ಬೆಳಗಾವಿಯಲ್ಲಿ MES ಪುಂಡಾಟ; ಯಾರು ಏನು ಹೇಳಿದರು?
ಬೆಳಗಾವಿಯಲ್ಲಿ MES ಪುಂಡಾಟಕ್ಕೆ ನಾಡಿನಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಪೊಲೀಸ್ ಇಲಾಖೆಗೆ (Police Department) ಸಂಬಂಧಿಸಿದ ವಾಹನಗಳ ಮೇಲೆ ಪುಂಡರು ದಾಳಿ ನಡೆಸಿದ್ದು, ಸದ್ಯ 27 ಜನರನ್ನು ಬಂಧಿಸಿ ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ. ಈ ಸಂಬಂಧ ಬೆಳಗಾವಿ (Belagavi) ಮೂರು ಠಾಣೆಗಳಲ್ಲಿ ಎಫ್ಐಆರ್ (FIR) ಸಹ ದಾಖಲಾಗಿದೆ. ಬೆಳಗಾವಿಯಲ್ಲಿ ನಡೆದ ಪುಂಡಾಟಿಕೆ ಖಂಡನೀಯ. ಕಾನೂನು ಸುವ್ಯವಸ್ಥೆಗೆ ಧಕ್ಕೆ ತಂದರೆ ಕಠಿಣ ಕ್ರಮ ತೆಗೆದುಕೊಳ್ಳಲು ಗೃಹ ಸಚಿವರಿಗೆ (Home Minister) ಸೂಚನೆ ನೀಡಲಾಗಿದ್ದು, ಹಲವರ ಬಂಧನವೂ ಆಗಿದೆ. ಕಲ್ಲು ತೂರಾಟ, ಸಾರ್ವಜನಿಕ ಆಸ್ತಿಗೆ ಹಾನಿ ಮಾಡುವುದು ಕಾನೂನುಬಾಹಿರ. ಇಂತಹ ಘಟನೆ ನಡೆಯದಂತೆ ದೀರ್ಘಾವಧಿ ಕ್ರಮ ಕೈಗೊಳ್ಳಲು ಪೊಲೀಸರಿಗೆ ಸೂಚಿಸಿದ್ದೇನೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ (CM Basavaraj Bommai) ಹೇಳಿದ್ದಾರೆ.
ರಾಷ್ಟ್ರಭಕ್ತರ ಪ್ರತಿಮೆಗೆ ಭಂಗ ತರುವುದು ಸರಿಯಲ್ಲ. ದೇಶಕ್ಕಾಗಿ ತ್ಯಾಗ ಮಾಡಿದವರನ್ನು ಗೌರವಿಸಬೇಕು. ನಾಡಿಗೆ ಹೋರಾಡಿದವರ, ತ್ಯಾಗ ಮಾಡಿದವರ ಗೌರವ ಉಳಿಸಬೇಕು. ಸಮಾಜದಲ್ಲಿ ಕ್ಷೋಭೆ ಉಂಟುಮಾಡುವುದು ಸರಿಯಲ್ಲ. ಕೆಲವೇ ಕೆಲವು ಪುಂಡರು ಇಂತಹ ದುಷ್ಕೃತ್ಯ ಮಾಡುತ್ತಿದ್ದು, ಅವರನ್ನು ಸದೆಬಡಿಯುತ್ತೇವೆ ಎಂದು ಸಿಎಂ ಗುಡುಗಿದ್ದಾರೆ.
ಸಿದ್ದರಾಮಯ್ಯನವರ ಪ್ರತಿಕ್ರಿಯೆ
ಬೆಳಗಾವಿಯಲ್ಲಿರುವ ಕರ್ನಾಟಕದ ಅಭಿಮಾನ ಮೂರ್ತಿ ವೀರ ಸಂಗೊಳ್ಳಿ ರಾಯಣ್ಣನ ಪ್ರತಿಮೆಯನ್ನು ಕೆಡವಿ, ವಿರೂಪಗೊಳಿಸಿದ ಎಂಇಎಸ್ ಪುಂಡರ ಕಿಡಿಗೇಡಿ ಕೃತ್ಯ ಖಂಡನೀಯ. ಮುಖ್ಯಮಂತ್ರಿಗಳು ಈ ಗೂಂಡಾಗಳನ್ನು ತಕ್ಷಣ ಬಂಧಿಸಿ ಜೈಲಿಗಟ್ಟುವಂತೆ ಪೊಲೀಸರಿಗೆ ಆದೇಶ ನೀಡಬೇಕು.
