ಕೆಲವೇ ಗಂಟೆಗಳಲ್ಲಿ 8 ಮಿಲಿಯನ್ ವೀವ್ಸ್ ಪಡೆದ ಸಮಂತಾ ಸಾಂಗ್; ಇನ್ನಷ್ಟು ಹೆಚ್ಚಿತು ‘ಪುಷ್ಪ’ ಹವಾ
ನಾಗ ಚೈತನ್ಯ ಜೊತೆಗಿನ ದಾಂಪತ್ಯಕ್ಕೆ ಅಂತ್ಯ ಹಾಡಿ, ವಿಚ್ಛೇದನ ಪಡೆದುಕೊಂಡ ಬಳಿಕ ನಟಿ ಸಮಂತಾ (Samantha) ಅವರ ಬದುಕಿನಲ್ಲಿ ಒಳ್ಳೆಯ ಘಟನೆಗಳೇ ನಡೆಯುತ್ತಿವೆ. ಅವರಿಗೆ ಮೊದಲಿಗಿಂತಲೂ ಒಳ್ಳೊಳ್ಳೆಯ ಆಫರ್ಗಳು ಬರುತ್ತಿವೆ. ಮಾಡಿದ ಕೆಲಸಗಳು ಭರ್ಜರಿ ಫಲ ಕೊಡುತ್ತಿವೆ. ಅದಕ್ಕೆ ಲೇಟೆಸ್ಟ್ ಉದಾಹರಣೆ ಎಂದರೆ ‘ಪುಷ್ಪ’ (Pushpa Movie) ಸಿನಿಮಾದಲ್ಲಿ ಅವರು ಡ್ಯಾನ್ಸ್ ಮಾಡಿರುವ ಹಾಡು ಸೂಪರ್ ಹಿಟ್ ಆಗಿರುವುದು. ಹೌದು, ಅಲ್ಲು ಅರ್ಜುನ್ (Allu Arjun) ಮತ್ತು ರಶ್ಮಿಕಾ ಮಂದಣ್ಣ (Rashmika Mandanna) ನಟನೆಯ ‘ಪುಷ್ಪ’ ಚಿತ್ರದ ಒಂದು ಐಟಂ ಸಾಂಗ್ನಲ್ಲಿ ಸಮಂತಾ ಹೆಜ್ಜೆ ಹಾಕಿದ್ದಾರೆ. ಆ ಹಾಡು ಡಿ.10ರಂದು ಬಿಡುಗಡೆಯಾಗಿ ಧೂಳೆಬ್ಬಿಸುತ್ತಿದೆ. ರಿಲೀಸ್ ಆಗಿ ಕೆಲವೇ ಗಂಟೆಗಳು ಕಳೆಯುವುದರೊಳಗೆ 8 ಮಿಲಿಯನ್ (80 ಲಕ್ಷ) ಬಾರಿ ವೀಕ್ಷಣೆ ಕಂಡಿರುವುದು ಈ ಗೀತೆಯ ಹೆಚ್ಚುಗಾರಿಕೆ. ಇದರಿಂದಾಗಿ ‘ಪುಷ್ಪ’ ಸಿನಿಮಾದ ಹವಾ ಹೆಚ್ಚಾಗಿದೆ. ಚಿತ್ರದ ಮೇಲಿದ್ದ ನಿರೀಕ್ಷೆ ದುಪ್ಪಟ್ಟಾಗಿದೆ.
ಈ ಹಾಡಿಗೆ ಖ್ಯಾತ ಸಂಗೀತ ನಿರ್ದೇಶಕ ದೇವಿ ಶ್ರೀಪ್ರಸಾದ್ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಸದ್ಯಕ್ಕೆ ರಿಲೀಸ್ ಆಗಿರುವುದು ಲಿರಿಕಲ್ ವಿಡಿಯೋ ಮಾತ್ರ. ಪಡ್ಡೆ ಹುಡುಗರಿಗೆ ನಶೆ ಏರಿಸುವಂತಿರುವ ಈ ಹಾಡಿನಲ್ಲಿ ಸಮಂತಾ ಅವರು ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ವಿಡಿಯೋ ಸಾಂಗ್ ಬಿಡುಗಡೆ ಆಗಲಿ ಎಂದು ಎಲ್ಲರೂ ಕಾಯುತ್ತಿದ್ದಾರೆ. ಸದ್ಯಕ್ಕೆ ಲಿರಿಕಲ್ ವಿಡಿಯೋದ ನಾಗಾಲೋಟ ಮುಂದುವರಿದಿದೆ.
ಸಮಂತಾ ಅವರಿಗೆ ಈಗ ಭರ್ಜರಿ ಡಿಮ್ಯಾಂಡ್ ಇದೆ. ಅದೇ ರೀತಿ ಅವರು ಸಂಭಾವನೆ ಕೂಡ ಹೆಚ್ಚಿಸಿಕೊಂಡಿದ್ದಾರೆ. ಮೂಲಗಳ ಪ್ರಕಾರ ‘ಪುಷ್ಪ’ ಸಿನಿಮಾದ ಈ ಹಾಡಿನಲ್ಲಿ ನರ್ತಿಸಲು ಸಮಂತಾ ಅವರು ಬರೋಬ್ಬರಿ 1.5 ಕೋಟಿ ರೂಪಾಯಿ ಪಡೆದಿದ್ದಾರೆ ಎಂಬ ಮಾಹಿತಿ ಹರಡಿದೆ. ಆ ಬಗ್ಗೆ ಚಿತ್ರತಂಡದವರಾಗಲಿ, ಸಮಂತಾ ಆಗಲಿ ಈವರೆಗೆ ಎಲ್ಲಿಯೂ ಬಾಯಿ ಬಿಟ್ಟಿಲ್ಲ.
ಇದಲ್ಲದೇ ಸಮಂತಾಗೆ ಇಂಗ್ಲಿಷ್ ಸಿನಿಮಾಗಳಿಂದಲೂ ಆಫರ್ ಬಂದಿದೆ. ಇತ್ತೀಚೆಗೆ ಅವರು ‘ಅರೇಂಜ್ಮೆಂಟ್ಸ್ ಆಫ್ ಲವ್’ ಸಿನಿಮಾಗೆ ಆಯ್ಕೆಯಾದ ಬಗ್ಗೆ ಸುದ್ದಿ ಹೊರಬಿದ್ದಿತ್ತು. ಆ ಚಿತ್ರಕ್ಕೆ ಖ್ಯಾತ ನಿರ್ದೇಶಕ ಫಿಲಪ್ ಜಾನ್ ಅವರು ಆ್ಯಕ್ಷನ್-ಕಟ್ ಹೇಳಲಿದ್ದಾರೆ. ಈ ಸಿನಿಮಾದಲ್ಲಿ ಸಮಂತಾ ಅವರು ದ್ವಿಲಿಂಗಿ ಪಾತ್ರ ಮಾಡಲಿದ್ದಾರೆ. ಅಂದರೆ, ಗಂಡು ಮತ್ತು ಹೆಣ್ಣು ಇಬ್ಬರಲ್ಲೂ ಲೈಂಗಿಕ ಆಸಕ್ತಿ ಹೊಂದಿರುವ ಮಹಿಳೆಯಾಗಿ ಅವರು ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.