ಕೊರೊನಾ ಸ್ಫೋಟ: ಚಿಕ್ಕಮಗಳೂರು ಶಾಲೆ ಸೀಲ್ ಡೌನ್, ಈ ಕಡೆ ಬೆಂಗಳೂರು ಕಾನ್ವೆಂಟ್ ಮಕ್ಕಳು 4 ದಿನ ಹೈದರಾಬಾದ್ ಪ್ರವಾಸಕ್ಕೆ!
ಚಿಕ್ಕಮಗಳೂರು: ಜಿಲ್ಲೆಯ ಮತ್ತೊಂದು ಶಾಲೆಯಲ್ಲಿ ಕೊರೊನಾ ಸೋಂಕು ಸ್ಫೋಟವಾಗಿದೆ. ಶಿಕ್ಷಕ ಸೇರಿ 11 ಜನರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಒಂದು ವಾರ ಕಾಲ ಶಾಲೆ ಸೀಲ್ ಡೌನ್ ಮಾಡಿ ಜಿಲ್ಲಾಧಿಕಾರಿ ಕೆ.ಎನ್. ರಮೇಶ್ ಆದೇಶ ಹೊರಡಿಸಿದ್ದಾರೆ. N R ಪುರ ತಾಲೂಕಿನ ಜೀವನ್ ಜ್ಯೋತಿ ಖಾಸಗಿ ಶಾಲೆಯಲ್ಲಿ ಸೋಂಕು ಕಾಣಿಸಿಕೊಂಡಿದೆ. ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಮನೆಯಲ್ಲೇ ಐಸೊಲೇಷನ್ ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ವಾರದ ಹಿಂದೆ ನವೋದಯ ಶಾಲೆಯ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಕೊಪ್ಪ ತಾಲ್ಲೂಕಿನ ಸೀಗೋಡಿನ ವಸತಿ ಶಾಲೆಯಲ್ಲಿ ಕೊರೊನಾ ಹಬ್ಬಿತ್ತು.
ಕೊರೊನಾ ಆತಂಕದ ಮಧ್ಯೆ ವಾರ್ಷಿಕ ಪ್ರವಾಸಕ್ಕೆ ತೆರಳಿದ 130 ಮಕ್ಕಳು
ಬೆಂಗಳೂರು: ಕೊರೊನಾ ಆತಂಕದ ಮಧ್ಯೆ ಖಾಸಗಿ ಶಾಲೆಯೊಂದು ವಿದ್ಯಾರ್ಥಿಗಳನ್ನು ಪ್ರವಾಸಕ್ಕೆ ಕರೆದೊಯ್ದು ಯಡವಟ್ಟು ಮಾಡಿದೆ. ಬೆಂಗಳೂರಿನ ಜಾಲಹಳ್ಳಿಯ ಕ್ಲೂನಿ ಕಾನ್ವೆಂಟ್ ಶಾಲೆ ಸುಮಾರು 130 ಮಕ್ಕಳನ್ನು ಪ್ರವಾಸಕ್ಕೆ ಕರೆದೊಯ್ದು, ಆತಂಕ ತಂದಿಟ್ಟಿದೆ.
ಶಾಲಾ ಮಕ್ಕಳು ನಾಲ್ಕು ದಿನಗಳ ಹೈದರಾಬಾದ್ ಪ್ರವಾಸಕ್ಕೆ:
ಪ್ರವಾಸ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನ ಆಯೋಜನೆ ಮಾಡದಂತೆ ಶಾಲೆಗಳಿಗೆ ಆದೇಶ ಇದ್ದರೂ, ಒಮಿಕ್ರಾನ್ ವೈರಸ್ ಆತಂಕದ ನಡುವೆಯೂ ಜಾಲಹಳ್ಳಿಯ ಕ್ಲೂನಿ ಕಾನ್ವೆಂಟ್ ಶಾಲೆ ಮಕ್ಕಳ ಜೊತೆ ಚೆಲ್ಲಾಟವಾಡುತ್ತಿದೆ. ಒತ್ತಾಯ ಮಾಡಿ ಮಕ್ಕಳನ್ನ ಪ್ರವಾಸಕ್ಕೆ ಕರೆದುಕೊಂಡು ಹೋಗಿರುವ ಜಾಲಹಳ್ಳಿಯಲ್ಲಿರುವ ಪ್ರತಿಷ್ಠಿತ ಕ್ಲೂನಿ ಕಾನ್ವೆಂಟ್ ಶಾಲೆ ಸುಮಾರು 130 ವಿದ್ಯಾರ್ಥಿಗಳನ್ನ ಪ್ರವಾಸಕ್ಕೆ ಕರೆದುಕೊಂಡು ಹೋಗಿದೆ. ಪ್ರತಿ ವಿದ್ಯಾರ್ಥಿಯಿಂದ 10 ಸಾವಿರ ಹಣ ವಸೂಲಿ ಮಾಡಿದ್ದು, ಶಾಲಾ ಮಕ್ಕಳನ್ನು ನಾಲ್ಕು ದಿನಗಳ ಹೈದರಾಬಾದ್ ಪ್ರವಾಸಕ್ಕೆ ಕರೆದುಕೊಂಡು ಹೋಗಿದೆ.
ಸರ್ಕಾರದ ಕೊವಿಡ್ ಮಾರ್ಗಸೂಚಿ ಗಾಳಿಗೆ ತೂರಿ ಕ್ಲೂನಿ ಕಾನ್ವೆಂಟ್ ಶಾಲೆಯು ಮಕ್ಕಳನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗಿರುವ ಕ್ಲೂನಿ ಕಾನ್ವೆಂಟ್ ಶಾಲೆ ಮೇಲೆ ಬೆಂಗಳೂರು ಉತ್ತರ ತಾಲೂಕು ಬಿಇಒ ಕಮಲಾಕರ್ ಟಿ.ಎನ್. ಅವರು ಕ್ರಮಕ್ಕೆ ಮುಂದಾಗಿದ್ದಾರೆ. ಈ ಮಧ್ಯೆ, ಶಾಲೆ ಪ್ರಾಂಶುಪಾಲರು ಪ್ರವಾಸಕ್ಕೆ ಹೋಗಿರುವುದಾಗಿ ತಪ್ಪು ಒಪ್ಪಿಕೊಂಡಿದ್ದಾರೆ.
ಒಮಿಕ್ರಾನ್ ವೈರಸ್ ಭೀತಿ ನಡುವೆ ಶಾಲೆ ಆಡಳಿತ ಮಂಡಳಿ ವಿದ್ಯಾರ್ಥಿಗಳನ್ನ ಪ್ರವಾಸಕ್ಕೆ ಕರೆದುಕೊಂಡು ಹೋಗಿದ್ದಾರೆ. ಸರ್ಕಾರದ ಆದೇಶ ಉಲ್ಲಂಘನೆ ಮಾಡಿ ವಿದ್ಯಾರ್ಥಿಗಳನ್ನ ಪ್ರವಾಸಕ್ಕೆ ಕರೆದುಕೊಂಡು ಹೋಗಿರುವುದು ತಪ್ಪು. ಸಿಆರ್ ಪಿ ಗೆ ಈ ಕುರಿತು ವರದಿ ಕೊಡುವಂತೆ ಸೂಚನೆ ನೀಡಿದ್ದೇನೆ. ವರದಿ ಬಂದ ನಂತರ ಶಾಲೆ ಮೇಲೆ ಕಠಿಣ ಕ್ರಮಕ್ಕೆ ಶಿಫಾರಸ್ಸು ಮಾಡುವುದಾಗಿ ಬಿಇಒ ಕಮಲಾಕರ್ ಟಿವಿ 9 ಗೆ ತಿಳಿಸಿದ್ದಾರೆ.
ಗಡಿ ಜಿಲ್ಲೆಯಲ್ಲಿ ಕೊರೊನಾ ಮುಂಜಾಗ್ರತೆ ಗಾಳಿಗೆ ತೂರಿದ ಗ್ರಾಮಸ್ಥರು:
ವಿಜಯಪುರ: ಕೊರೊನಾ ಮೂರನೇ ಅಲೆಯ ಭೀತಿ ಹಾಗೂ ಮಹಾರಾಷ್ಟ್ರದಲ್ಲಿ ಒಮಿಕ್ರಾನ್ ಕಾಟದ ನಡುವೆ ಗಡಿ ಜಿಲ್ಲೆಯಾದ ವಿಜಯಪುರದಲ್ಲಿ ಮುಂಜಾಗ್ರತಾ ಕ್ರಮಗಳನ್ನು ಗ್ರಾಮಸ್ಥರು ಗಾಳಿಗೆ ತೂರಿದ್ದಾರೆ. ವಿಜಯಪುರ ಜಿಲ್ಲೆ ಚಡಚಣ ತಾಲೂಕಿನ ಬರಡೋಲ ಗ್ರಾಮದಲ್ಲಿ ಮಲ್ಲಿಕಾರ್ಜುನ ಜಾತ್ರೆಯ ವೇಳೆ ಸಾವಿರಾರು ಜನರ ಸಮ್ಮುಖದಲ್ಲಿ ನಿನ್ನೆ ಅದ್ದೂರಿ ಜಾತ್ರೆ ನಡೆದಿದೆ. ಜಾತ್ರೆಗೆ ಮಹಾರಾಷ್ಟ್ರದಿಂದಲೂ ಭಕ್ತರು ಆಗಮಿಸಿದ್ದರು. ಮಾಸ್ಕ್ ಹಾಕದೇ, ಸಾಮಾಜಿಕ ಅಂತರವಿಲ್ಲದೆ ಜಾತ್ರೆಯಲ್ಲಿ ಜನರು ಪಾಲ್ಗೊಂಡಿದ್ದರು.