ಮೇಕೆದಾಟು ಪಾದಯಾತ್ರೆಗೆ ತಯಾರಿ ಮಾಡ್ತಿದ್ದೇನೆ, ಹೊಸ ಶೂ ಖರೀದಿ ಮಾಡಿದ್ದೇನೆ – ಡಿಕೆ ಶಿವಕುಮಾರ್
ಹೈಲೈಟ್ಸ್:
- ಕಾಂಗ್ರೆಸ್ ಪಾದಯಾತ್ರೆಯನ್ನು ಎಚ್ಡಿ ಕುಮಾರಸ್ವಾಮಿ ಮಕ್ಮಲ್ ಟೋಪಿ ಅಂದಿದ್ದಾರೆ. ಅನ್ನಲಿ, ಟೋಪಿಯೂ ಹಾಕಲಿ
- ಆದರೆ ನಾನು ಮಾತ್ರ ಪ್ರತಿದಿನ ಪಾದಯಾತ್ರೆಗೆ ಪ್ರಾಕ್ಟೀಸ್ ಮಾಡ್ತಿದ್ದೇನೆ ಎಂದ ಡಿಕೆ ಶಿವಕುಮಾರ್
- ಪಾದಯಾತ್ರೆಯಲ್ಲಿ ಭಾಗವಹಿಸಲು ಹೊಸ ಶೂ ಕೂಡ ಖರೀದಿಸಿದ್ದೇನೆ ಎಂದು ತಿಳಿಸಿದ ಡಿಕೆಶಿ
ಬೆಂಗಳೂರಿನಲ್ಲಿ ಗುರುವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಕಾಂಗ್ರೆಸ್ ಪಾದಯಾತ್ರೆಯ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ಮಕ್ಮಲ್ ಟೋಪಿ ಅಂದಿದ್ದಾರೆ. ಅನ್ನಲಿ, ಟೋಪಿ ಹಾಕಲಿ. ನಾನು ಮಾತ್ರ ಪ್ರತಿದಿನ ಪಾದಯಾತ್ರೆಗೆ ಪ್ರಾಕ್ಟೀಸ್ ಮಾಡ್ತಿದ್ದೇನೆ. ಹೊಸ ಶೂ ಕೂಡ ಖರೀದಿಸಿದ್ದೇನೆ ಎಂದು ತಮ್ಮ ಶೂ ಕಡೆ ನೋಡಿಕೊಂಡು ಎಚ್ಡಿಕೆ ಬಗ್ಗೆ ವ್ಯಂಗ್ಯವಾಡಿದರು.
ಆದಾಯ ತೆರಿಗೆ, ಜಾರಿ ನಿರ್ದೇಶನಾಲಯ, ಬೇನಾಮಿ ಆಸ್ತಿ ವಿಚಾರದಲ್ಲಿ ಏನೇನು ಆಗ್ತಿದೆ. ದೆಹಲಿ ಮಟ್ಟದಲ್ಲಿ ಏನೇನು ನಡೆಯುತ್ತಿದೆ ಎಲ್ಲಾ ಗೊತ್ತಿದೆ. ಯಾರು ಯಾರು ದೆಹಲಿಗೆ ಹೋಗಿ ಏನು ಮಾಡುತ್ತಿದ್ದಾರೆ ಎನ್ನುವುದೂ ಗೊತ್ತಿದೆ. ಮಳೆ ಆದರೇನು, ಚಳಿ ಆದರೇನು? ಆಗ ಒಬ್ಬರನ್ನ ಫೇಸ್ ಮಾಡಬೇಕಿತ್ತು. ಈಗ ಇಬ್ಬಿಬ್ಬರನ್ನು ಫೇಸ್ ಮಾಡಬೇಕಿದೆ. ಮಾಡೋಣ ಸಮಸ್ಯೆ ಇಲ್ಲ ಎಂದರು.
ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶದ ಬಗ್ಗೆ ಮಾತನಾಡಿ, ರಾಜ್ಯದ ಜನತೆಯ ಭಾವನೆ ಹೇಗಿದೆ ಎನ್ನುವುದಕ್ಕೆ ಈ ಫಲಿತಾಂಶವೇ ಸಾಕ್ಷಿ. ಇದು ಕಾಂಗ್ರೆಸ್ ಗೆಲುವು, ಜತೆಗೆ ಜನರ ಗೆಲುವು. ಹಳ್ಳಿ ಜನ ಮಾತ್ರವಲ್ಲ, ಪಟ್ಟಣದ ಜನರ ಒಲವು ಕೂಡ ಕಾಂಗ್ರೆಸ್ ಕಡೆ ಇದೆ. ಮುಖ್ಯಮಂತ್ರಿಗಳು, ಸಚಿವರು, ಶಾಸಕರ ಕ್ಷೇತ್ರದಲ್ಲೆಲ್ಲಾ ಏನೇನಾಗಿದೆ ಎಲ್ಲವೂ ಗೊತ್ತಿದೆಯಲ್ಲ ಎಂದರು.
ಅಧಿಕಾರ ಇದ್ದಾಗ, ಶಾಸಕರು ಇದ್ದಾಗ, ಸಹಜವಾಗಿ ಅವರ ಪಕ್ಷದವರಿಗೇ ಹೆಚ್ಚಿನ ಅವಕಾಶ ಇರುತ್ತದೆ. ಆದರೆ ಅದನ್ನು ಮೀರಿ ಜನ ನಮ್ಮ ಕಡೆ ಒಲವು ತೋರಿದ್ದಾರೆ. ಜನ ನಮ್ಮ ಮೇಲೆ ವಿಶ್ವಾಸ ಇಡುತ್ತಿದ್ದಾರೆ. ಅವರ ವಿಶ್ವಾಸ ಉಳಿಸುವಂತಹ ಆಡಳಿತವನ್ನು ಮುಂದಿನ ದಿನಗಳಲ್ಲಿ ಕೊಡುತ್ತೇವೆ ಎಂದು ಭರವಸೆ ನೀಡಿದರು.