Jog Falls: ರಾಜ್ಯಪಾಲರ ಜೋಗ ವೀಕ್ಷಣೆಗಾಗಿ ನದಿಗೆ ನೀರು ಬಿಟ್ಟ ಅಧಿಕಾರಿಗಳು: ಆದ್ರೆ ಅದನ್ನ ಅವರು ನೋಡಲೇ ಇಲ್ಲ
ಬೆಂಗಳೂರು: ತಮ್ಮ ಪ್ರದೇಶ ಅಥವಾ ಕಚೇರಿಗೆ ರಾಜಕಾರಣಿಗಳು, ಸಚಿವರು (Ministers) ಬರುತ್ತಾರೆ ಅಂದ್ರೆ ಅಧಿಕಾರಿಗಳು (Officers)ಅವರನ್ನು ಮೆಚ್ಚಿಸಲು ಪ್ರಯತ್ನಿಸುತ್ತಾರೆ. ಎಷ್ಟೋ ವರ್ಷಗಳಿಂದ ಗುಂಡಿ ಬಿದ್ದಿರುವ ರಸ್ತೆಗಳು (Potholes) ಸಹ ಅಂದು ತಾತ್ಜಾಲಿಕವಾಗಿ ಅಂದಗೊಂಡಿರುತ್ತವೆ. ಇದೀಗ ರಾಜ್ಯಪಾಲರನ್ನು (Governor) ಮೆಚ್ಚಿಸೋದಕ್ಕೆ :ಕರ್ನಾಟಕ ಪವರ್ ಕಾರ್ಪೊರೇಷನ್ ಲಿಮಿಟೆಡ್ (ಕೆಪಿಸಿಎಲ್) ಲಿಂಗನಮಕ್ಕಿ ಅಣೆಕಟ್ಟಿನಿಂದ ಸುಮಾರು 500 ಕ್ಯೂಸೆಕ್ ನೀರು ಬಿಡುಗಡೆ ಮಾಡಿತ್ತು. ಕಾರಣ ಗುರುವಾರ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ (Thawar Chand Gehlot) ಜೋಗ ಜಲಪಾತ (Jog Falls) ವೀಕ್ಷಣೆ ಮಾಡೋದಾಗಿ ಹೇಳಿದ್ದರು. ಆದ್ರೆ ವಿಚಿತ್ರ ಅಂದ್ರೆ ರಾಜ್ಯಪಾಲರು ಆ ನೀರು ಜಲಪಾತದ ಬಳಿ ಬರುವ ವೇಳೆಗಾಗಲೇ ಅಲ್ಲಿಂದ ನಿರ್ಗಮಿಸಿದ್ದರು.
ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಪಾಲ್ಗೊಳ್ಳಲು ಗೆಹ್ಲೋಟ್ ಅವರು ಬುಧವಾರ ಶಿವಮೊಗ್ಗಕ್ಕೆ ತೆರಳಿದ್ದರು. ಜಲಪಾತದ ಸಮೀಪದಲ್ಲಿರುವ ಬ್ರಿಟಿಷ್ ಬಂಗಲೆ ಎಂದು ಜನಪ್ರಿಯವಾಗಿರುವ ಪ್ರವಾಸಿ ಮಂದಿರದಲ್ಲಿಯೇ ರಾತ್ರಿ ಉಳಿದುಕೊಂಡಿದ್ದರು. ಘಟಿಕೋತ್ಸವಕ್ಕೆ ತೆರಳುವ ಮುನ್ನ ಜೋಗ ಜಲಪಾತ ವೀಕ್ಷಣೆ ಮಾಡೋದಾಗಿ ರಾಜ್ಯಪಾಲರು ಹೇಳಿದ್ದರು.
500 ಕ್ಯೂಸೆಕ್ ನೀರು ಬಿಡಲು ಸೂಚನೆ
ಗುರುವಾರ ಬೆಳಗ್ಗೆ ನದಿಯಲ್ಲಿ ನೀರು ಹಚ್ಚು ನೀರು ಇರದ ಕಾರಣ ಅಧಿಕಾರಿಗಳು ಲಿಂಗನಮಕ್ಕಿ ಜಲಾಶಯದಿಂದ 500 ಕ್ಯೂಸೆಕ್ ನೀರು ಬಿಡುಗಡೆ ಮಾಡುವಂತೆ ಮೌಖಿಕ ಸೂಚನೆ ನೀಡಿದ್ದರು ಎನ್ನಲಾಗಿದೆ. ಬೆಳಗ್ಗೆ 8 ಗಂಟೆಗೆ ರಾಜ್ಯಪಾಲರು ಜೋಗ ಫಾಲ್ಸ್ ಬಳಿ ಆಗಮಿಸಲಿದ್ದು, 6 ಗಂಟೆಗೆ ನೀರು ಹೊರ ಬಿಡಲು ಸೂಚನೆ ನೀಡಲಾಗಿತ್ತಂತೆ.
ನೀರು ಫಾಲ್ಸ್ ತಲುಪುವ ರಾಜ್ಯಪಾಲರ ನಿರ್ಗಮನ
ವಿಶ್ವವಿದ್ಯಾನಿಲಯವು 105 ಕಿಮೀ ದೂರದಲ್ಲಿ ಇರುವುದರಿಂದ ರಾಜ್ಯಪಾಲರು ಬೆಳಗ್ಗೆ ಬೇಗ ಅಂದ್ರೆ 7.30ಕ್ಕೆ ಜೋಗ್ ಫಾಲ್ಸ್ ಬಳಿ ಆಗಮಿಸಿ ವೀಕ್ಷಣೆ ಮಾಡಿದ್ದಾರೆ. ದೂರದ ಪ್ರಯಾಣ ಆಗಿರೋದರಿಂದ ಹೆಚ್ಚು ಸಮಯ ಕಳೆಯದೇ ಅಲ್ಲಿಂದ ಹೊರಟಿದ್ದಾರೆ. ಜಲಾಶಯದಿಂದ ಹೊರ ಬಿಡಲಾಗಿದ್ದ ನೀರು ಜೋಗ ಫಾಲ್ಸ್ ತಲುಪುವ ವೇಳೆಗಾಗಲೇ ರಾಜ್ಯಪಾಲರು ವಿಶ್ವವಿದ್ತಾನಿಲಯದತ್ತ ಹೊರಟಿದ್ದರು.
ಯಾವುದೇ ಸೂಚನೆ ನೀಡದೇ ಲಿಂಗನಮಕ್ಕಿ ಜಲಾಶಯದಿಂದ ನೀರು ಬಿಟ್ಟರೆ ಕೆಳಹದಿಯಲ್ಲಿ ವಾಸಿಸುವ ಜನರು ಅಪಾಯಕ್ಕೆ ಸಿಲುಕುವ ಸಾಧ್ಯತೆ ಇರುತ್ತದೆ. ನದಿಗೆ ನೀರು ಬಿಡಲು ಯಾವುದೇ ಉನ್ನತ ಅಧಿಕಾರಿಗಳ ಅನಮತಿ ಸಹ ಪಡೆದಿರಲಿಲ್ಲ ಎಂದು ವರದಿಯಾಗಿದೆ.
ಜಿಲ್ಲಾಧಿಕಾರಿಗಳ ಪ್ರತಿಕ್ರಿಯೆ
ಶಿವಮೊಗ್ಗ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರನ್ನು ಕೇಳಿದ್ರೆ, ಕೇವಲ ಸಣ್ಣ ಪ್ರಮಾಣದಲ್ಲಿ ಮಾತ್ರ ನೀರು ಬಿಡಲಾಗಿದೆ. ವಿಷಯವನ್ನು ದೊಡ್ಡದು ಮಾಡೋದು ಅವಶ್ಯವಿಲ್ಲ ಎಂದು ಹೇಳಿದ್ದಾರೆ. ಇತ್ತ ಅಧಿಕಾರಿಗಳು ಸಹ ಇದನ್ನೇ ಪುನರುಚ್ಚಿಸಿದ್ದಾರೆ.
ಇನ್ನು ರಾಜ್ಯಪಾಲರು ಜೋಗ ಜಲಪಾತ ವೀಕ್ಷಣೆ ಮಾಡಿದ ಮಾಹಿತಿಯನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದರು. ಜೊತೆಗೆ ವಿಡಿಯೋ ಸಹ ಶೇರ್ ಮಾಡಿಕೊಂಡಿದ್ದರು.