ಮುಖ್ಯಮಂತ್ರಿ ಅವರೇ, ಇದಕ್ಕೆಲ್ಲ ‘ಕ್ರಿಯೆಗೆ ಪ್ರತಿಕ್ರಿಯೆ’ ಎಂಬ ಮೊಂಡುವಾದ ಮಂಡಿಸಬೇಡಿ. ಕಾನೂನಿನ ಕ್ರಮ ಇಂತಹ ಪುಂಡರಿಗೆ ಕಠಿಣ ಸಂದೇಶವಾಗಲಿ. ಇದೇ ವೇಳೆ ಕನ್ನಡ ಬಂಧುಗಳು ಆವೇಶಕ್ಕೆ ಒಳಗಾಗದೆ, ಸಂಯಮದಿಂದ ಶಾಂತಿ-ಸೌಹಾರ್ದತೆ ಕಾಪಾಡಿಕೊಂಡು ಬರಬೇಕೆಂದು ಮನವಿ ಮಾಡುತ್ತೇನೆ.
ಸಚಿವ ಗೋವಿಂದ ಕಾರಜೋಳ
ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಯನ್ನು ದುಷ್ಕರ್ಮಿಗಳು ವಿಕೃತ ಗೊಳಿಸಿರುವ ಘಟನೆ ನಾಗರೀಕ ಸಮಾಜ ತಲೆತಗ್ಗಿಸುವಂತಹ ಘಟನೆ ಖಂಡನಾರ್ಹ.ಅಪ್ರತಿಮ ದೇಶಭಕ್ತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ವೀರಮರಣವನ್ನಪ್ಪಿ ದೇಶಕ್ಕೆ ತಮ್ಮನ್ನು ತಾವು ಸಮರ್ಪಣೆ ಮಾಡಿಕೊಂಡ ವೀರಯೋದ ಸಂಗೊಳ್ಳಿ ರಾಯಣ್ಣ. ಬ್ರಿಟಿಷರ ವಿರುದ್ಧ ಕಾದಾಡಿ ನಾಡಿನ ಕೀರ್ತಿ ಪತಾಕೆಯನ್ನು ಉತ್ತುಂಗಕ್ಕೇರಿಸಿದವರು. ದೇಶಭಕ್ತನಿಗೆ ಅಪಮಾನ ಮಾಡಿದ ಕಿಡಿಗೇಡಿಗಳ ವಿರುದ್ಧ ಕಾನೂನಿನಡಿಯಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ನಾಡಿನ ಜನತೆ ವಿಚಲಿತರಾಗದೇ ಶಾಂತಿ ಕಾಪಾಡಲು ವಿನಂತಿಸುತ್ತೇನೆ.
ನಳಿನ್ ಕುಮಾರ್ ಕಟೀಲ್
ಬೆಳಗಾವಿಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಸರಕಾರ ಕ್ರಮ ಕೈಗೊಂಡಿದೆ. ಶಾಂತಿ ಮತ್ತು ಸೌಹಾರ್ದತೆಯನ್ನು ಹಾಳುಗೆಡವಲು ಯತ್ನಿಸುವ ಕಿಡಿಗೇಡಿಗಳಿಗೆ ತಕ್ಕಪಾಠ ಕಲಿಸಬೇಕಾಗಿದೆ. ಈ ಕುರಿತು ರಾಜ್ಯ ಸರಕಾರ ಮತ್ತು ಗೃಹಸಚಿವರಿಗೆ ಮಾಡಿದ ಮನವಿಯಂತೆ ಅವರು ಯೋಗ್ಯ ಕ್ರಮ ಕೈಗೊಂಡಿದ್ದಾರೆ.
