383ದಿನಗಳ ನಂತರ ಘಾಜಿಪುರ್ ಗಡಿ ಬಿಟ್ಟು ಹೊರಡುತ್ತಿದ್ದಾರೆ ರಾಕೇಶ್ ಟಿಕಾಯತ್; ಸ್ವಾಗತಕ್ಕೆ ಮನೆಯ ಬಳಿ ಭರ್ಜರಿ ಸಿದ್ಧತೆ
ದೆಹಲಿಯ ಗಡಿ ಭಾಗಗಳಲ್ಲಿ ಮೂರು ಕೃಷಿ ಕಾಯ್ದೆಗಳ ವಿರುದ್ಧದ ರೈತರ ಪ್ರತಿಭಟನೆಯನ್ನು ಬರೋಬ್ಬರಿ 383 ದಿನಗಳ (1 ವರ್ಷಕ್ಕಿಂತಲೂ ಹೆಚ್ಚು) ಕಾಲ ಮುನ್ನಡೆಸಿದ ಭಾರತೀಯ ಕಿಸಾನ್ ಯೂನಿಯನ್ (BKU) ರಾಷ್ಟ್ರೀಯ ವಕ್ತಾರ ರಾಕೇಶ್ ಟಿಕಾಯತ್ (Rakesh Tikait) ಇಂದು ಘಾಜಿಪುರ್ ಗಡಿಯಿಂದ ವಾಪಸ್ ತೆರಳಲಿದ್ದಾರೆ. ರಾಕೇಶ್ ಟಿಕಾಯತ್ ಸ್ವಾಗತಕ್ಕಾಗಿ ಉತ್ತರಪ್ರದೇಶದ ಸಿಸೌಲಿಯಲ್ಲಿರುವ ಅವರ ಮನೆ ಸಮೀಪ ಭರ್ಜರಿ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ಹೇಳಲಾಗಿದೆ.
ಕೇಂದ್ರ ಸರ್ಕಾರ ಜಾರಿಗೊಳಿಸಿದ್ದ ಮೂರು ಕೃಷಿ ಕಾಯ್ದೆಗಳ ವಿರುದ್ಧ ನೂರಾರು ರೈತರು ದೆಹಲಿಯ ಸಿಂಘು, ಟಿಕ್ರಿ, ಘಾಜಿಪುರ್ ಸೇರಿ ವಿವಿಧ ಗಡಿಭಾಗಗಳಲ್ಲಿ ಬೀಡುಬಿಟ್ಟು, ಆಂದೋಲನ ನಡೆಸುತ್ತಿದ್ದರು. ಈ ಬಾರಿ ಚಳಿಗಾಲದ ಅಧಿವೇಶನ ಮುಗಿಯುವದಕ್ಕೂ ಮೊದಲು ಕೇಂದ್ರ ಸರ್ಕಾರ ಆ ಕಾಯ್ದೆಗಳನ್ನು ಹಿಂಪಡೆದಿದೆ. ನಂತರ ಸಂಸತ್ತಿನಲ್ಲಿ ಕೂಡ ರದ್ದುಗೊಳಿಸಲಾಗಿದೆ. ಅಷ್ಟೇ ಅಲ್ಲ, ರೈತರು ಆಗ್ರಹಪಡಿಸಿದ್ದ ಕನಿಷ್ಠ ಬೆಂಬಲ ಬೆಲೆ, ಪ್ರಕರಣಗಳನ್ನು ಹಿಂಪಡೆಯುವುದು ಮತ್ತಿತ್ಯಾದಿ ಬೇಡಿಕೆಗಳನ್ನು ಈಡೇರಿಸುವುದಾಗಿ ಕೇಂದ್ರ ಸರ್ಕಾರ ಲಿಖಿತವಾಗಿ ಭರವಸೆ ನೀಡಿದೆ. ಹೀಗಾಗಿ ಗಡಿಯಲ್ಲಿದ್ದ ರೈತರೆಲ್ಲ ವಾಪಸ್ ತೆರಳಿದ್ದಾರೆ. ಅಲ್ಲಿ ಹಾಕಲಾಗಿದ್ದ ತಮ್ಮ ಕ್ಯಾಂಪ್ಗಳನ್ನು ತೆಗೆದಿದ್ದಾರೆ. ಇಂದು ರಾಕೇಶ್ ಟಿಕಾಯತ್ ಕೂಡ ಗಡಿಯಿಂದ ಹೊರಟಿದ್ದಾರೆ.
ಕಳೆದ ಒಂದು ವರ್ಷದಿಂದಲೂ ರಾಕೇಶ್ ಟಿಕಾಯತ್ ನೂರಾರು ರೈತರೊಟ್ಟಿಗೆ ದೆಹಲಿಯ ಘಾಜಿಪುರ್ ಗಡಿಯಲ್ಲಿಯೇ ಕ್ಯಾಂಪ್ ಹಾಕಿದ್ದರು. ತಮ್ಮ ಹೋರಾಟದಲ್ಲಿ ವಿಜಯ ಸಿಕ್ಕಿತು ಎಂದು ತುಂಬ ಖುಷಿಯಲ್ಲಿರುವ ರೈತರು ಸದ್ಯಕ್ಕೆ ಪ್ರತಿಭಟನೆಯನ್ನು ಮುಕ್ತಾಯಗೊಳಿಸಿದ್ದಾರೆ. ಹೀಗೆ ರೈತರ ಪ್ರತಿಭಟನೆ ಶುರುವಾದಾಗಿನಿಂದಲೂ ಅತ್ಯಂತ ಹೆಚ್ಚು ಮುಂಚೂಣಿಯಲ್ಲಿದ್ದು, ಗುರುತಿಸಿಕೊಂಡವರು ಈ ರಾಕೇಶ್ ಟಿಕಾಯತ್. ರಾಷ್ಟ್ರೀಯ ವಕ್ತಾರರಾಗಿರುವ ಇವರು ರೈತ ಸಂಘಟನೆಗಳ ಪರ ಯಾವುದೇ ಘೋಷಣೆ, ಪ್ರಕಟಣೆಯಿದ್ದರೂ ಅದನ್ನು ಪ್ರಸ್ತುತಪಡಿಸುತ್ತಿದ್ದರು. ಆಂದೋಲನದ ಮಧ್ಯೆ ನಡೆಸಲಾದ ವಿವಿಧ ಮಹಾಪಂಚಾಯತ್ನಂಥ ಸಮಾವೇಶದಲ್ಲಿ ಮುಂಚೂಣಿಯಲ್ಲಿದ್ದರು. ಅಷ್ಟೇ ಅಲ್ಲ, ವಿವಾದಿತ ಕೃಷಿ ಕಾಯ್ದೆಗಳನ್ನು ಜಾರಿಗೊಳಿಸಿದ ಬಿಜೆಪಿ ಚುನಾವಣೆಯಲ್ಲಿ ಗೆಲ್ಲಲು ಬಿಡಬಾರದು ಎಂದು, ಕಳೆದ ಪಶ್ಚಿಮಬಂಗಾಳ ವಿಧಾನಸಭಾ ಚುನಾವಣೆಯ ವೇಳೆ ಅಲ್ಲಿಗೆ ಭೇಟಿ ನೀಡಿ, ಬಿಜೆಪಿ ವಿರುದ್ಧ ಜನರನ್ನು ಎತ್ತಿಕಟ್ಟಿದ್ದರು. ಅವರು ಡಿಸೆಂಬರ್ 16ರೊಳಗೆ ಗಡಿಯಿಂದ ಹೊರಡುವುದಾಗಿ ಹೇಳಿದ್ದರು.
ಘಾಜಿಪುರದಲ್ಲಿ ಹವನ
ಇನ್ನು ಇಂದು ಘಾಜಿಪುರದಲ್ಲಿ ಒಂದು ಹವನ ನಡೆಯಲಿದ್ದು, ಅದಾದ ಬಳಿಕ ಟಿಕಾಯತ್ ಮತ್ತು ಅವರ ಬೆಂಬಲಿಗರು ಅಲ್ಲಿಂದ ಹೊರಡಲಿದ್ದಾರೆ. ಮೋದಿನಗರ, ಮೀರತ್, ದೌರಾಲಾ, ಟೋಲ್ ಪ್ಲಾಜಾ ಮತ್ತು ಮನ್ಸೂರ್ಪುರ ಮೂಲಕ ಉತ್ತರ ಪ್ರದೇಶದ ಮುಜಾಫರ್ನಗರ ಜಿಲ್ಲೆಯಲ್ಲಿರುವ ಸಿಸೌಲಿ ತಲುಪಲಿದ್ದಾರೆ. ರಾಕೇಶ್ ಟಿಕಾಯತ್ ಮರಳಿ ಮನೆಗೆ ಬರುತ್ತಿದ್ದಾರೆಂಬ ಖುಷಿ ಸಿಸೌಲಿಯಲ್ಲಿ ಮನೆ ಮಾಡಿದೆ. ಅಲ್ಲಿ ಅದ್ದೂರಿಯಾಗಿ ಅವರನ್ನು ಸ್ವಾಗತಿಸಲು ಸಿದ್ಧತೆ ನಡೆದಿದೆ ಎಂದು ಬಿಕೆಯು ಮಾಧ್ಯಮ ಉಸ್ತುವಾರಿ ಧರ್ಮೇಂದ್ರ ಮಲಿಕ್ ತಿಳಿಸಿದ್ದಾರೆ.