ರಾಜ್ಯದಲ್ಲಿ ಕೊರೋನಾ 3ನೇ ಅಲೆ ಆರಂಭ: ರಾಜಧಾನಿ ಬೆಂಗಳೂರಿನಲ್ಲಿ ದಿಢೀರ್ ಏರಿದ ಸೋಂಕು, ಹೆಚ್ಚಿದ ಆತಂಕ
ಬೆಂಗಳೂರು: ರಾಜ್ಯದ ಕೋವಿಡ್ ಪಾಸಿಟಿವಿಟಿ ದರ ಕಳೆದ ಆರು ತಿಂಗಳುಗಳಿಂದ ಶೇ.1ರೊಳಗೆ ಇದ್ದದ್ದು, ಇದೀಗ ಶೇ.2.59ಕ್ಕೆ ಏರಿಕೆಯಾಗಿದೆ. ಇದು ರಾಜ್ಯದಲ್ಲಿ ಕೋವಿಡ್ ಮೂರನೇ ಅಲೆ ಬಂದಿದೆ ಎಂಬುದನ್ನು ಖಚಿತಪಡಿಸುತ್ತದೆ. ನಾವೀಗ ಮೂರನೇ ಅಲೆಯ ಆರಂಭದಲ್ಲಿದ್ದೇವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ಅವರು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು. ನಾವೀಗ ಮೂರನೇ ಅಲೆಯ ಆರಂಭದಲ್ಲಿದ್ದೇವೆ. ದಿನದಿಂದ ದಿನಕ್ಕೆ ಹೊಸ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಈ ಮೊದಲು ಜ.15ರ ನಂತರ ಮೂರನೇ ಅಲೆ ಬರಬಹುದು ಎಂದು ತಜ್ಞರು ಹೇಳಿದ್ದರು. ಆದರೆ. ಈಗಾಗಲೇ ಮೂರನೇ ಅಲೆ ಆರಂಭವಾಗಿದೆ ಎಂದು ಹೇಳಿದ್ದಾರೆ.
ಓಮಿಕ್ರಾನ್ ಸೋಂಕು ದಿನೇ ದಿನೇ ಹೆಚ್ಚಾಗುತ್ತಿದೆ. ಸೋಮವಾರ ಒಂದೇ ದಿನ 1,290 ಪ್ರಕರಣ ಪತ್ತೆಯಾಗಿದ್ದು, ಬೆಂಗಳೂರು ನಗರದ ಒಂದರಲ್ಲಿಯೇ ಅತೀ ಹೆಚ್ಚು ಸೋಂಕಿತರಿದ್ದಾರೆ. ಮೆಟ್ರೋ ಪಾಲಿಟನ್ ಸಿಟಿಗಳಲ್ಲಿ ಹೆಚ್ಚು ಪ್ರಕರಣಗಳು ವರದಿಯಾಗುತ್ತಿವೆ. ಹೀಗಾಗಿ ಬೆಂಗಳೂರು ವಿಮಾನ ನಿಲ್ದಾಣ ಹಾಗೂ ಜನಸಂದಣಿ ಪ್ರದೇಶಗಳಲ್ಲಿ ಇನ್ನಷ್ಟು ನಿಗಾವಹಿಸುವ ಅಗತ್ಯವಿದೆ. ಉದಕ್ಕಾಗಿ ಮೈಕ್ರೋ ಕಂಟೈನ್ಮೆಂಟ್ ವಲಯಗಳನ್ನು ಮಾಡುವ ಬಗ್ಗೆ ಚಿಂತನೆ ನಡೆಸಿದ್ದೇವೆ. ಮಹಾರಾಷ್ಟ್ರ ಹಾಗೂ ದೆಹಲಿಯಲ್ಲಿ ಸೋಂಕು ಹೆಚ್ಚಳವಾಗಿದ್ದು, ಜನ ಹೆಚ್ಚು ಜಾಗೃತೆವಹಿಸಬೇಕಿದೆ ಎಂದು ತಿಳಿಸಿದ್ದಾರೆ.
ಬೆಂಗಳೂರು ಈಗಾಗಲೇ ರೆಡ್ ಝೋನ್ ನಲ್ಲಿದ್ದು, ಪ್ರತ್ಯೇಕವಾದ ಕಠಿಣ ನಿಯಮ ಅನಿರ್ವಾಯ, ಜನ ಸಾಮಾನ್ಯರಿಗೆ ಯಾವುದೇ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲು ಪ್ರಯತ್ನಿಸಲಾಗುವುದು. ಕೊರೋನಾ ಬರುವದನ್ನ ತಡೆಯಲು ಆಗುವುದಿಲ್ಲ. ಆದರೆ, ಸೋಂಕಿತರ ಸಂಖ್ಯೆ ಹೆಚ್ಚಾಗುವ ವೇಗವನ್ನು ತಗ್ಗಿಸಲು ಸಾಧ್ಯವಿದೆ. ಈ ಬಗ್ಗೆ ತಜ್ಞರೊಂದಿಗೆ ಸಭೆ ನಡೆಸಿ ಮಾರ್ಗೋಪಾಯ ರೂಪಿಸಲಾಗುವುದು ಎಂದಿದ್ದಾರೆ.
ಈ ನಡುವೆ ರಾಜ್ಯದಲ್ಲಿ ಕೋವಿಡ್ ಸೋಂಕು ನಾಗಾಲೋಟ ಆರಂಭಿಸಿದ್ದು, ಕಳೆದ 24 ಗಂಟೆಗಳ ಅವಧಿಯಲ್ಲಿ ಸೋಂಕು ಬಹುತೇಕ ಡಬಲ್ ಆಗಿದೆ. ಸೋಮವಾರ 1,290 ಪ್ರಕರಣ ವರದಿಯಾಗಿದ್ದರೆ, ಮಂಗಳವಾರ ಅದು 2,479ಕ್ಕೆ ತಲುಪಿದೆ. ಇದರೊಂದಿಗೆ ಪಾಸಿಟಿವಿಟಿ ದರ ಕೂಡ ಆತಂಕ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಶೇ.2.59ಕ್ಕೆ ನೆಗೆದಿದೆ.
ನಿನ್ನೆ ದಾಖಲಾದ ಪ್ರಕರಣಗಳು ಕಳೆದ ಆರು ತಿಂಗಳುಗಳಲ್ಲೇ ಅಧಿಕವಾಗಿದೆ. ಇದು ಸ್ಪಷ್ಟವಾಗಿ ಕೋವಿಡ್ ಮೂರನೇ ಅಲೆಗೆ ಬಿರುಸಾಗಿದೆ ಎಂಬುದನ್ನು ಸಾಬೀತುಪಡಿಸುತ್ತಿದೆ. ಸಾಮಾನ್ಯ ದಿನಗಳಿಗೆ ಹೋಲಿಸಿದರೆ 15-20 ಸಾವಿರ ಕಡಿಮೆ ಪರೀಕ್ಷೆ ನಡೆದಿದ್ದರೂ 2,479 ಜನರಲ್ಲಿ ಸೋಂಕು ಪತ್ತೆಯಾಗಿದೆ.
ರಾಜ್ಯದ ಮೊದಲ ಎರಡು ಅಲೆಗಳಂತೆಯೇ ಮೂರನೇ ಅಲೆ ವೇಳೆಯೂ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿಯೇ ಅತೀ ಹೆಚ್ಚು ಪ್ರಕರಣಗಳು ದಾಖಲಾಗುತ್ತಿದೆ.
ನಗದರಲ್ಲಿ 2,053 ಮಂದಿಯಲ್ಲಿ ಸೋಂಕು ವರದಿಯಾಗಿದೆ. ರಾಜ್ಯದ ಒಟ್ಟು ಪ್ರಕರಣದಲ್ಲಿ ಬೆಂಗಳೂರಿನ ಪಾಲು ಶೇ.80ರಷ್ಟಿದೆ ಎಂದು ಹೇಳಲಾಗುತ್ತಿದೆ. ರಾಜ್ಯದ ಒಟ್ಟು 13,532 ಸಕ್ರಿಯ ಪ್ರಕರಣಗಳಲ್ಲಿ 11,423 ಸಕ್ರಿಯ ಪ್ರಕರಣಗಳು ರಾಜ್ಯ ರಾಜಧಾನಿಯಲ್ಲಿಯೇ ಇದೆ. ಈ ಬೆಳವಣಿಗೆಯು ಇದೀಗ ನಗರದಲ್ಲಿ ಆತಂಕ ಹೆಚ್ಚಾಗುವಂತೆ ಮಾಡಿದೆ.
ಮೂರನೇ ಅಲೆ ಖಂಡಿತವಾಗಿಯೂ ಓಮಿಕ್ರಾನ್ ನಿಂದ ಸೃಷ್ಟಿಯಾಗಿದೆ. ನಿಯಂತ್ರಿತ ಸೌಲಭ್ಯಗಳಿಂದಾಗಿ ಓಮಿಕ್ರಾನ್ ಸೋಂಕನ್ನು ಶೀಘ್ರಗತಿಯಲ್ಲಿ ಕಂಡು ಹಿಡಿಯಲು ಸಾಧ್ಯವಾಗುತ್ತಿಲ್ಲ. ಮುಂದಿನ ವಾರ ಎಸ್-ಜೀನ್ ಪರೀಕ್ಷೆಯನ್ನು ಆರಂಭಿಸಲಾಗುತ್ತಿದ್ದು, ಇದು ಆರಂಭವಾಗಿದ್ದು ಆದರೆ, ಶೀಘ್ರಗತಿಯಲ್ಲಿ ರೂಪಾಂತರಿ ವೈರಸ್ ನ್ನು ಪತ್ತೆ ಹಚ್ಚಿ ಸೋಂಕು ನಿಯಂತ್ರಿಸಬಹುದಾಗಿದ ಎಂದು ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ಸದಸ್ಯರೊಬ್ಬರು ಹೇಳಿದ್ದಾರೆ.
