ಸ್ಮಾರ್ಟ್ಫೋನ್ ಉದ್ಯಮದಲ್ಲಿ ವರ್ಷಾಂತ್ಯದಲ್ಲಿ ಭರಪೂರ ಉದ್ಯೋಗ
ಕರೊನಾ ವೈರಸ್ ಹಿನ್ನೆಲೆಯಲ್ಲಿ ಭಾರಿ ಉದ್ಯೋಗ ನಷ್ಟವಾಗಿರುವ ಈ ಸಮಯದಲ್ಲಿ, ಸರ್ಕಾರದ ಬೆಂಬಲದೊಂದಿಗೆ ಸ್ಮಾರ್ಟ್ಫೋನ್ ಉದ್ಯಮವು ಡಿಸೆಂಬರ್ ಅಂತ್ಯದ ವೇಳೆಗೆ 50 ಸಾವಿರಕ್ಕೂ ಅಧಿಕ ಉದ್ಯೋಗಗಳನ್ನು ಸೃಷ್ಟಿಸಲಿದೆ.
ಈ ಕುರಿತು ಭಾರತ ಸೆಲ್ಯುಲಾರ್ ಮತ್ತು ಎಲೆಕ್ಟ್ರಾನಿಕ್ಸ್ ಅಸೋಸಿಯೇಶನ್ (ಐಸಿಇಎ) ಅಧ್ಯಕ್ಷ ಪಂಕಜ್ ಮೋಹಿಂದ್ರೂ ಅವರೇ ಮಾಹಿತಿ ನೀಡಿದ್ದಾರೆ.
ಸ್ಮಾರ್ಟ್ಫೋನ್ ಉತ್ಪಾದನಾ ಉದ್ಯಮವು ಶೇಕಡಾ 1,100ರಷ್ಟು ಬೆಳವಣಿಗೆಯನ್ನು ಕಂಡಿದೆ. ಇದು ದೇಶೀಯ ಬೇಡಿಕೆಯನ್ನು ಪೂರೈಸಲು ಮಾತ್ರವಲ್ಲದೆ ರಫ್ತಿಗೂ ಕಾರಣವಾಗಿದೆ. ವರ್ಷಾಂತ್ಯದ ವೇಳೆಗೆ 50 ಸಾವಿರಕ್ಕೂ ಅಧಿಕ ನೇರ ಉದ್ಯೋಗಗಳ ನೇಮಕಾತಿ ಆಗಲಿದೆ ಎಂದಿದ್ದಾರೆ.
ಇದಾಗಲೇ ಫಾಕ್ಸ್ಕಾನ್, ವಿಸ್ಟ್ರಾನ್, ಸ್ಯಾಮ್ಸಂಗ್, ಡಿಕ್ಸನ್ ಮತ್ತು ಲಾವಾ ಸರ್ಕಾರದ ಉತ್ಪಾದನಾ-ಲಿಂಕ್ಡ್ ಪ್ರೋತ್ಸಾಹಕ (ಪಿಎಲ್ಐ) ಅಡಿಯಲ್ಲಿ ತಮ್ಮ ಉತ್ಪಾದನ ಸಾಮರ್ಥ್ಯವನ್ನು ಹೆಚ್ಚಿಸುವ ಅಥವಾ ಉತ್ಪಾದನಾ ನೆಲೆಗಳನ್ನು ಸ್ಥಾಪಿಸುವ ಪ್ರಕ್ರಿಯೆಯಲ್ಲಿದೆ.
ಈ ಬಗ್ಗೆ ಹಲವು ಸುತ್ತಿನ ಮಾತುಕತೆಗಳೂ ನಡೆದಿದ್ದು, ಈ ವರ್ಷದ ಅಂತ್ಯದಲ್ಲಿಯೇ ಇವುಗಳ ಆರಂಭವಾಗುವ ನಿರೀಕ್ಷೆ ಇದೆ. ಈ ಹಿನ್ನೆಲೆಯಲ್ಲಿ ಶೀಘ್ರದಲ್ಲೇ ನೇಮಕಾತಿಗೆ ಈ ಎಲ್ಲಾ ಕಂಪೆನಿಗಳಿಗು ಮುಂದಾಗಲಿವೆ ಎಂದು ತಿಳಿದುಬಂದಿದೆ.ಅಸೆಂಬ್ಲಿ, ಟೆಸ್ಟಿಂಗ್, ಮಾರ್ಕಿಂಗ್ ಮತ್ತು ಪ್ಯಾಕೇಜಿಂಗ್ (ಎಟಿಎಂಪಿ) ಘಟಕಗಳು ಸೇರಿದಂತೆ ಫೋನ್ ತಯಾರಿಕೆ ಮತ್ತು ನಿರ್ದಿಷ್ಟಪಡಿಸಿದ ಇಲೆಕ್ಟ್ರಾನಿಕ್ ಘಟಕಗಳು ಭಾರತದಲ್ಲಿ ಸ್ಥಾಪನೆಯಾಗಲಿವೆ.
ದೇಶದಲ್ಲಿ ಇಲೆಕ್ಟ್ರಾನಿಕ್ಸ್ ಉತ್ಪಾದನೆಯನ್ನು ಹೆಚ್ಚಿಸುವ ಸಲುವಾಗಿ ಭಾರತವು ಜೂನ್ನಲ್ಲಿ 50 ಸಾವಿರ ಕೋಟಿ ರೂಪಾಯಿಗಳ ‘ಎಲೆಕ್ಟ್ರಾನಿಕ್ಸ್ ಉತ್ಪಾದನಾ ಯೋಜನೆಗಳು’ ಎಂಬ ಯೋಜನೆಯನ್ನು ಪ್ರಾರಂಭಿಸಿದ್ದು, ದೇಶೀಯ ಉತ್ಪಾದನಾ ಮಾರ್ಗಗಳನ್ನು ಸ್ಥಾಪಿಸಲು ಜಾಗತಿಕ ಸ್ಮಾರ್ಟ್ಫೋನ್ ತಯಾರಕರಿಗೆ ಬೆಂಬಲ ನೀಡುವ ಮೂಲಕ ಪ್ರಾರಂಭಿಸುವುದಾಗಿ ಹೇಳಿದೆ.
ಇಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (ಮೀಟಿವೈ) 2020ರ ಏಪ್ರಿಲ್ 1ರಂದು ದೊಡ್ಡ ಪ್ರಮಾಣದ ಇಲೆಕ್ಟ್ರಾನಿಕ್ಸ್ ಉತ್ಪಾದನೆಗಾಗಿ ಉತ್ಪಾದನಾ ಲಿಂಕ್ಡ್ ಪ್ರೋತ್ಸಾಹಕ ಯೋಜನೆಗೆ (ಪಿಎಲ್ಐ) ಸೂಚಿಸಿತು. ಈ ಯೋಜನೆಯಡಿಯಲ್ಲಿ, ದೇಶೀಯ ಉತ್ಪಾದನೆಯನ್ನು ಹೆಚ್ಚಿಸಲು ಮತ್ತು ಸ್ಮಾರ್ಟ್ಫೋನ್ನಲ್ಲಿ ದೊಡ್ಡ ಹೂಡಿಕೆಗಳನ್ನು ಆಕರ್ಷಿಸಲು ಸರ್ಕಾರವು ಉತ್ಪಾದನಾ ಸಂಬಂಧಿತ ಪ್ರೋತ್ಸಾಹವನ್ನು ನೀಡಲಿದೆ.