ಡಿ.ಕೆ.ಶಿವಕುಮಾರ್ ಖಂಡನೆ
ಅನಗೊಳದಲ್ಲಿ ಸ್ವಾತಂತ್ರ್ಯ ವೀರ ಸೇನಾನಿ ಸಂಗೊಳ್ಳಿ ರಾಯಣ್ಣನವರ ಪ್ರತಿಮೆಗೆ ಭಗ್ನ ಸೇರಿದಂತೆ ಬೆಳಗಾವಿಯಲ್ಲಿ ಎಂಇಎಸ್ ಪುಂಡಾಟಿಕೆಯನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಉಗ್ರವಾಗಿ ಖಂಡಿಸಿದ್ದಾರೆ. ಎಂಇಎಸ್ ನ ಕನ್ನಡದ್ರೋಹಿ, ನಾಡದ್ರೋಹಿ ಕೃತ್ಯವನ್ನು ಕಾಂಗ್ರೆಸ್ ಎಂದಿಗೂ ಸಹಿಸುವುದಿಲ್ಲ ಎಂದು ಅವರು ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಶಾಂತಿ ಕಾಪಾಡುವಂತೆ ಗೃಹ ಸಚಿವರ ಮನವಿ
ಬೆಳಗಾವಿ ನಗರದಲ್ಲಿ ಪ್ರಾತಸ್ಮರಣೀಯ ವೀರನಾದ, ಸಂಗೊಳ್ಳಿ ರಾಯಣ್ಣ ರವರ ಪ್ರತಿಮೆಗೆ ಹಾನಿ ಮಾಡಿರುವ ಘಟನೆಯನ್ನು ಖಂಡಿಸುತ್ತೇನೆ. ಸಂಗೊಳ್ಳಿ ರಾಯಣ್ಣ ಹಾಗೂ ಶಿವಾಜಿ ಮಹಾರಾಜ್ ಅವರುಗಳು ನಮ್ಮೆಲ್ಲರ ಹೆಮ್ಮೆಯ ಪ್ರತೀಕವಾಗಿದ್ದಾರೆ. ಪ್ರತಿಯೊಬ್ಬ ನಾಗರಿಕರೂ ಹೆಮ್ಮೆ ಹಾಗೂ ಗರ್ವದಿಂದ ನೆನಸಿಕೊಳ್ಳುವಂತ ಭಾರತೀಯ ಪುತ್ರರು. ಇವರ ಹೆಸರಿನಲ್ಲಿ, ಕೆಲವು ಕಿಡಿಗೇಡಿಗಳು, ದುಷ್ಕೃತ್ಯ ನಡೆಸಿ, ಭಾಷಾ ಹಾಗೂ ಸಹೋದರತ್ವ ಬಾಂಧವ್ಯವನ್ನು ಕೆಡಿಸು ವಂತಹ ಕೃತ್ಯ ಎಸಗಿರುವ ಘಟನೆ, ಅಕ್ಷಮ್ಯ ಅಪರಾಧವಾಗಿದೆ.
ಈ ಕುರಿತು ಮಾಹಿತಿಯನ್ನು ಪಡೆದುಕೊಂಡಿದ್ದೇನೆ, ಹಾಗೂ ಬೆಂಗಳೂರು ಹಾಗೂ ಬೆಳಗಾವಿ ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಎಫ್ ಐ ಅರ್ ದಾಖಲಾಗಿದ್ದು, ಕೆಲವರನ್ನು ವಶಕ್ಕೆ ಪಡೆಯಲಾಗಿದೆ. ರಾಜ್ಯದ ಜನತೆ ಶಾಂತಿ ಹಾಗೂ ಸಾಮರಸ್ಯ ಕಾಪಾಡಲು ಸಹಕರಿಸೇಕೆಂದು ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಮಾಹಿತಿ ನೀಡಿದ್ದಾರೆ.