೆ ಕರೆ ಮಾಡಬೇಕಿತ್ತು. ನಾನೀಗ ಪಶ್ಚಾತ್ತಾಪ ಪಡಲಷ್ಟೇ ಸಾಧ್ಯ’ ಎಂದು ನೀಲು ಕೊಹ್ಲಿ ಬರೆದುಕೊಂಡಿದ್ದಾರೆ. ಇದಲ್ಲದೆ, ಸಾಕಷ್ಟು ಸೆಲೆಬ್ರಿಟಿಗಳು ಅವರ ಸಾವಿಗೆ ಕಂಬನಿ ಮಿಡಿದಿದ್ದಾರೆ.