Kashi Vishwanath Corridor: ಇಂದು ‘ಕಾಶಿ ವಿಶ್ವನಾಥ ಕಾರಿಡಾರ್ ಯೋಜನೆ‘ ಉದ್ಘಾಟಿಸಲಿದ್ದಾರೆ ಪ್ರಧಾನಿ ಮೋದಿ
ನವದೆಹಲಿ(ಡಿ.13): ಪ್ರಧಾನಿ ನರೇಂದ್ರ ಮೋದಿ(Prime Minister Narendra Modi) ಅವರು ಇಂದು ತಮ್ಮ ಕ್ಷೇತ್ರವಾದ ವಾರಣಾಸಿ(Varanasi)ಯಲ್ಲಿ ಎರಡು ಐತಿಹಾಸಿಕ ಹೆಗ್ಗುರುತುಗಳಾದ ಕಾಶಿ ವಿಶ್ವನಾಥ ದೇವಾಲಯ(Kashi Vishwanath Temple)ಮತ್ತು ಗಂಗಾ ಘಾಟ್(Ganga Ghats)ಗಳನ್ನು ಸಂಪರ್ಕಿಸುವ ಕಾಶಿ ವಿಶ್ವನಾಥ ಧಾಮ ಕಾರಿಡಾರ್ ಯೋಜನೆ(Vishwanath Dham Corridor Plan)ಯ ಮೊದಲ ಹಂತವನ್ನು ಉದ್ಘಾಟಿಸಲಿದ್ದಾರೆ.
ಮಧ್ಯಾಹ್ನ 1 ಗಂಟೆಗೆ ದೇವಾಲಯಕ್ಕೆ ಮೋದಿ ಭೇಟಿ
ಇಂದು ಪ್ರಧಾನಿ ಮೋದಿಯವರು ಮಧ್ಯಾಹ್ನ 1 ಗಂಟೆಗೆ ಕಾಶಿ ವಿಶ್ವನಾಥ ದೇವಾಲಯಕ್ಕೆ ಭೇಟಿ ನೀಡಲಿದ್ದಾರೆ. ಸುಮಾರು 339 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಶ್ರೀ ಕಾಶಿ ವಿಶ್ವನಾಥ ಕಾರಿಡಾರ್ ಯೋಜನೆಯ ಮೊದಲ ಹಂತಕ್ಕೆ ಚಾಲನೆ ನೀಡಲಿದ್ದಾರೆ.
ವಿಶ್ವನಾಥ ಧಾಮ ಕಾರಿಡಾರ್ ಯೋಜನೆ ಉದ್ಘಾಟನೆಗೆ ಕ್ಷಣಗಣನೆ
ಭಕ್ತರಿಗೆ ಪಾದಾಚಾರಿ ವ್ಯವಸ್ಥೆ, ಹಲವು ಸಭಾಂಗಣ, ಸುಸಜ್ಜಿತ ಕಟ್ಟಡ, ಮೂಲಭೂತ ಸೌಕರ್ಯ, ಆಧ್ಯಾತ್ಮಿಕ ಗ್ರಂಥಾಲಯ, ವರ್ಚುವಲ್ ಗ್ಯಾಲರಿ ಸೇರಿದಂತೆ ಹಲವು ಕಾಮಾಗಾರಿಗಳನ್ನು ಕಾಶಿ ವಿಶ್ವನಾಥ ಕಾರಿಡಾರ್ ಯೋಜನೆಯಲ್ಲಿ ಕೈಗೆತ್ತಿಕೊಳ್ಳಲಾಗಿತ್ತು. ಇದೀಗ ಈ ಯೋಜನೆ ಪೂರ್ಣಗೊಂಡಿದ್ದು, ಪ್ರಧಾನಿ ಮೋದಿ ಉದ್ಘಾಟನೆ ಮಾಡಲಿದ್ದಾರೆ.
ಪ್ರಧಾನಿ ಮೋದಿಯವರ ಕನಸಿನ ಯೋಜನೆ
ಕಾಶಿ ವಿಶ್ವನಾಥ ಕಾರಿಡಾರ್ ಯೋಜನೆ ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ಯೋಜನೆಯಾಗಿದ್ದು, ಸುಮಾರು 5 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಇದನ್ನು ನಿರ್ಮಿಸಲಾಗಿದೆ. ಮೂರು ಕಡೆ ಕಟ್ಟಡಗಳಿಂದ ಆವೃತವಾಗಿದ್ದ ದೇವಾಲಯದ ಸಂಕೀರ್ಣದ ದಟ್ಟಣೆಯನ್ನು ಇದು ಕಡಿಮೆ ಮಾಡಿದೆ.
5 ಸಾವಿರ ಹೆಕ್ಟೇರ್ನಲ್ಲಿ ನಿರ್ಮಾಣ
ಯೋಜನೆ ಉದ್ಘಾಟನೆ ಸೇರಿದಂತೆ ಹಲವು ಕಾರ್ಯಕ್ರಮಗಳ ನಿಮಿತ್ತ ಪ್ರಧಾನಿ ಮೋದಿ ತಮ್ಮ ಸ್ವಕ್ಷೇತ್ರಕ್ಕೆ ಎರಡು ದಿನಗಳ ಪ್ರವಾಸ ಕೈಗೊಳ್ಳಲಿದ್ದಾರೆ. ಇಂದು ಪ್ರಧಾನಿ ಮೋದಿ ವಾರಣಾಸಿ ತಲುಪಲಿದ್ದಾರೆ. ಈ ಮೊದಲ ಹಂತದ ಯೋಜನೆಯಲ್ಲಿ ಸುಮಾರು 5,000 ಹೆಕ್ಟೇರ್ ಪ್ರದೇಶದಲ್ಲಿ ನಿರ್ಮಿತವಾಗಿರುವ 23 ಕಟ್ಟಡಗಳನ್ನು ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ. ಈ ಮೊದಲು 3 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಈ ಕಟ್ಟಡಗಳು ಇದ್ದವು.
ಪ್ರಧಾನಿ ಮೋದಿ ಟ್ವೀಟ್
ಕಾಶಿ ವಿಶ್ವನಾಥ ಕಾರಿಡಾರ್ ಯೋಜನೆ ಉದ್ಘಾಟನೆಗೂ ಮುನ್ನ ನಿನ್ನೆ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿ ಸಂತಸ ಹಂಚಿಕೊಂಡಿದ್ದಾರೆ. ಕಾಶಿ ವಿಶ್ವನಾಥ ಮಂದಿರ ಆಧ್ಯಾತ್ಮಿಕ ಚೈತನ್ಯದ ಕೇಂದ್ರ. ನಾಳೆ ದೇಶದಲ್ಲಿ ಅತೀ ಸಂಭ್ರಮದ ದಿನ. ಐತಿಹಾಸಿಕ ಕಾಶಿ ವಿಶ್ವನಾಥ ಕಾರಿಡಾರ್ ಯೋಜನೆ ಉದ್ಘಾಟನೆ ನಡೆಯಲಿದೆ. ಎಲ್ಲರೂ ನಾಳಿನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಿ ಎಂದು ಮೋದಿ ಟ್ವೀಟ್ ಮೂಲಕ ಮನವಿ ಮಾಡಿದ್ದಾರೆ.
ಪಿಎಂ ಮೋದಿ ಮೊದಲಿಗೆ ಪುರಾತನ ಕಾಲ ಭೈರವ ದೇವಾಲಯಕ್ಕೆ ಭೇಟಿ ನೀಡಲಿದ್ದಾರೆ. ಅವರು ಗರ್ಭಗುಡಿಯ ಒಳಗೆ ಕಾಶಿ ವಿಶ್ವನಾಥ ದೇವಾಲಯದ ಪ್ರಧಾನ ಅರ್ಚಕ ಶ್ರೀಕಾಂತ್ ಮಿಶ್ರಾ ಅವರೊಂದಿಗೆ ಪ್ರಾರ್ಥನೆ ಸಲ್ಲಿಸಲಿದ್ದಾರೆ.
ಶಿವಲಿಂಗಕ್ಕೆ ಗಂಗಾಜಲ ಅರ್ಪಣೆ
ಬಳಿಕ ಲಲಿತಾ ಘಾಟ್ನಿಂದ ಕಾರಿಡಾರ್ಗೆ ಪವೇಶಿಸಿ, ಆವರಣದ ಅಲಂಕೃತ ಉತ್ತರ ದ್ವಾರದ ಮೂಲಕ ‘ಮಂದಿರ್ ಪರಿಸರ‘ವನ್ನು ತಲುಪುತ್ತಾರೆ ಎಂದು ಪಿಟಿಐ ತಿಳಿಸಿದೆ. ಒಳಗಿರುವ ಶಿವಲಿಂಗಕ್ಕೂ ಪ್ರಧಾನಿ ಮೋದಿ ಗಂಗಾಜಲವನ್ನು ಅರ್ಪಿಸಲಿದ್ದಾರೆ. 3,000 ಕ್ಕೂ ಹೆಚ್ಚು ದಾರ್ಶನಿಕರು, ಸಂತರು, ಧಾರ್ಮಿಕ ವ್ಯಕ್ತಿಗಳು, ಕಲಾವಿದರು ಮತ್ತು ಇತರರು ಕಾಶಿ ವಿಶ್ವನಾಥ ಕಾರಿಡಾರ್ ಯೋಜನೆಯ ಉದ್ಘಾಟನೆಗೆ ಸಾಕ್ಷಿಯಾಗಲಿದ್ದಾರೆ.