ಹರಿಯೋ ನೀರನ್ನು, ಉರಿಯೋ ಸೂರ್ಯನನ್ನು ಯಾರು ನಿಲ್ಲಿಸಲಾಗಲ್ಲ: ಡಿ.ಕೆ.ಶಿವಕುಮಾರ್
ಬೆಂಗಳೂರು: ಕಾಂಗ್ರೆಸ್ ರಾಜ್ಯದ ಹಿತದೃಷ್ಟಿಯಿಂದ ನೀರಿಗಾಗಿ ನಡಿಗೆ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಜ.9 ರಿಂದ 19ರವರೆಗೂ ಯಾತ್ರೆ ಕೈಗೊಂಡಿದ್ದೇವೆ. ಏನಾದ್ರು ಮಾಡಿ ಆದರೆ ನಾವು ನಿರ್ಧರಿಸಿರೋ ಪಾದಯಾತ್ರೆ ನಡೆಸಲು ಬದ್ಧರಾಗಿದ್ದೇವೆ ಅಂತಾ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್(DK Shivakumar) ಹೇಳಿದ್ದಾರೆ. ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಜೊತೆಗೆ ಜಂಟಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ‘ಹರಿಯೋ ನೀರನ್ನು, ಉರಿಯೋ ಸೂರ್ಯನನ್ನು ಯಾರು ನಿಲ್ಲಿಸಲಾಗಲ್ಲ’ವೆಂದು ಹೇಳಿದ್ದಾರೆ.
ಕಾಂಗ್ರೆಸ್ ಪಾದಯಾತ್ರೆ(Mekedatu Project Dispute) ನಿಲ್ಲಿಸಲು ಬಿಜೆಪಿಯವರು ಸಂಚು ರೂಪಿಸಲು ಮುಂದಾಗಿದ್ದಾರೆ. ಆದರೆ ನಮ್ಮ ಪಾದಯಾತ್ರೆ ನಡೆಯಲಿದೆ. ಪಕ್ಷ ಬೇಧ ಮರೆತು ಎಲ್ಲರಿಗೂ ಆಹ್ವಾನ ನೀಡಿದ್ದೇವೆ. ಪಕ್ಷಾತೀತವಾಗಿ ಇದಕ್ಕೆ ಬೆಂಬಲ ಘೋಷಿಸಿದ್ದಾರೆ. ಈ ಮಧ್ಯೆ ಸರ್ಕಾರಕ್ಕೆ ಹಾಗೂ ಕೆಲ ಪಕ್ಷದವರಿಗೆ ತಡೆದುಕೊಳ್ಳಲು ಆಗುತ್ತಿಲ್ಲ. ನಾವು ಯಾವುದೇ ಕಾರ್ಯಕ್ರಮ ಮಾಡದಂತೆ ಜ.19ರವರೆಗೂ ನಿರ್ಬಂಧ ಹಾಕಿದ್ದಾರೆ. ರ್ಯಾಲಿ, ರಾಜಕೀಯ ಕಾರ್ಯಕ್ರಮ, ಸಭೆ ಸಮಾರಂಭ ಮಾಡಬಾರದೆಂದು ನಿರ್ಬಂಧ ಮಾಡಿದ್ದಾರೆ. ಕೋವಿಡ್-19(COVID-19) ನಿಯಮಗಳನ್ನು ಅನುಸರಿಸಿ ನಾವು ಪಾದಯಾತ್ರೆ ಮಾಡ್ತಿವಿ. ಜ.9 ರಂದು ಪಾದಯಾತ್ರೆ ಪ್ರಾರಂಭಿಸಿ 19ರಂದು ಬಹಿರಂಗ ಸಭೆ ಮೂಲಕ ಮುಕ್ತಾಯ ಮಾಡುತ್ತೇವೆಂದು ಡಿಕೆಶಿ ಹೇಳಿದರು.
ವಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ಮಾತನಾಡಿ, ನಾವು ಬಹಳ ದಿನಗಳ ಹಿಂದೆನೇ ಮೇಕೆದಾಟು ಯೋಜನೆ(Mekedatu Project)ವಿಳಂಬ ಆಗಿದೆ ಎಂದು ಹೇಳಿದ್ದೇವು. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು 2 ವರ್ಷವಾದ್ರೂ ಅನುಷ್ಠಾನಕ್ಕೆ ಪ್ರಯತ್ನ ಮಾಡಿಲ್ಲ. ನಾವು ಬಹಳ ದಿನಗಳಿಂದ ಕಾದಿದ್ದೇವೆ. ಆದರೆ ಬೆಂಗಳೂರಿನ ಜನರ ಹಿತದೃಷ್ಟಿಯಿಂದ ವಿಪಕ್ಷವಾಗಿ ಯೋಜನೆ ಜಾರಿಗೆ ಒತ್ತಾಯ, ಪ್ರತಿಭಟನೆ ಮಾಡುವ ಕಾರ್ಯ ಹಮ್ಮಿಕೊಂಡಿದ್ದೇವೆ. ಕೇಂದ್ರ ಸರ್ಕಾರ ಕೂಡ ರಾಜ್ಯದ ಬಗ್ಗೆ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಮಹದಾಯಿ, ಕೃಷ್ಣ ಮೇಲ್ದಂಡೆ ಯೋಜನೆ ಸೇರಿದಂತೆ ಅನೇಕ ವಿಚಾರಗಳಲ್ಲಿ ಕರ್ನಾಟಕಕ್ಕೆ ಕೇಂದ್ರ ದೊಡ್ಡ ಅನ್ಯಾಯ ಮಾಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ(Congress Padayatra) ಎಷ್ಟು ಮಂದಿ ಪಾಲ್ಗೊಳ್ಳುತ್ತಾರೆಂಬ ಪ್ರಶ್ನೆಗೆ ಉತ್ತರಿಸಿದ ಡಿಕೆಶಿ, ನಾವಿಬ್ಬರೆ ಪಾಲ್ಗೊಳ್ಳುತ್ತೇವೆ (ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್) ಎಂದರು. ನಾವು ಎಲ್ಲರಿಗೂ ಮನವಿ ಮಾಡಿದ್ದೇವೆ. ಬರುವ ಜನರಿಗೆ ಮಾಸ್ಕ್, ಸ್ಯಾನಿಟೈಸರ್ ಕೊಟ್ಟು ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವಂತೆ ಸೂಚಿಸುತ್ತೇವೆ. ಒಂದು ವೇಳೆ ಬಿಜೆಪಿ ಸರ್ಕಾರ(BJP Govt.)ದವರು 144 ಸೆಕ್ಷನ್ ಜಾರಿ ಮಾಡಿದರೆ ನಾವಿಬ್ಬರೆ ಪಾದಯಾತ್ರೆ ಮಾಡ್ತೀವಿ.144 ಸೆಕ್ಷನ್ ನಲ್ಲಿ 5 ಜನರ ಮೇಲೆ ಪಾಲ್ಗೊಳ್ಳುವ ಹಾಗಿಲ್ಲ. ಹೀಗಾಗಿ ನಾವು 4 ಜನ ಪಾಲ್ಗೊಳ್ಳುತ್ತೇವೆ ಎಂದು ಹೇಳಿದರು.