5 State Elections: ಕೊರೋನಾ, ಓಮೈಕ್ರಾನ್ ಇದ್ದರೂ ಚುನಾವಣೆ ನಡೆಸುತ್ತೇವೆ ಎಂದ ಆಯೋಗ

ನವದೆಹಲಿ, (ಡಿ. 30) : 2022ರ ಫೆಬ್ರವರಿ ಅಥವಾ ಮಾರ್ಚ್ ವೇಳೆಗೆ ದೇಶಕ್ಕೆ ಕೊರೋನಾ ಮೂರನೇ ಅಲೆ (Corona Third Wave) ಅಪ್ಪಳಿಸಬಹುದು ಎಂಬ ಆತಂಕ ಇದೆ. ಅಲ್ಲದೆ ಓಮಿಕ್ರಾನ್ ವೈರಸ್ (Omicron Virus) ಬಹಳ ಬೇಗವಾಗಿ ಹರಡುತ್ತಿದೆ. ಆದರೆ ಸರಿಯಾಗಿ ಅದೇ ಸಮಯದಲ್ಲಿ ಉತ್ತರ ಪ್ರದೇಶ (Uttar Pradesh), ಉತ್ತರಖಂಡಾ (Uttarkhand), ಪಂಜಾಬ್ (Punjab), ಗೋವಾ (Goa) ಮತ್ತು ಮಣಿಪುರ (Manipura) ರಾಜ್ಯಗಳಲ್ಲಿ ಚುನಾವಣೆ ನಡೆಸಲಾಗುವುದು ಎಂದು ಕೇಂದ್ರ ಚುನಾವಣಾ ಆಯೋಗ (Central Election Communication) ಹೇಳಿದೆ. ಗುರುವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಮುಖ್ಯ ಚುನಾವಣಾ ಆಯುಕ್ತ ಸುನಿಲ್ ಚಂದ್ರ (Chief Election Commissioner Sunil Chandra) ಈ ವಿಷಯ ತಿಳಿಸಿದ್ದಾರೆ.

ಚುನಾವಣೆ ನಡೆಸಲು ನಿರ್ಧಾರ
ಅಲಹಾಬಾದ್ ಹೈಕೋರ್ಟ್ ನ್ಯಾಯಾಧೀಶ ಶೇಖರ್ ಯಾದವ್‌ ಅವರು ಇತ್ತೀಚೆಗೆ ‘ಕೊರೋನಾ ಮತ್ತು ಓಮೈಕ್ರಾನ್ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ವಿಧಾನಸಭಾ ಚುನಾವಣೆಗಳನ್ನು ಮುಂದೂಡುವ ಬಗ್ಗೆ ಪರಿಶೀಲನೆ ನಡೆಸಿ’  ಎಂದು ಕೇಂದ್ರ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದರು. ಇದಾದ ಮೇಲೆ ವಿಧಾನಸಭಾ ಚುನಾವಣೆಯ ಸಿದ್ಧತೆಗಳನ್ನು ಪರಿಶೀಲಿಸಲು ಚುನಾವಣಾ ಆಯೋಗದ ಅಧಿಕಾರಿಗಳು ಉತ್ತರ ಪ್ರದೇಶದ ಜಿಲ್ಲಾ ಮತ್ತು ವಿಭಾಗ ಮಟ್ಟದ ಅಧಿಕಾರಿಗಳನ್ನು ಭೇಟಿ ಮಾಡಿದ್ದರು. ಅಲ್ಲದೆ ಇತ್ತೀಚೆಗೆ ಕೇಂದ್ರ ಆರೋಗ್ಯ ಇಲಾಖೆಯ ಉನ್ನಾತಾಧಿಕಾರಿಗಳ ಜೊತೆ ಕೂಡ ಸಭೆ ನಡೆಸಿದ್ದರು. ಬಳಿಕ ಗುರುವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಮುಖ್ಯ ಚುನಾವಣಾ ಆಯುಕ್ತ ಸುನಿಲ್ ಚಂದ್ರ ಅವರು ‘ಚುನಾವಣೆ ನಡೆಸಲಾಗುವುದು’ ಎಂದೇ ಪ್ರಕಟಿಸಿದರು.

ಐದು ರಾಜ್ಯಗಳಲ್ಲೂ ನಡೆಯಲಿದೆ ಚುನಾವಣೆ
ಎಲ್ಲಾ ರಾಜಕೀಯ ಪಕ್ಷಗಳು ಕೂಡ ಐದು ರಾಜ್ಯಗಳಲ್ಲಿ ಅವಧಿಗೆ ಸರಿಯಾಗಿ ಚುನಾವಣೆ ನಡೆಸುವಂತೆ ತಿಳಿಸಿವೆ. ಕೋವಿಡ್ ಮಾರ್ಗಸೂಚಿ ಅನ್ವಯ ಚುನಾವಣೆ ‌ನಡೆಸಿ ಎಂದಿವೆ. ಈ ಹಿನ್ನೆಲೆಯಲ್ಲಿ ಕೇಂದ್ರ ಚುನಾವಣಾ ಆಯೋಗ  ಚುನಾವಣೆ ನಡೆಸಲು ನಿರ್ಧರಿಸಿದೆ ಎಂದು ಸುನಿಲ್ ಚಂದ್ರ ತಿಳಿಸಿದರು. ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸುವುದು ಆಯೋಗದ ಮೊದಲ ಆದ್ಯತೆ. ಈಗ ಕೊರೋನಾ ಮತ್ತು ಓಮೈಕ್ರಾನ್ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಎಲ್ಲಾ ರೀತಿಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವುದು ಕೂಡ ಆಯೋಗದ ಆದ್ಯತೆಯಾಗಿದೆ ಎಂದು ತಿಳಿಸಿದರು.

ಕೋವಿಡ ಮುನ್ನೆಚ್ಚರಿಕೆ

ಚುನಾವಣೆಗೆ ಒಳಪಡುವ ರಾಜ್ಯಗಳಾದ ಉತ್ತರ ಪ್ರದೇಶ, ಪಂಜಾಬ್, ಉತ್ತರಾಖಂಡ, ಗೋವಾ ಮತ್ತು ಮಣಿಪುರಗಳಲ್ಲಿ ಶೇಕಡಾ ‌ನೂರರಷ್ಟು ಲಸಿಕೆ ಅಭಿಯಾನ‌ ನಡೆಸಲು ಸೂಚಿಸಲಾಗುವುದು. ಕರ್ತವ್ಯಕ್ಕೆ ನಿಯೋಜಿಸಲಾದ ಎಲ್ಲಾ ಮತಗಟ್ಟೆ ಅಧಿಕಾರಿಗಳಿಗೆ ಸಂಪೂರ್ಣ ಲಸಿಕೆ ಹಾಕಲಾಗುವುದು. ಕೋವಿಡ್ ಲಸಿಕೆಗಳ ಬೂಸ್ಟರ್ ಶಾಟ್‌ಗಳನ್ನು ಪಡೆಯಲು ಅವರನ್ನು ಮುಂಚೂಣಿಯ ಕಾರ್ಯಕರ್ತರು ಎಂದು ಗುರುತಿಸಲಾಗುವುದು ಎಂದು ಮುಖ್ಯ ಚುನಾವಣಾ ಆಯುಕ್ತ ಸುಶೀಲ್ ಚಂದ್ರ ಹೇಳಿದರು.

‘ರಾಜ್ಯದಲ್ಲಿ 50 ಪ್ರತಿಶತದಷ್ಟು ಜನರು ಸಂಪೂರ್ಣವಾಗಿ ಲಸಿಕೆ ಹಾಕಿದ್ದಾರೆ ಮತ್ತು ರಾಜ್ಯದಲ್ಲಿ ಇದುವರೆಗೆ ಕೇವಲ ನಾಲ್ಕು ಓಮಿಕ್ರಾನ್ ಪ್ರಕರಣಗಳು ವರದಿಯಾಗಿವೆ’ ಎಂದು ಯುಪಿ ಅಧಿಕಾರಿಗಳು ನಮಗೆ ತಿಳಿಸಿದ್ದಾರೆ. ಕಳೆದ ಎರಡು ಉತ್ತರ ಪ್ರದೇಶ ಚುನಾವಣೆಗಳಲ್ಲಿ ಕಡಿಮೆ ಮತದಾನವಾಗಿದ್ದು ಚುನಾವಣಾ ಸಮಿತಿಗೆ ಕಳವಳಕಾರಿ ವಿಷಯವಾಗಿದೆ. ನಾವು ಅದನ್ನು ಕೂಲಂಕಷವಾಗಿ ಪರಿಶೀಲಿಸಿದ್ದೇವೆ ಮತ್ತು ಹೆಚ್ಚಿನ ಜಾಗೃತಿ ಮೂಡಿಸಲು ಅಧಿಕಾರಿಗಳು ಪ್ರಯತ್ನಿಸುತ್ತಿದ್ದೇವೆ.ಮತದಾನದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸಲು ಮಹಿಳೆಯರಿಗಾಗಿ 800 ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು. ಎಲ್ಲರನ್ನೂ ಒಳಗೊಳ್ಳುವ ಚುನಾವಣೆಯನ್ನು ನಡೆಸುತ್ತೇವೆ.

ಇದರಲ್ಲಿ ಯಾವುದೇ ಮತದಾರರು ಹಿಂದೆ ಉಳಿಯುವುದಿಲ್ಲ ಎಂದ ಸುನಿಲ್ ಚಂದ್ರಾ ಅವರು ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಉತ್ತರ ಪ್ರದೇಶ ರಾಜ್ಯದಲ್ಲಿ ಮತದಾನದ ಸಮಯವನ್ನು 1 ಗಂಟೆ ಹೆಚ್ಚು ಮಾಡಲಾಗುವುದು. ಅಲ್ಲದೆ 11,000 ಮತಗಟ್ಟೆಗಳನ್ನು ಹೆಚ್ಚಿಸಲಾಗುವುದು ಎಂದು ತಿಳಿಸಿದರು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *