PM Modi: ದೇಶದಲ್ಲಿ 150 ಕೋಟಿ ಡೋಸ್ ಲಸಿಕೆ ನೀಡಿಕೆ ಪೂರ್ಣ; ಇದು ಭಾರತೀಯರ ಸಾಮರ್ಥ್ಯದ ಸಂಕೇತ ಎಂದ ಪ್ರಧಾನಿ ಮೋದಿ

ಹೊಸದಿಲ್ಲಿ: ಭಾರತವು ಇಂದು (ಶುಕ್ರವಾರ) 150 ಕೋಟಿ ಡೋಸ್ ಲಸಿಕೆ ನೀಡುವ ಮೂಲಕ ಐತಿಹಾಸಿಕ ಮೈಲಿಗಲ್ಲನ್ನು ತಲುಪಿದೆ ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ನುಡಿದಿದ್ದಾರೆ. ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ (Kolkata) ಚಿತ್ತರಂಜನ್ ನ್ಯಾಷನಲ್ ಕ್ಯಾನ್ಸರ್ ಇನ್ಸ್ಟಿಟ್ಯೂಟ್ (ಸಿಎನ್​ಸಿಐ- CNCI) ಎರಡನೇ ಕ್ಯಾಂಪಸ್ ಅನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿ ಪ್ರಧಾನಿ ಮಾತನಾಡಿದರು. 15-18 ವರ್ಷ ವಯಸ್ಸಿನವರಿಗೆ ವ್ಯಾಕ್ಸಿನೇಷನ್ ಪ್ರಮಾಣವನ್ನು ಪ್ರಾರಂಭಿಸುವ ಮೂಲಕ 2022 ಅನ್ನು ಉನ್ನತ ಮಟ್ಟದಲ್ಲಿ ಪ್ರಾರಂಭಿಸಿದ್ದೇವೆ. 5 ದಿನಗಳಲ್ಲಿ, 1.5 ಕೋಟಿಗೂ ಹೆಚ್ಚು ಮಕ್ಕಳಿಗೆ ಕೋವಿಡ್ ಲಸಿಕೆ ನೀಡಲಾಗಿದ್ದು, ಭಾರತದ ವಯಸ್ಕ ಜನಸಂಖ್ಯೆಯ 90 ಪ್ರತಿಶತಕ್ಕೂ ಹೆಚ್ಚು ಜನರು ಈಗಾಗಲೇ ಕೋವಿಡ್ ಲಸಿಕೆಯ (Covid Vaccination) ಮೊದಲ ಡೋಸ್ ಪಡೆದಿದ್ದಾರೆ ಎಂದು ಪ್ರಧಾನಿ ಹೇಳಿದ್ದಾರೆ.

‘‘ಅಂಕಿಅಂಶಗಳ ದೃಷ್ಟಿಯಿಂದ ಇದು ಒಂದು ದೊಡ್ಡ ಸಂಖ್ಯೆ. ಇದು ಪ್ರಪಂಚದ ಹೆಚ್ಚಿನ ದೊಡ್ಡ ದೇಶಗಳನ್ನೂ ಚಕಿತಗೊಳಿಸುತ್ತದೆ ಎಂದರೆ ತಪ್ಪಿಲ್ಲ. ಆದರೆ ಇದು ಭಾರತದ 130 ಕೋಟಿ ನಾಗರಿಕರ ಸಾಮರ್ಥ್ಯದ ಸಂಕೇತವಾಗಿದೆ. ಇದು ವಿಶ್ವಾಸ ಮತ್ತು ಸ್ವಾವಲಂಬನೆಯ ಸಂಕೇತ’’ ಎಂದು ಪ್ರಧಾನಿ ಸಂತಸ ವ್ಯಕ್ತಪಡಿಸಿದ್ದಾರೆ.

ಪರೀಕ್ಷೆಯಿಂದ ಲಸಿಕೆಯವರೆಗೆ ಭಾರತವು ರಚಿಸಿದ ಮೂಲಸೌಕರ್ಯವು ಕೊವಿಡ್ ವಿರುದ್ಧ ಹೋರಾಡುವ ಅತ್ಯುತ್ತಮ ಉದಾಹರಣೆಯಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು. ‘‘ಸುರಕ್ಷಿತ ಭವಿಷ್ಯಕ್ಕಾಗಿ ಶ್ರೀಮಂತರು ಮತ್ತು ಬಡವರು ಎಂಬ ಭೇದವಿಲ್ಲದೇ ಆರೋಗ್ಯ ಸೌಲಭ್ಯಗಳು ಮತ್ತು ಮೂಲಸೌಕರ್ಯಗಳನ್ನು ಸುಧಾರಿಸಲು ದಣಿವರಿಯದೆ ಕೆಲಸ ಮಾಡುತ್ತಿದ್ದೇವೆ’’ ಎಂದು ಪ್ರಧಾನಮಂತ್ರಿ ಇದೇ ವೇಳೆ ನುಡಿದರು.

ಏತನ್ಮಧ್ಯೆ, PM-JAY ಯೋಜನೆಯ ಅಡಿಯಲ್ಲಿ, 2.6 ಕೋಟಿಗೂ ಹೆಚ್ಚು ಕ್ಯಾನ್ಸರ್ ರೋಗಿಗಳು ದೇಶಾದ್ಯಂತ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆಯನ್ನು ಪಡೆದಿದ್ದಾರೆ ಎಂದು ಪ್ರಧಾನಿ ಮಾಹಿತಿ ನೀಡಿದರು. ಬಂಗಾಳದಲ್ಲಿ 5000 ಕ್ಕೂ ಹೆಚ್ಚು ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ ಎಂದು ಪ್ರಸ್ತಾಪಿಸಿದ ಪ್ರಧಾನಿ, ಸುಮಾರು 11 ಕೋಟಿ ಕೊವಿಡ್ ಲಸಿಕೆಗಳನ್ನು ಕೇಂದ್ರವು ರಾಜ್ಯಕ್ಕೆ ಉಚಿತವಾಗಿ ಒದಗಿಸಿದೆ ಎಂದರು. ರಾಜ್ಯಕ್ಕೆ 1500 ಕ್ಕೂ ಹೆಚ್ಚು ವೆಂಟಿಲೇಟರ್‌ಗಳು ಮತ್ತು 9000 ಕ್ಕೂ ಹೆಚ್ಚು ಹೊಸ ಆಮ್ಲಜನಕ ಸಿಲಿಂಡರ್‌ಗಳನ್ನು ಸಹ ನೀಡಲಾಗಿದೆ. 49 ಪಿಎಸ್‌ಎ ಹೊಸ ಆಮ್ಲಜನಕ ಘಟಕಗಳು ಸಹ ಕಾರ್ಯನಿರ್ವಹಿಸಲು ಪ್ರಾರಂಭಿಸಿವೆ ಎಂದು ಇದೇ ವೇಳೆ ಪ್ರಧಾನಿ ಮೋದಿ ಹೇಳಿದರು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *