‘ಪುಷ್ಪ’ ಗೆಲುವಿನ ಬಳಿಕ ರಶ್ಮಿಕಾಗೆ ಬಂಪರ್​ ಚಾನ್ಸ್​; ಮತ್ತೋರ್ವ ಸ್ಟಾರ್​ ನಟನಿಗೆ ಕೊಡಗಿನ ಕುವರಿ ಜೋಡಿ?

ನಟಿ ರಶ್ಮಿಕಾ ಮಂದಣ್ಣ ಅವರು ಈಗ ಯಶಸ್ಸಿನ ಉತ್ತುಂಗದಲ್ಲಿ ಇದ್ದಾರೆ. ಚಿತ್ರರಂಗಕ್ಕೆ ಕಾಲಿಟ್ಟು ಕೆಲವೇ ವರ್ಷಗಳ ಕಳೆಯುವುದರೊಳಗೆ ಅವರು ಮಾಡಿದ ಸಾಧನೆ ಸಣ್ಣದೇನಲ್ಲ. ಕನ್ನಡದ ‘ಕಿರಿಕ್​ ಪಾರ್ಟಿ’ ಚಿತ್ರದಿಂದ ವೃತ್ತಿಜೀವನ ಆರಂಭಿಸಿದ ಅವರು ಈಗ ಬಾಲಿವುಡ್​ ಸಿನಿಮಾಗಳಲ್ಲಿ ನಟಿಸುವ ಮಟ್ಟಕ್ಕೆ ಬೆಳೆದಿದ್ದಾರೆ. ದಕ್ಷಿಣ ಭಾರತದಲ್ಲಂತೂ ಅವರ ಕ್ರೇಜ್​ ಜೋರಾಗಿದೆ. ಇತ್ತೀಚೆಗೆ ತೆರೆಕಂಡ ‘ಪುಷ್ಪ’ ಸಿನಿಮಾ ಮೂಲಕ ಅವರಿಗೆ ಭರ್ಜರಿ ಗೆಲುವು ಸಿಕ್ಕಿದೆ. ಆ ಚಿತ್ರದಲ್ಲಿ ಅಲ್ಲು ಅರ್ಜುನ್​ ಜೊತೆ ರಶ್ಮಿಕಾ ತೆರೆ ಹಂಚಿಕೊಂಡರು. ಈಗ ಅವರು ಕಾಲಿವುಡ್​ ಹೀರೋ ‘ದಳಪತಿ’ ವಿಜಯ್​ ನಟನೆಯ ಹೊಸ ಚಿತ್ರಕ್ಕೆ ನಾಯಕಿ​ ಆಗಲಿದ್ದಾರೆ ಎಂಬ ಮಾಹಿತಿ ಕೇಳಿಬಂದಿದೆ.

ಒಂದಕ್ಕಿಂತ ಒಂದು ಸೂಪರ್​ ಹಿಟ್​ ಸಿನಿಮಾಗಳನ್ನು ನೀಡುತ್ತಿರುವ ದಳಪತಿ ವಿಜಯ್​ ಜತೆ ತೆರೆ ಹಂಚಿಕೊಳ್ಳಬೇಕು ಎಂಬುದು ಬಹುತೇಕ ನಟಿಯರ ಆಸೆ. ರಶ್ಮಿಕಾ ಕೂಡ ಅಂಥ ಆಸೆಯನ್ನು ಈ ಮೊದಲು ವ್ಯಕ್ತಪಡಿಸಿದ್ದುಂಟು. ಆನಂತರ ವಿಜಯ್​ ಅವರ ಯಾವುದೇ ಹೊಸ ಸಿನಿಮಾ ಅನೌನ್ಸ್​ ಆದರೂ ರಶ್ಮಿಕಾ ಹೆಸರು ಕೇಳಿಬರುವುದು ಸಹಜ ಆಗಿ ಬಿಟ್ಟಿದೆ. ಈಗ ಮತ್ತೆ ಅದು ಮರುಕಳಿಸಿದೆ.

ಖ್ಯಾತ ನಿರ್ದೇಶಕ ವಂಶಿ ಪೈಡಿಪಲ್ಲಿ ಜೊತೆ ವಿಜಯ್​ ಸಿನಿಮಾ ಮಾಡಲಿದ್ದಾರೆ. ಆ ಚಿತ್ರಕ್ಕೆ ತಾತ್ಕಾಲಿಕವಾಗಿ ‘ದಳಪತಿ 66’ ಎಂದು ಕರೆಯಲಾಗುತ್ತಿದೆ. ಇನ್ನೂ ಶೀರ್ಷಿಕೆ ಅಂತಿಮವಾಗದ ಈ ಚಿತ್ರಕ್ಕೆ ಪಾತ್ರವರ್ಗದ ಆಯ್ಕೆ ನಡೆಯುತ್ತಿದೆ. ನಾಯಕಿಯಾಗಿ ರಶ್ಮಿಕಾ ಮಂದಣ್ಣ ನಟಿಸುವ ಸಾಧ್ಯತೆ ಇದು ಎಂಬ ಸುದ್ದಿ ಹರಿದಾಡುತ್ತಿದೆ.

ಈ ಸಿನಿಮಾ ತೆಲುಗು ಮತ್ತು ತಮಿಳಿನಲ್ಲಿ ಏಕಕಾಲಕಕ್ಕೆ ನಿರ್ಮಾಣ ಆಗಲಿದೆ. ಹಾಗಾಗಿ ಎರಡೂ ಭಾಷೆಯ ಚಿತ್ರರಂಗಕ್ಕೆ ಸೂಕ್ತ ಆಗುವಂತಹ ಕಲಾವಿದರನ್ನು ಆಯ್ಕೆ ಮಾಡಿಕೊಳ್ಳಲು ಪ್ಲ್ಯಾನ್​ ಮಾಡಲಾಗಿದೆ. ದಕ್ಷಿಣ ಭಾರತದಲ್ಲಿ ರಶ್ಮಿಕಾ ಮಂದಣ್ಣ ಮನೆಮಾತಾಗಿದ್ದಾರೆ. ಇತ್ತೀಚೆಗೆ ಬಾಲಿವುಡ್​ಗೂ ಕಾಲಿಟ್ಟಿದ್ದಾರೆ. ಅವರು ಈ ಚಿತ್ರಕ್ಕೆ ಹೀರೋಯಿನ್​ ಆದರೆ ಒಳಿತು ಎಂಬ ಅಭಿಪ್ರಾಯ ಚಿತ್ರತಂಡದಲ್ಲಿ ಮೂಡಿದೆ ಎನ್ನಲಾಗಿದೆ.

ಈ ವಿಚಾರದ ಬಗ್ಗೆ ಅಧಿಕೃತವಾಗಿ ಯಾವುದೇ ಘೋಷಣೆ ಆಗಿಲ್ಲ. ಸಿನಿಮಾ ಮಾತ್ರವಲ್ಲದೇ ಜಾಹೀರಾತು ಕ್ಷೇತ್ರದಲ್ಲೂ ರಶ್ಮಿಕಾ ಮಿಂಚುತ್ತಿದ್ದಾರೆ. ಅನೇಕ ಪ್ರತಿಷ್ಠಿತ ಬ್ರ್ಯಾಂಡ್​ಗಳಿಗೆ ಅವರು ರಾಯಭಾರಿ ಆಗಿದ್ದಾರೆ. ಅದರಿಂದಲೂ ಅವರು ಕೋಟ್ಯಂತರ ರೂಪಾಯಿ ಸಂಭಾವನೆ ಪಡೆಯುತ್ತದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *