ದೇಶದಲ್ಲಿ 1,41,968 ಕೊವಿಡ್​ 19 ಕೇಸ್​ಗಳು ದಾಖಲು; ಈ 5 ರಾಜ್ಯಗಳದ್ದೇ ದೊಡ್ಡ ಪಾಲು, ಪಾಸಿಟಿವಿಟಿ ದರ ಶೇ.9ಕ್ಕೆ ಏರಿಕೆ

ಭಾರತದಲ್ಲಿ ದೈನಿಕ ಪಾಸಿಟಿವಿಟಿ ದರ ಶೇ.9.28ಕ್ಕೆ ಏರಿಕೆಯಾಗಿದ್ದು, ಕಳೆದ 24 ಗಂಟೆಯಲ್ಲಿ ಬರೋಬ್ಬರಿ 1,41,986 ಕೊರೊನಾ ಕೇಸ್​​ಗಳು ದಾಖಲಾಗಿವೆ. ಇದು ನಿನ್ನೆಗಿಂತಲೂ ಶೇ. 21.3ರಷ್ಟು ಹೆಚ್ಚಳವಾದಂತೆ ಆಗಿದೆ. ಈ ಮೂಲಕ ಭಾರತದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ   3,53,68,372 ಕ್ಕೆ ತಲುಪಿದೆ. ಹಾಗೇ, ನಿನ್ನೆ ಪತ್ತೆಯಾದ 1,41,986 ಪ್ರಕರಣಗಳಲ್ಲಿ ಬಹುಪಾಲು ಮಹಾರಾಷ್ಟ್ರ (40,925 ), ಪಶ್ಚಿಮಬಂಗಾಳ(18,213), ದೆಹಲಿ (17,335 ), ತಮಿಳುನಾಡು ( 8,981) ಮತ್ತು ಕರ್ನಾಟಕ (8,449)ದಲ್ಲೇ ದಾಖಲಾಗಿದೆ. ಹಾಗೇ, 24ಗಂಟೆಯಲ್ಲಿ 285 ಮಂದಿ ಕೊರೊನಾದಿಂದ ಮೃತಪಟ್ಟಿದ್ದಾರೆ. ಸೋಂಕಿನ ಪ್ರಮಾಣ ಏರುತ್ತಿದ್ದರೂ ಒಂದು ದಿನದಲ್ಲಿ ದಾಖಲಾಗುವ ಸಾವಿನ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಒಟ್ಟಾರೆ ಸಾವಿನ ಸಂಖ್ಯೆ  4,83,463ಕ್ಕೆ ತಲುಪಿದೆ.

ಭಾರತದಲ್ಲಿ ವಾರದ ಪಾಸಿಟಿವಿಟಿ ದರ ಶೇ.5.66ರಷ್ಟಿದೆ.  ಹಾಗೇ, ಚೇತರಿಕೆ ಪ್ರಮಾಣ 97.57ಕ್ಕೆ ಇಳಿದಿದೆ. ದೇಶದಲ್ಲಿ ಸಕ್ರಿಯ ಕೊರೊನಾ ಪ್ರಕರಣಗಳ ಸಂಖ್ಯೆ 24 ಗಂಟೆಯಲ್ಲಿ 100,806ರಷ್ಟಾಗಿದ್ದು, ಒಟ್ಟಾರೆ ಸಕ್ರಿಯ ಪ್ರಕರಗಳು 4,72,169 ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಒಂದೆಡೆ ಕೊವಿಡ್​ 19 ಕೇಸ್​ಗಳ ಸಂಖ್ಯೆ ಏರುತ್ತಿದ್ದರೆ, ಇನ್ನೊಂದೆಡೆ ಒಮಿಕ್ರಾನ್​ ಪ್ರಕರಣಗಳಲ್ಲೂ ಹೆಚ್ಚಳ ಕಂಡುಬರುತ್ತಿದೆ. 24ಗಂಟೆಯಲ್ಲಿ 64 ಹೊಸ ಒಮಿಕ್ರಾನ್​ ಕೇಸ್​ಗಳು ದಾಖಲಾಗಿದ್ದು, ದೇಶದಲ್ಲಿ ಒಟ್ಟೂ ಒಮಿಕ್ರಾನ್ ಸೋಂಕಿತರ ಸಂಖ್ಯೆ 3,007ಕ್ಕೆ ತಲುಪಿದೆ.  ಸದ್ಯ ದೇಶದ 27 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಈ ಹೊಸತಳಿ ಕಾಣಿಸಿಕೊಂಡಿದೆ. ಮಹಾರಾಷ್ಟ್ರದಲ್ಲಿ ಒಮಿಕ್ರಾನ್ ಸೋಂಕಿತರ ಸಂಖ್ಯೆ 876ಕ್ಕೆ ಏರಿದ್ದು, ದೆಹಲಿಯಲ್ಲಿ 513ಮಂದಿ ಸೋಂಕಿತರು ಇದ್ದಾರೆ. ಇದುವರೆಗೆ 1203 ಮಂದಿ ಒಮಿಕ್ರಾನ್​ನಿಂದ ಚೇತರಿಸಿಕೊಂಡಿದ್ದಾರೆ.

ಭಾರತದಲ್ಲಿ ಕೊವಿಡ್​ 19 ಪ್ರಕರಣಗಳ ಸಂಖ್ಯೆ 2020ರ ಆಗಸ್ಟ್​ 7ರಂದು 20 ಲಕ್ಷದ ಗಡಿ ದಾಟಿತ್ತು. ಆಗಸ್ಟ್​ 23ರಂದು 30 ಲಕ್ಷಕ್ಕೆ ತಲುಪಿತ್ತು. ಹಾಗೇ ಅದೇ ವರ್ಷ ಸೆಪ್ಟೆಂಬರ್​​5ರಂದು 40 ಲಕ್ಷ, ಸೆಪ್ಟೆಂಬರ್​ 16ರಂದು 50 ಲಕ್ಷ,  ಸೆಪ್ಟೆಂಬರ್​ 28ರಂದು 60 ಲಕ್ಷ, ಅಕ್ಟೋಬರ್​ 11ರಂದು 70 ಲಕ್ಷ, ಅಕ್ಟೋಬರ್ 29ರಂದು 80 ಲಕ್ಷ, ನವೆಂಬರ್​ 20ರಂದು 90 ಲಕ್ಷದ ಗಡಿ ದಾಟಿತ್ತು. ಈಗ ದೇಶದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 3 ಕೋಟಿ ಗಡಿ ದಾಟಿದ್ದರೂ, ಅದರಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 4 ಲಕ್ಷಕ್ಕೂ ಅಧಿಕವಾಗಿದೆ. ದೇಶದಲ್ಲಿ ಇದುವರೆಗೆ 156.06 ಕೋಟಿ ಡೋಸ್​ ಲಸಿಕೆ ನೀಡಲಾಗಿದ್ದು, ಮಕ್ಕಳಿಗೆ ಕೂಡ ಕೊರೊನಾ ಲಸಿಕೆ ಅಭಿಯಾನ ನಡೆಯುತ್ತಿದೆ.  ಬರೀ ಭಾರತದಲ್ಲಷ್ಟೇ ಅಲ್ಲ, ಯುಎಸ್, ಯುಕೆಯಂಥ ದೇಶಗಳಲ್ಲೂ ಕೂಡ ಕೊವಿಡ್​ 19 ಕೇಸ್​ಗಳು ಮಿತಿಮೀರಿವೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *