ಸೋಮವಾರದಿಂದ 3 ದಿನ ಸಿಎಂ ಪ್ರವಾಸ; ಕುಟುಂಬ ಸಮೇತರಾಗಿ ಕಾಶಿ, ಅಯೋಧ್ಯೆಗೆ ಭೇಟಿ ನೀಡಲಿರುವ ಮುಖ್ಯಮಂತ್ರಿ ಬೊಮ್ಮಾಯಿ
ಬೆಂಗಳೂರು: ಸೋಮವಾರದಿಂದ ಅಂದರೆ ಡಿಸೆಂಬರ್ 13 ರಿಂದ 3 ದಿನಗಳ ಕಾಲ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಕುಟುಂಬ ಸಮೇತರಾಗಿ ಉತ್ತರ ಪ್ರದೇಶಕ್ಕೆ ಪ್ರವಾಸಕ್ಕೆ ತೆರಳಲಿದ್ದಾರೆ. ಸೋಮವಾರ ಅಧಿವೇಶನದಲ್ಲಿ ಭಾಗವಹಿಸಿ ಬಳಿಕ, ಕಾಶಿ, ಅಯೋಧ್ಯೆಗೆ ಸಿಎಂ ಬೊಮ್ಮಾಯಿ ಭೇಟಿ ನೀಡಲಿದ್ದಾರೆ. ವಿಶೇಷ ವಿಮಾನದ ಮೂಲಕ ವಾರಾಣಸಿಗೆ ತೆರಳುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೋಮವಾರ ನಡೆಯಲಿರುವ ಗಂಗಾ ಆರತಿಯಲ್ಲಿ ಭಾಗಿಯಾಗಲಿದ್ದಾರೆ.
ಮಂಗಳವಾರ ಸಾರನಾಥಕ್ಕೆ ಭೇಟಿ ನೀಡಲಿರುವ ಸಿಎಂ ಬೊಮ್ಮಾಯಿ, ಸಾರನಾಥದಲ್ಲಿರುವ ಬೌದ್ಧ ಧರ್ಮದ ಪವಿತ್ರ ಸ್ಥಳಕ್ಕೆ ತೆರಳಲಿದ್ದು, ಬಳಿಕ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಸ್ಮಾರಕಕ್ಕೆ ಭೇಟಿ ನೀಡಲಿದ್ದಾರೆ. ಬುಧವಾರ ಅಯೋಧ್ಯೆಗೆ ತೆರಳಿ ರಾಮಜನ್ಮಭೂಮಿಗೆ ಭೇಟಿ ನೀಡಲಿದ್ದಾರೆ. ಕೇಂದ್ರದ ಬಿಜೆಪಿ ಪಕ್ಷದ ಸಿಎಂ ಮತ್ತು ಡಿಸಿಎಂಗಳಿಗಾಗಿ ಈ ಯಾತ್ರೆ ಆಯೋಜನೆ ಮಾಡಿದ್ದಾರೆ.
ಒಂದು ದಿನ ಮಾತ್ರ ಪ್ರವಾಸ ಮಾಡುತ್ತೇನೆ: ಬಸವರಾಜ ಬೊಮ್ಮಾಯಿ
ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಸಮ್ಮೇಳನವಿರುವ ಹಿನ್ನೆಲೆ ಒಂದು ದಿನ ಮಾತ್ರ ಉತ್ತರ ಪ್ರದೇಶ ಪ್ರವಾಸ ಮಾಡುತ್ತೇನೆ. ಸಮ್ಮೇಳನದಲ್ಲಿ ಭಾಗಿಯಾಗುವುದಕ್ಕೆ ಹೋಗುತ್ತಿದ್ದೇನೆ ಎಂದು ಬೆಂಗಳೂರಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ.
ಬಳಿಕ ವಿಮಾನ ನಿಲ್ದಾಣದಲ್ಲಿ ಕೊವಿಡ್ ಟೆಸ್ಟ್ ನೆಪದಲ್ಲಿ ವಸೂಲಿ ಬಗ್ಗೆ ಡಿ.ಕೆ. ಶಿವಕುಮಾರ್ ಅವರ ಆರೋಪದ ವಿಚಾರವಾಗಿ ಬೆಂಗಳೂರಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿದ್ದು, ಬೆಳಗಾವಿ ಅಧಿವೇಶನಕ್ಕೆ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕೊವಿಡ್ ಟೆಸ್ಟ್‌ಗೆ 500 ರೂಪಾಯಿ ಶುಲ್ಕ ವಿಧಿಸಲಾಗುತ್ತಿದೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮಲ್ಲಿ ಕಡಿಮೆ ಶುಲ್ಕವಿದೆ ಎಂದು ಹೇಳಿದ್ದಾರೆ.
ಕೊವಿಡ್ ಟೆಸ್ಟ್ ಆಗಲು ವಿಶೇಷವಾದ ಯಂತ್ರೋಪಕರಣಗಳಿವೆ. ನಮ್ಮ ರಾಜ್ಯದಲ್ಲಿ ಟೆಸ್ಟ್ ದರ ಕಡಿಮೆಯಿದೆ. ತಮಿಳುನಾಡು ಸೇರಿದಂತೆ ಬೇರೆ ರಾಜ್ಯಗಳಲ್ಲಿ ದರ ಹೆಚ್ಚಾಗಿದೆ. ಆದ್ದರಿಂದ ಇದೊಂದು ತಂತ್ರಜ್ಞಾನಕ್ಕೆ ಸಂಬಂಧಿಸಿದ ವಿಚಾರ ಎಂದು ಟೆಸ್ಟ್‌ಗೆ 3500 ಪಡೆಯುವ ವಿಚಾರವನ್ನು ಸಿಎಂ ಬಸವರಾಜ ಬೊಮ್ಮಾಯಿ ಸಮರ್ಥಿಸಿಕೊಂಡಿದ್ದಾರೆ.
ಮತಾಂತರ ನಿಷೇಧ ಮಸೂದೆ ಮಂಡನೆಗೆ ಕಾಂಗ್ರೆಸ್ ವಿರೋಧ ವಿಚಾರವಾಗಿ ಮಾತನಾಡಿದ್ದು, ಕಾಂಗ್ರೆಸ್ ಒಂದು ವಿರೋಧ ಪಕ್ಷ. ಹಾಗಾಗಿ ಎಲ್ಲಕ್ಕೂ ವಿರೋಧ ಮಾಡುತ್ತಾರೆ ಎಂದು ಹೇಳಿಕೆ ನೀಡಿದ್ದಾರೆ.