ಭುವನ ಸುಂದರಿಗೆ ಸಿಗುವ ಸೌಲಭ್ಯ ಕೇಳಿದ್ರೆ ಅಚ್ಚರಿಯಿಂದ ಕಣ್ಣರಳಿಸುವುದು ಫಿಕ್ಸ್!
ಚಂಡೀಗಢ ಮೂಲದ ಚೆಲುವೆ ಹರ್ನಾಜ್ ಸಂಧು (Harnaaz Sandhu) 21 ವರ್ಷದ ಬಳಿಕ ಭುವನ ಸುಂದರಿ (Miss Universe) ಪಟ್ಟವನ್ನು ಮತ್ತೆ ಮರಳಿ ದೇಶಕ್ಕೆ ತಂದಿದ್ದು, ಇಡೀ ವಿಶ್ವವೇ ಭಾರತವನ್ನು (India) ಕೊಂಡಾಡುತ್ತಿದೆ. 1994ರಲ್ಲಿ ಸುಶ್ಮಿತಾ ಸೇನ್ (Sushmita Sen) ಮತ್ತು 2000ರಲ್ಲಿ ಲಾರಾ ದತ್ತಾ (Lara Dutta) ಭುವನ ಸುಂದರಿ ಕಿರೀಟವನ್ನು ತಮ್ಮದಾಗಿಸಿಕೊಂಡಿದ್ದರು. ಸುಂದರಿಯರು ಈ ಸ್ಪರ್ಧೆ ಗೆದ್ದಾಗ ಸಿಗುವ ಖ್ಯಾತಿ ಒಂದೆಡೆಯಾದರೆ, ಅದರಿಂದ ಸಿಗುವ ಲಾಭಗಳ ಬಗ್ಗೆ ತಿಳಿದರೆ ನೀವು ಅಚ್ಚರಿಯಿಂದ ಕಣ್ಣರಳಿಸುವುದು ಖಂಡಿತಾ. ಹಾಗಾದರೆ ಭುವನ ಸುಂದರಿ ಕಿರೀಟ ಮುಡಿಗೇರಿಸಿಕೊಂಡ ಸುಂದರಿಯರು ಪಡೆಯುವ ಸೌಲಭ್ಯಗಳೇನು? ಬನ್ನಿ ತಿಳಿಯೋಣ.
ವರದಿಗಳ ಪ್ರಕಾರ, ಭುವನ ಸುಂದರಿ ಹರ್ನಾಜ್ ಗೆದ್ದಿರುವ ಕಿರೀಟದ ಮೌಲ್ಯ ಒಟ್ಟು 37 ಕೋಟಿ ರೂ. ಭುವನ ಸುಂದರಿ ಸ್ಪರ್ಧೆಯ ವಿಜೇತರು ಧರಿಸುವ ಕಿರೀಟ, ಅದರಲ್ಲಿರುವ ವಜ್ರಗಳು ಮತ್ತು ಅವರಿಗೆ ಸಿಗುವ ಬಹುಮಾನದ ಮೊತ್ತದ ಬಗ್ಗೆ ಜನರಲ್ಲಿ ಕುತೂಹಲ ಸಾಕಷ್ಟಿದೆ. ಆದರೆ ಮಿಸ್ ಯುನಿವರ್ಸ್ ಸಂಸ್ಥೆ ಮಾತ್ರ ಕಿರೀಟಧಾರಿಣಿಗೆ ನೀಡಿದ ಬಹುಮಾನದ ಮೊತ್ತವನ್ನು ಯಾವತ್ತೂ ಬಹಿರಂಗಪಡಿಸುವುದಿಲ್ಲ. ಆದರೂ ಅದು ಸುಮಾರು ಲಕ್ಷ ರೂಪಾಯಿಗಳ ಮೌಲ್ಯ ಉಳ್ಳದ್ದು ಎನ್ನುತ್ತವೆ ವರದಿಗಳು.
ಭುವನ ಸುಂದರಿಗೆ ಸಿಗುವ ಸೌಲಭ್ಯಗಳು
ಕಿರೀಟ ಮತ್ತು ಬಹುಮಾನದ ಹಣದ ಹೊರತಾಗಿ, ಭುವನ ಸುಂದರಿಯು, ಅಮೆರಿಕದ ನ್ಯೂಯಾರ್ಕ್ನಲ್ಲಿರುವ ಮಿಸ್ ಯೂನಿವರ್ಸ್ ಅಪಾರ್ಟ್ಮೆಂಟ್ನಲ್ಲಿ ಒಂದು ವರ್ಷದವರೆಗೆ ವಾಸಿಸಬಹುದಾಗಿದೆ. ಮತ್ತು ಅದನ್ನು ಮಿಸ್ ಯುಎಸ್ಎ ಜೊತೆಗೆ ಹಂಚಿಕೊಳ್ಳಬೇಕು. ಮಿಸ್ ಯೂನಿವರ್ಸ್ ಸಂಸ್ಥೆ, ಭುವನ ಸುಂದರಿಯ ವಾಸ್ತವ್ಯದ ಸಂದರ್ಭದಲ್ಲಿ, ದಿನಸಿಯಿಂದ ಹಿಡಿದು ವಸ್ತ್ರಗಳವರೆಗೆ ಅಗತ್ಯವಿರುವ ಎಲ್ಲವನ್ನೂ ಭುವನ ಸುಂದರಿಗೆ ಒದಗಿಸುತ್ತದೆ.
ಸೌಂದರ್ಯ ವರ್ಧಕ, ಆರೈಕೆಯ ವೆಚ್ಚ
ಭುವನ ಸುಂದರಿಯು ಯಾವಾಗಲೂ ಸುಂದರವಾಗಿ ಕಂಗೊಳಿಸುತ್ತಿರುವಂತೆ ನೋಡಿಕೊಳ್ಳಲು, ಸಹಾಯಕರು ಮತ್ತು ನುರಿತ ಮೇಕಪ್ ಕಲಾವಿದರ ತಂಡವನ್ನು ಸಹ ಒದಗಿಸಲಾಗಿದೆ. ಒಂದು ವರ್ಷದವರೆಗೆ ಚೆಲುವೆ ಬಳಸುವ ಸೌಂದರ್ಯ ವರ್ಧಕಗಳು, ಕೂದಲ ಉತ್ಪನ್ನಗಳು, ಪಾದರಕ್ಷೆಗಳು, ಉಡುಪು, ಆಭರಣಗಳು ಮತ್ತು ತ್ವಚೆಯ ಆರೈಕೆಯ ವೆಚ್ಚ ನೀಡಲಾಗುತ್ತದೆ.
ಚರ್ಮರೋಗ ತಜ್ಞರು ಮತ್ತು ದಂತ ವೈದ್ಯರನ್ನು ಹೊಂದಲು ಅವಕಾಶ
ಅಷ್ಟು ಮಾತ್ರವಲ್ಲ, ಭುವನ ಸುಂದರಿಯ ಪೋರ್ಟ್ಪೋಲಿಯೋಗಳನ್ನು ಮಾಡಲು, ವಿಶ್ವದ ನುರಿತ ಫೋಟೋಗ್ರಾಫರ್ಗಳ ತಂಡವನ್ನು ಸಹ ಆಕೆಗೆ ಒದಗಿಸಲಾಗುತ್ತದೆ. ಜೊತೆಗೆ ಭುವನ ಸುಂದರಿ ಇತರ ಐಷಾರಾಮಿ ಸೌಲಭ್ಯಗಳ ಜೊತೆಗೆ , ಒಬ್ಬ ವೃತ್ತಿಪರ ಸ್ಟೈಲಿಸ್ಟ್, ಒಬ್ಬ ಪೌಷ್ಟಿಕಾಂಶ ತಜ್ಞರು, ಒಬ್ಬ ಚರ್ಮರೋಗ ತಜ್ಞರು ಮತ್ತು ದಂತ ವೈದ್ಯರನ್ನು ಕೂಡ ಹೊಂದಬಹುದಾಗಿದೆ.
ಭುವನ ಸುಂದರಿಗೆ ಸಿಗುವ ಸೌಲಭ್ಯಗಳ ಪಟ್ಟಿ ಇಲ್ಲಿಗೆ ಕೊನೆಗೊಳ್ಳುವುದಿಲ್ಲ. ವಿಶೇಷ ಸಮಾರಂಭಗಳು, ಪಾರ್ಟಿಗಳು, ಪ್ರೀಮಿಯರ್ಗಳು, ಸ್ಕ್ರೀನಿಂಗ್ಗಳು ಮತ್ತು ಕಾಸ್ಟಿಂಗ್ ಇತ್ಯಾದಿಗಳ ಪ್ರವೇಶ ಭುವನ ಸುಂದರಿಗೆ ಉಚಿತವಾಗಿರುತ್ತದೆ. ಆಕೆಯ ಒಂದು ವರ್ಷದವರೆಗಿನ ಪ್ರಯಾಣ ವೆಚ್ಚ, ವಸತಿ ವೆಚ್ಚ ಮತ್ತು ಊಟದ ಖರ್ಚನ್ನು ಮಿಸ್ ಯೂನಿವರ್ಸ್ ಸಂಸ್ಥೆ ನೀಡುತ್ತದೆ.
ಸೌಲಭ್ಯದ ಜೊತೆಗೆ ಒಂದಿಷ್ಠು ಜವಾಬ್ದಾರಿ
ಭುವನ ಸುಂದರಿಗೆ ಸಿಗುವ ಇಷ್ಟೆಲ್ಲಾ ಸೌಲಭ್ಯಗಳು ನಿಮ್ಮನ್ನು ಆಕರ್ಷಿಸಬಹುದು, ಆದರೆ ಈ ಎಲ್ಲಾ ಉತ್ಕೃಷ್ಟ ಸೌಲಭ್ಯಗಳ ಜೊತೆಜೊತೆಗೆ ಆಕೆಗೆ ಮೇಲೆ ಹೆಚ್ಚಿನ ಜವಾಬ್ದಾರಿಗಳ ಭಾರವೂ ಕೂಡ ಇರುತ್ತದೆ. ವಿಶ್ವ ಸುಂದರಿ ಸಂಸ್ಥೆಯ ಮುಖ್ಯ ರಾಯಭಾರಿಯಾಗಿ, ಆಕೆ ಸಮಾರಂಭಗಳು, ಪಾರ್ಟಿಗಳು, ದತ್ತಿ ಕಾರ್ಯಕ್ರಮಗಳು ಮತ್ತು ಪತ್ರಿಕಾಗೋಷ್ಟಿಗಳಿಗೆ ಹಾಜರಾಗಬೇಕಾಗುತ್ತದೆ.