ಓಮಿಕ್ರಾನ್ ಸೋಂಕಿಗೊಳಗಾದವರಲ್ಲಿ ಸೌಮ್ಯ ಲಕ್ಷಣಗಳು ಕಂಡು ಬರುತ್ತಿವೆ. ಸೋಂಕಿತರಿಂದ ಇತರರಿಗೆ ಶೀಘ್ರಗತಿಯಲ್ಲಿ ಸೋಂಕು ಹರಡುತ್ತಿದೆ. ಜನವರಿ 2ರವರೆಗೂ ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆ ಹೆಚ್ಚಾಗಿಲ್ಲ. ಸೋಂಕಿತರ ಸಂಖ್ಯೆ ಹೆಚಚಾಗುತ್ತಿದೆ ಆದರೆ, ಮರಣ ಸಂಖ್ಯೆ ಮಾತ್ರ ಒಂದಂಕಿಯಲ್ಲಿಯೇ ಇದೆ ಎಂದು ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ಮತ್ತೊಬ್ಬರ ಸದಸ್ಯರು ತಿಳಿಸಿದ್ದಾರೆ.
ಈ ನಡುವೆ ಮೂರನೇ ಅಲೆಯು ರಾಜ್ಯದಲ್ಲಿ ಅಪ್ಪಳಿಸಿದೆ ಎಂದು ಒಪ್ಪಿಕೊಂಡಿರುವ ತಾಂತ್ರಿಕ ಸಲಹಾ ಸಮಿತಿಯ ಸದಸ್ಯ ಡಾ.ಸಿ.ಎನ್.ಮಂಜುನಾಥ್ ಅವರು, ಮಾರ್ಚ್ 2020 ರಲ್ಲಿ ಮೊದಲ ಅಲೆ, ಮಾರ್ಚ್ 2021 ರಲ್ಲಿ ಎರಡನೇ ಅಲೆ ಮತ್ತು 2022 ರ ಜನವರಿಯಲ್ಲಿ ಹೊಸ ರೂಪಾಂತರಿ ವೈರಸ್ ನೊಂದಿಗೆ ಮೂರನೇ ಅಲೆ ಆರಂಭವಾಗಿದೆ ಎಂದು ಹೇಳಿದ್ದಾರೆ. ತಾನೇ ಅನುಕರಿಸುತ್ತದೆ ಎಂದು ಹೇಳಿದರು.
ಜನರು ಕೋವಿಡ್-ಸೂಕ್ತ ನಡವಳಿಕೆಯನ್ನು ಅನುಸರಿಸದೇ ಇರುವುದು, ಸಭೆಗಳು, ಹಬ್ಬಗಳು, ಆಚರಣೆಗಳಿಗೆ ಹಾಜರಾಗುವುದು, ಪ್ರವಾಸಿ ತಾಣಗಳಿಗೆ ಭೇಟಿ ನೀಡುವುದು ಮತ್ತು ಅನಗತ್ಯವಾಗಿ ಪ್ರಯಾಣ ಮಾಡುತ್ತಿರುವುದರಿಂದ ಸೋಂಕು ಉಲ್ಬಣಗೊಳ್ಳುತ್ತಿದೆ. ಅಂತರಾಷ್ಟ್ರೀಯ ಪ್ರಯಾಣವನ್ನು ನಿಷೇಧಿಸುವ ಬಗ್ಗೆ ಕೇಂದ್ರ ಸರ್ಕಾರ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ ಎಂದು ತಿಳಿಸಿದ್ದಾರೆ.
ಎಲ್ಲಾ ಪ್ರಕರಣಗಳು ಓಮಿಕ್ರಾನ್ನಿಂದಲೇ ವರದಿಯಾಗುತ್ತಿಲ್ಲ, ಶೇ.70 ಪ್ರಕರಣಗಳು ಡೆಲ್ಟಾ ರೂಪಾಂತರದ ಪ್ರಕರಣಗಳಾಗಿವೆ ಮತ್ತು ಉಳಿದವು ಓಮಿಕ್ರಾನ್ಗೆ ಸೇರಿದ್ದಾಗಿವೆ. ಕೆಲವೇ ವಾರಗಳಲ್ಲಿ ಓಮಿಕ್ರಾನ್ ಇಡೀ ಜಗತ್ತನ್ನೇ ಆವರಿಸಲಿದೆ. ಎಲ್ಲಾ ರೀತಿಯ ಸಭೆ ಸಮಾರಂಭಗಳನ್ನು ನಿಷೇಧಿಸುವ ಸಮಯ ಇದಾಗಿದೆ ಎಂದಿದ್ದಾರೆ.