ಗಾಂಧಿಯನ್ನು ಕೊಂದ ಗೋಡ್ಸೆಗೆ ಸೆಲ್ಯೂಟ್ ಎಂದಿದ್ದ ‘ದೇವ ಮಾನವ’ ಅರೆಸ್ಟ್: ದೇಶದ್ರೋಹದ ಕೇಸ್ ದಾಖಲು
ಹೈಲೈಟ್ಸ್:
- ಗಾಂಧಿಯನ್ನು ಕೊಂದ ಗೋಡ್ಸೆಗೆ ಸೆಲ್ಯೂಟ್ ಎಂದಿದ್ದ ಹಿಂದೂ ಧಾರ್ಮಿಕ ಮುಖಂಡ
- ಛತ್ತೀಸ್ಗಢ ರಾಜಧಾನಿ ರಾಯ್ಪುರದಲ್ಲಿ ನಡೆದ ಧರ್ಮ ಸಂಸದ್ನಲ್ಲಿ ದ್ವೇಷ ಭಾಷಣ
- ಮಧ್ಯ ಪ್ರದೇಶದ ಖಜುರಾಹೋದಲ್ಲಿ ಬಂಧಿಸಿದ ಛತ್ತೀಸ್ಘಢ ಪೊಲೀಸರು
ಭೋಪಾಲ್: ರಾಷ್ಟ್ರಪಿತ ಮಹಾತ್ಮಾ ಗಾಂಧಿ ಹಾಗೂ ಇಸ್ಲಾಂ ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದ ಸ್ವಯಂ ಘೋಷಿತ ದೇವ ಮಾನವ ಕಾಳಿಚರಣ್ ಮಹರಾಜ್ ಎಂಬವರನ್ನು ಛತ್ತೀಸ್ಗಢ ಪೊಲೀಸರು ಬಂಧಿಸಿದ್ದಾರೆ.
ಮಧ್ಯಪ್ರದೇಶದ ಖಜುರಹೋದಲ್ಲಿ ಕಾಳಿಚರಣ್ ಮಹರಾಜ್ನನ್ನು ಬಂಧಿಸಲಾಗಿದ್ದು, ಆತನ ವಿರುದ್ಧ ದೇಶದ್ರೋಹ ಮೊಕದ್ದಮೆ ದಾಖಲಿಸಲಾಗಿದೆ.
ಛತ್ತೀಸ್ಗಢದ ರಾಜಧಾನಿ ರಾಯ್ಪುರದಲ್ಲಿ ನಡೆದ ‘ಧರ್ಮ ಸಂಸದ್’ ಕಾರ್ಯಕ್ರಮದಲ್ಲಿ ಭಾಷಣ ಮಾಡುವ ವೇಳೆ, ರಾಷ್ಟ್ರಪಿತ ಮಹಾತ್ಮಾ ಗಾಂಧಿ ಹಾಗೂ ಮುಸ್ಲಿಮರ ವಿರುದ್ಧ ಆಕ್ಷೇಪಾರ್ಹ ಮಾತುಗಳನ್ನು ಆಡಿದ್ದರು. ಈ ಸಂಬಂಧ ರಾಯ್ಪುರ ಮಾಜಿ ಮೇಯರ್ ಪ್ರಮೋದ್ ದುಬೆ ಎಂಬವರು ಮೊಕದ್ದಮೆ ದಾಖಲಿಸಿದ್ದರು.
ದೂರಿನನ್ವಯ ತನಿಖೆ ಆರಂಭಿಸಿದ ಪೊಲೀಸರು, ಆರೋಪಿ ಕಾಳಿಚರಣ್ ಮಹರಾಜ್ನನ್ನು ಮಧ್ಯ ಪ್ರದೇಶದ ಖಜುರಹೋ ಎಂಬಲ್ಲಿ ದಸ್ತಗಿರಿ ಮಾಡಿದ್ದಾರೆ. ಆತನ ಬಂಧನವನ್ನು ರಾಯ್ಪುರದ ಹಿರಿಯ ಪೊಲೀಸ್ ಅಧಿಕಾರಿ ಪ್ರಶಾಂತ್ ಅಗರವಾಲ್ ಸ್ಪಷ್ಟ ಪಡಿಸಿದ್ದಾರೆ. ಅಲ್ಲದೇ ಕಾರ್ಯಕ್ರಮ ಆಯೋಜಿಸಿದ ಮಹಾಂತ್ ರಾಮ್ ಸುಂದರ್ ಎಂಬಾತನನ್ನೂ ಕೂಡ ದ್ವೇಷ ಹರಡಿದ ಆರೋಪದಲ್ಲಿ ಬಂಧಿಲಾಗಿದೆ.
ಖಜೂರಹೋದಲ್ಲಿ ಅತಿಥಿ ಗೃಹವೊಂದನ್ನು ಬುಕ್ ಮಾಡಿದ್ದ ಕಾಳಿಚರಣ್, ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಲು ಅತಿಥಿ ಗೃಹಕ್ಕಿಂತ 25 ಕಿ.ಮಿ ದೂರದಲ್ಲಿದ್ದ ಮನೆಯೊಂದರಲ್ಲಿ ವಾಸವಾಗಿದ್ದ. ಅಲ್ಲದೇ ಪೊಲೀಸರಿಂದ ತಪ್ಪಿಸಿಕೊಳ್ಳಲು ಆತ ಹಾಗೂ ಆತನ ಸಹಚರು ಮೊಬೈಲ್ ಕೂಡ ಸ್ವಿಚ್ ಆಫ್ ಮಾಡಿಕೊಂಡಿದ್ದರು. ಇದಾಗ್ಯೂ ಪೊಲೀಸರು ಆತನನ್ನು ಬಂಧಿಸಿದ್ದು, ರಾಯ್ಪುರಕ್ಕೆ ತರುವ ಸಿದ್ಧತೆಯಲ್ಲಿದ್ದಾರೆ.
ಕಾಳಿಚರಣ್ ಬಂಧನದ ವೇಳೆ ಅಂತಾರಾಜ್ಯ ಪೊಲೀಸ್ ಕಾರ್ಯಾಚರಣೆ ವೇಳೆ ಪಾಲಿಸಬೇಕಾದ ನಿಯಮಗಳನ್ನು, ಛತ್ತೀಸ್ಗಢ ಪೊಲೀಸರು ಪಾಲನೆ ಮಾಡಿಲ್ಲ. ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡದೇ ಕಾರ್ಯಾಚರಣೆ ಮಾಡಲಾಗಿದೆ ಎಂದು ಮಧ್ಯ ಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಆರೋಪಿಸಿದ್ದಾರೆ. ಅಲ್ಲದೇ ಈ ಬಗ್ಗೆ ಛತ್ತೀಸ್ಗಢದ ಪೊಲೀಸ್ ಮುಖ್ಯಸ್ಥರೊಂದಿಗೆ ಮಾತುಕತೆ ನಡೆಸಿದ ಎಂದು ತಮ್ಮ ರಾಜ್ಯದ ಪೊಲೀಸ್ ಮುಖ್ಯಸ್ಥರಿಗೆ ಸೂಚಿಸಿದ್ದಾರೆ.
ಇನ್ನು ಮಧ್ಯ ಪ್ರದೇಶದ ಗೃಹ ಸಚಿವರ ಆರೋಪಕ್ಕೆ ಪ್ರತಿಕ್ರಿಯೆ ನೀಡಿರು ಛತ್ತೀಸ್ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್, ‘ಯಾವುದೇ ನಿಯಮಗಳನ್ನು ನಮ್ಮ ಪೊಲೀಸರು ಉಲ್ಲಂಘಿಸಿಲ್ಲ. ಮಹಾತ್ಮಾ ಗಾಂಧಿಯವರನ್ನು ಅವಹೇಳನ ಮಾಡಿದವರ ಬಂಧನದಿಂದಾಗಿ ಅವರು ಸಂತೋಷಗೊಂಡಿದ್ದಾರಾ ಇಲ್ಲವಾ ಎನ್ನುವುದನ್ನು ತಿಳಿಸಿಲಿ’ ಎಂದು ತಿರುಗೇಟು ನೀಡಿದ್ದಾರೆ
ಕೆಲ ದಿನಗಳ ಹಿಂದೆ ನಡೆದ ಧರ್ಮ ಸಂಸದ್ ಸಭೆಯಲ್ಲಿ ಭಾಷಣ ಮಾಡುವಾಗ ಕಾಳಿಚರಣ್, ‘ಮಹಾತ್ಮಾ ಗಾಂಧಿ ಇಡೀ ದೇವಶನ್ನು ನಾಶ ಮಾಡಿದರು. ಅವರನ್ನು ಕೊಂದ ನ್ಯಾಥೂರಾಮ ಗೋಡ್ಸೆಗೆ ನನ್ನ ಸೆಲ್ಯೂಟ್’ ಎಂದು ಅವಹೇಳ ಮಾಡಿದ್ದ.
ಅಲ್ಲದೇ ಮುಸ್ಲಿಮರ ವಿರುದ್ಧವೂ ಅವಹೇಳಕಾರಿಯಾಗಿ ಮಾತನಾಡಿದ್ದ. ‘ರಾಜಕೀಯದ ಮೂಲಕ ದೇಶವನ್ನು ಕಬಳಿಸುವುದು ಇಸ್ಲಾಮಿನ ಗುರಿ’ ಎಂದು ತನ್ನ ಭಾಷಣದಲ್ಲಿ ಹೇಳಿದ್ದ. ಈ ಭಾಷಣದ ತುಣುಕುಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದವು. ಅವರ ಹೇಳಿಕೆ ಭಾರೀ ವಿರೋಧ ಆಗುತ್ತಿದ್ದಂತೆಯೆ ದೂರು ದಾಖಲಾಗಿತ್ತು. ಕಾಳಿಚರಣ್ ಮಹಾರಾಷ್ಟ್ರ ಮೂಲದವರಾಗಿದ್ದರಿಂದ ಮಹಾರಾಷ್ಟ್ರದಲ್ಲೂ ಮೊಕದ್ದಮೆ ದಾಖಲಿಸಲಾಗಿತ್ತು.