ಕಾಳ ಸಂತೆಯಲ್ಲಿ ಯೂರಿಯಾ ರಸಗೊಬ್ಬರ ಮಾರಾಟ ತಡೆಗೆ ಕನ್ನಡ ಭೂಮಿ ಆಗ್ರಹ.
ಕಲಬುರಗಿ: ಯೂರಿಯಾ ರಸಗೊಬ್ಬರವನ್ನು ಎಂಆರ್ ಪಿ ದರಕ್ಕಿಂತ ದುಪ್ಪಟ್ಟುದರಕ್ಕೆ ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದ್ದು ಇದನ್ನು ಕೂಡಲೇ ತಡೆಯುವಂತೆ ಕನ್ನಡ ಭೂಮಿ ಜಾಗೃತಿ ಸಮಿತಿ ರಾಜ್ಯಾಧ್ಯಕ್ಷ ಲಿಂಗರಾಜ ಸಿರಗಾಪೂರ ಆಗ್ರಹಿಸಿದ್ದಾರೆ.
ರಸಗೊಬ್ಬರ ಅಂಗಡಿಗಳ ಮಾಲೀಕರು ರೈತರಿಗೆ ಹಾಡು ಹಗಲೇ ಲೂಟಿ ಮಾಡುತ್ತಿದ್ದಾರೆ.ಒಂದು ಚೀಲ ಯೂರಿಯಾ ಎಂಆರ್ ಪಿ ದರ 266ರೂ ಇದೆ.ಆದರೆ ರೈತರಿಂದ 500 ರೂಪಾಯಿ ಪಡೆಯಲಾಗುತ್ತಿದೆ.ರಸೀದಿಯಲ್ಲಿ ಮಾತ್ರ ಎಂಆರ್ ಪಿ ದರ ಹಾಕಲಾಗುತ್ತದೆ. ಹೆಚ್ಚಿನ ಹಣ ಪಡೆದಿದ್ದಕ್ಕೆ ಪ್ರಶ್ನಿಸಿದರೆ ಯೂರಿಯಾ ಅಭಾವವಿದೆ ಎಂಬ ಸಬೂಬು ಹೇಳುತ್ತಾರೆ.ಎಲ್ಲಾ ಅಂಗಡಿಯಲ್ಲಿ ಯೂರಿಯಾ ಸಾಕಷ್ಟು ದಾಸ್ತಾನು ಇದ್ದರೂ ರೈತರಿಂದ ದುಪ್ಪಟ್ಟು ಹಣ ಪಡೆಯಲಾಗುತ್ತಿದೆ.ಪ್ರತಿ ವರ್ಷವೂ ರಸಗೊಬ್ಬರ ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ.ಆದರೆ ಇದನ್ನು ಕೃಷಿ ಇಲಾಖೆ ಅಧಿಕಾರಿಗಳು ತಡೆಯುತ್ತಿಲ್ಲ.ಈಗಾಗಲೇ ರೈತರು ಅನೇಕ ಸಂಕಷ್ಟ ಎದುರಿಸುತ್ತಿದ್ದಾರೆ.ಆರ್ಥಿಕವಾಗಿ ಕುಗ್ಗು ಹೋಗಿದ್ದಾರೆ.ಅತಿವೃಷ್ಟಿಯಿಂದ ಮುಂಗಾರು ಬೆಳೆ ಹಾನಿಯಾಗಿವೆ.ಆದರೆ ರಸಗೊಬ್ಬರ ಅಂಗಡಿ ಮಾಲಿಕರು ಇವರಿಂದ ಹಣ ಸುಲಿಗೆ ಮಾಡುತ್ತಿದ್ದಾರೆ.ಇನ್ನು ಅನೇಕ ಕಡೆ ರಾಜಾರೋಷವಾಗಿ ನಕಲಿ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಮಾರಟ ಮಾಡಲಾಗುತ್ತಿದೆ.ಈ ಕುರಿತು ಸಂಬಂಧ ಪಟ್ಟ ಅಧಿಕಾರಿಗಳಿಗೆ ಅನೇಕ ಬಾರಿ ದೂರು ಸಲ್ಲಿಸಿದ್ದರು ಯಾವುದೇ ಪ್ರಯೋಜನವಾಗಿಲ್ಲ.ಈಗಲಾದರೂ ಸರ್ಕಾರ ಹಾಗೂ ಜಿಲ್ಲಾಡಳಿತ ರೈತರಿಂದ ಹೆಚ್ಚು ಹಣ ಪಡೆಯುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.ಅಂಥ ಅಂಗಡಿಗಳ ಪರವಾನಗಿ ರದ್ದು ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.