Yash Birthday: ಯಶ್ ಜನ್ಮದಿನಕ್ಕೆ ಆಯ್ರಾ, ಯಥರ್ವ್ ಕೊಟ್ಟ ಗಿಫ್ಟ್ ಏನು? ಫೋಟೋ ಹಂಚಿಕೊಂಡ ರಾಧಿಕಾ ಪಂಡಿತ್
ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಬೆಳೆದಿರುವ ಕನ್ನಡದ ನಟ ಯಶ್ (Yash) ಅವರು ಇಂದು (ಜ.8) ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಅಭಿಮಾನಿಗಳು, ಸೆಲೆಬ್ರಿಟಿಗಳು, ಆಪ್ತರು, ಸ್ನೇಹಿತರು ಅವರಿಗೆ ಶುಭಾಶಯ ಕೋರುತ್ತಿದ್ದಾರೆ. ಒಮಿಕ್ರಾನ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಅಭಿಮಾನಿಗಳ ಜೊತೆ ಸೇರಿಕೊಂಡು ಬರ್ತ್ಡೇ ಆಚರಿಸಿಕೊಳ್ಳಲು ಯಶ್ಗೆ ಸಾಧ್ಯವಾಗುತ್ತಿಲ್ಲ. ಕೇವಲ ಕುಟುಂಬದವರು ಮತ್ತು ಆಪ್ತರ ಜತೆ ಅವರು ಈ ದಿನವನ್ನು ಕಳೆಯಲಿದ್ದಾರೆ. ಅಪ್ಪನ ಹುಟ್ಟುಹಬ್ಬಕ್ಕಾಗಿ ಆಯ್ರಾ ಯಶ್ (Ayra Yash) ಮತ್ತು ಯಥರ್ವ್ ಯಶ್ (Yatharv Yash) ವಿಶೇಷ ಗಿಫ್ಟ್ ನೀಡಿದ್ದಾರೆ. ಅದರ ಫೋಟೋವನ್ನು ರಾಧಿಕಾ ಪಂಡಿತ್ (Radhika Pandit) ಅವರು ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ.
ಯಶ್ ಅವರು ಪಕ್ಕಾ ಫ್ಯಾಮಿಲಿ ಮ್ಯಾನ್. ಸಿನಿಮಾ ಚಟುವಟಿಕೆಗಳಲ್ಲಿ ಎಷ್ಟೇ ಬ್ಯುಸಿ ಇದ್ದರೂ ಕೂಡ ಅವರು ಕುಟುಂಬದವರಿಗಾಗಿ ಸಮಯ ನೀಡುತ್ತಾರೆ. ಮಕ್ಕಳ ಜತೆ ಆಟವಾಡುತ್ತ ಕಾಲ ಕಳೆಯುತ್ತಾರೆ. ಅವರಿಗಾಗಿ ಪುತ್ರಿ ಆಯ್ರಾ ಮತ್ತು ಪುತ್ರ ಯಥರ್ವ್ ಒಂದು ವಿಶೇಷ ಗಿಫ್ಟ್ ನೀಡಿದ್ದಾರೆ. ಹೃದಯದ ಚಿತ್ರ ಬರೆದು, ಅದರೊಳಗೆ ಆಯ್ರಾ ಮತ್ತು ಯಥರ್ವ್ ಅಂಗೈ ಮುದ್ರೆ ಒತ್ತಿದ್ದಾರೆ. ಈ ಮುದ್ದಾದ ಉಡುಗೊರೆಯ ಫೋಟೋ ಈಗ ವೈರಲ್ ಆಗುತ್ತಿದೆ.
ವಿವಿಧ ಕ್ಷೇತ್ರದ ಗಣ್ಯರು ಕೂಡ ಯಶ್ಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ಈ ದಿನದ ಖುಷಿಯನ್ನು ಹೆಚ್ಚಿಸಲು ‘ಹೊಂಬಾಳೆ ಫಿಲ್ಮ್ಸ್’ ಕೂಡ ಸಾಥ್ ನೀಡಿದೆ. ಅಭಿಮಾನಿಗಳ ಆಸೆಯಂತೆಯೇ ಯಶ್ ಜನ್ಮದಿನದ ಪ್ರಯುಕ್ತ ‘ಕೆಜಿಎಫ್: ಚಾಪ್ಟರ್ 2’ ಸಿನಿಮಾದಿಂದ ಹೊಸ ಪೋಸ್ಟರ್ ಬಿಡುಗಡೆ ಆಗಿದೆ. ಬೆಳಗ್ಗೆ 9 ಗಂಟೆಗೆ ಪೋಸ್ಟರ್ ರಿಲೀಸ್ ಮಾಡುವುದಾಗಿ ಚಿತ್ರತಂಡ ಒಂದು ದಿನ ಮುಂಚಿತವಾಗಿ ಘೋಷಿಸಿತ್ತು. ಅದಕ್ಕಾಗಿ ಯಶ್ ಫ್ಯಾನ್ಸ್ ಕಾದು ಕುಳಿತಿದ್ದರು. ಈಗ ಹೊಸ ಪೋಸ್ಟರ್ ಕಂಡು ಎಲ್ಲರೂ ಖುಷಿಪಟ್ಟಿದ್ದಾರೆ.
ಅಲ್ಲದೇ, ‘ಕೆಜಿಎಫ್ 2’ ಚಿತ್ರದ ರಿಲೀಸ್ ದಿನಾಂಕದ ಬಗ್ಗೆ ಕೆಲವರಿಗೆ ಅನುಮಾನ ಮೂಡಿತ್ತು. ಆ ಬಗ್ಗೆಯೂ ಚಿತ್ರತಂಡದಿಂದ ಸ್ಪಷ್ಟನೆ ಸಿಕ್ಕಿದೆ. ಹೊಸ ಪೋಸ್ಟರ್ ಕುರಿತು ಟ್ವೀಟ್ ಮಾಡಿರುವ ‘ಹೊಂಬಾಳೆ ಫಿಲ್ಮ್ಸ್’ ಸಂಸ್ಥೆಯು #KGF2onApr14 ಎಂಬ ಹ್ಯಾಶ್ ಟ್ಯಾಗ್ ಬಳಸುವ ಮೂಲಕ ರಿಲೀಸ್ ದಿನಾಂಕದಲ್ಲಿ ಸದ್ಯಕ್ಕಂತೂ ಯಾವುದೇ ಬದಲಾವಣೆ ಇಲ್ಲ ಎಂಬುದನ್ನು ಖಚಿತಪಡಿಸಿದೆ.