ಕಾಂಗ್ರೆಸ್ನ ಮೇಕೆದಾಟು ಪಾದಯಾತ್ರೆ ಚಾಲನೆಗೆ ಕ್ಷಣಗಣನೆ; ನಟ ಶಿವರಾಜ್ ಕುಮಾರ್ ಭಾಗಿ ಸಾಧ್ಯತೆ
ಬೆಂಗಳೂರು: ಕಾಂಗ್ರೆಸ್ ಪಕ್ಷದ ಮೇಕೆದಾಟು ಪಾದಯಾತ್ರೆಗೆ ಕ್ಷಣಗಣನೆ ಆರಂಭವಾಗಿದ್ದು, ನಟ ಶಿವರಾಜ್ ಕುಮಾರ್ ಅವರು ಪಾದಯಾತ್ರೆಗೆ ಚಾಲನೆ ನೀಡುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ನಿನ್ನೆಯಷ್ಟೇ ನಟ ಶಿವರಾಜ್ ಕುಮಾರ್ ಅವರನ್ನು ಭೇಟಿ ಮಾಡಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು, ಪಾದಯಾತ್ರೆಯಲ್ಲಿ ಭಾಗಿಯಾಗುವಂತೆ ಆಹ್ವಾನ ನೀಡಿದ್ದರು. ಈ ಹಿನ್ನೆಲೆಯಲ್ಲಿ ಇಂದು ಪಾದಯಾತ್ರೆಗೆ ಶಿವರಾಜ್ ಕುಮಾರ್ ಅವರು ಚಾಲನೆ ನೀಡುವ ಸಾಧ್ಯತೆಗಳಿವೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆಯುವ ಈ ಪಾದಯಾತ್ರೆಯಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ.
ಮೊದಲ ದಿನ 15 ಕಿ.ಮೀ ಪಾದಯಾತ್ರೆ ನಡೆಯಲಿದ್ದು, ಸಂಗಮದಿಂದ ದೊಡ್ಡ ಆಲಹಳ್ಳಿಯವರೆಗೂ ನಡೆಯಲಿರುವ ಪಾದಯಾತ್ರೆಗೆ ಸರ್ಕಾರ ಈಗಾಗಲೇ ಅನುಮತಿ ನಿರಾಕರಿಸಿದೆ. ರಾಮನಗರ ಜಿಲ್ಲೆಯಾದ್ಯಂತ 144ನೇ ಸೆಕ್ಷನ್ ಜಾರಿಗೊಳಿಸಲಾಗಿದ್ದು, ಪಾದಯಾತ್ರೆ ನಡೆಸಿದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಸ್ಪಿ ಗಿರೀಶ್ ತಿಳಿಸಿದ್ದಾರೆ.
ಆದರೆ, ಪಾದಯಾತ್ರೆ ಮಾಡೇ ಮಾಡುತ್ತೇವೆ ಎಂದಿರುವ ಕಾಂಗ್ರೆಸ್ ನಾಯಕರು ಯಾವುದೇ ಅಡ್ಡಿ-ಆತಂಕಗಳು ಎದುರಾದರೂ ಪಾದಯಾತ್ರೆ ನಿಲ್ಲಿಸುವುದಿಲ್ಲ ಎಂದು ತಿಳಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಎಲ್ಲಾ ನಾಯಕರು ಈಗಾಗಲೇ ಕನಕಪುರ ತಲುಪಿದ್ದು, ಬೆಳಗ್ಗೆ ಸಂಗಮದತ್ತ ಪ್ರಯಾಣ ಬೆಳೆಸಿದರು.
ಮಧ್ಯರಾತ್ರಿ ಸ್ವಲ್ಪಕಾಲ ಸುತ್ತಾಡಿ ಸಂಗಮದಲ್ಲಿ ಉಳಿದ ಡಿಕೆ ಶಿವಕಮಾರ್ ಅವರು, ಬೆಳಗ್ಗೆ ಅಲ್ಲಿ ನಡೆಯುವ ಪೂಜಾ ವಿಧಿವಿಧಾನಗಳಲ್ಲಿ ಪಾಲ್ಗೊಂಡರು.
ಈ ನಡುವೆ ಪಾದಯಾತ್ರೆ ಚಾಲನೆ ಸಮಾರಂಭವನ್ನು ಯಶಸ್ವಿಗೊಳಿಸುವ ಸಲುವಾಗಿ ಸ್ಥಳೀಯ ಮುಖಂಡರ ಜತೆ ಸಭೆ ನಡೆಸಿದ್ದು, ನಿನ್ನೆ(ಶನಿವಾರ) ತಡರಾತ್ರಿವರೆಗೂ ಅಗತ್ಯ ಸಿದ್ಧತೆಗಳ ಪರಿಶೀಲನೆ ನಡೆಸಿದರು.
ಶಿವಕುಮಾರ್ ಅವರ ಬೆಂಬಲಿಗರು ಮಾತನಾಡಿ, ಪೊಲೀಸರ ಕ್ರಮ ಎದುರಿಸಲು ನಾವು ಸಿದ್ಧರಿದ್ದೇವೆ. ನಿಯಮ ಉಲ್ಲಂಘನೆಯಾದರೆ ದಂಡ ಪಾವತಿ ಮಾಡುವುದು ಬಿಟ್ಟರೆ. ಪಾದಯಾತ್ರೆ ವೇಳೆ ದೊಡ್ಡ ಸಮಸ್ಯೆಗಳು ಎದುರಾಗುವುದಿಲ್ಲ ಎಂಬ ಭರವಸೆಯೂ ಇದೆ ಎಂದಿದ್ದಾರೆ.
ಮೊದಲು ಪರೀಕ್ಷೆ ನಡೆಸಲು ಮುಂದಾಗುವ ಕಾಂಗ್ರೆಸ್ ನಾಯಕರು ಮೊದಲು ಪಕ್ಷದ ಕಾರ್ಯಕರ್ತನ್ನು ಸಂಗಮದಲ್ಲಿ ಸೇರಿಸುತ್ತಿದ್ದು, ಬಳಿಕವಷ್ಟೇ ಪಕ್ಷದ ಮುಖಂಡರು ಸ್ಥಳಕ್ಕೆ ಆಗಮಿಸುತ್ತಾರೆ. ಪಾದಯಾತ್ರೆ ಯೋಜನೆಯು ಪರಿಸ್ಥಿತಿಗೆ ಅನುಗುಣವಾಗಿ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.