Corona Virus: ರಾಜಧಾನಿಯಲ್ಲಿ ತಲ್ಲಣ ಸೃಷ್ಟಿಸಿದ ಸೋಂಕಿತರ ಸಂಖ್ಯೆ: 8 ವಾರ್ಡ್ ಗಳು ಡೇಂಜರ್, ಡೇಂಜರ್!
!ರಾಜಧಾನಿ ಬೆಂಗಳೂರಿನಲ್ಲಿ (Bengaluru) ಮಾಹಾಮಾರಿ ಕೋವಿಡ್ ಸೋಂಕಿತರ (Corona Positive Case) ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ನಗರದ ಕೆಲ ವಾರ್ಡುಗಳಲ್ಲಿ ಕೋವಿಡ್ (COVID 19) ಸ್ಫೋಟವಾಗುತ್ತಿದೆ. ಬೆಂಗಳೂರಿನಲ್ಲಿ ನಿನ್ನೆ ಒಂದೇ ದಿನ 9 ಸಾವಿರಕ್ಕೂ ಅಧಿಕ ಕೊರೊನಾ ಪ್ರಕರಣಗಳು ವರದಿಯಾಗಿದ್ರೆ, 148 ಓಮೈಕ್ರಾನ್ ಕೇಸ್ ಪತ್ತೆಯಾಗಿವೆ. ಈ ವಾರ್ಡುಗಳಲ್ಲಿ ಸೋಂಕು ಹರಡುವಿಕೆ ಪ್ರಮಾಣ ಸಹ ಏರಿಕೆಯಾಗುತ್ತಿರುವ ಹಿನ್ನೆಲೆ ಬಿಬಿಎಂಪಿ (BBMP) ಈ ಪ್ರದೇಶಗಳನ್ನು ರೆಡ್ ಝೋನ್ (Red Zone) ಎಂದು ಗುರುತಿಸಿ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ರೆಡ್ ಝೋನ್ ನಲ್ಲಿರುವ ಬೆಂಗಳೂರಿನ ಎಂಟು ವಾರ್ಡುಗಳು ಮಾಹಿತಿ ಇಲ್ಲಿದೆ.
ಎಂಟು ವಾರ್ಡ್ ಗಳು ಮತ್ತು ಸೋಂಕು ಹರಡುವಿಕೆ ಪ್ರಮಾಣ
ಬೊಮ್ಮನಹಳ್ಳಿ -ವಲಯ- 5.16%
ಯಲಹಂಕ- 5.42%
ಪಶ್ಚಿಮ- 6.07%
ಆರ್ ಆರ್ ನಗರ- 6.16%
ದಾಸರಹಳ್ಳಿ- 6.50%
ಮಹದೇವಪುರ- 7.55%
ದಕ್ಷಿಣ ವಲಯ- 7.55%
ಬೆಂಗಳೂರು ಪೂರ್ವ ವಲಯ- 8.08%
ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಕಳೆದ ಒಂದು ವಾರದಲ್ಲಿ ಕಂಟೈನ್ಮೆಂಟ್ ಝೋನ್ ಗಳ ಸಂಖ್ಯೆ ದಿಢೀರ್ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಕಂಟೈನ್ಮೆಂಟ್ ಜೋನ್ ಗಳ ಸಂಖ್ಯೆ 412ಕ್ಕೆ ಏರಿಕೆಯಾಗಿದೆ. ಮಹದೇವಪುರ & ಬೊಮ್ಮನಹಳ್ಳಿ ವಲಯಗಳಲ್ಲಿ ಅತೀ ಹೆಚ್ಚಿನ ಕಂಟೈನ್ಮೆಂಟ್ ಜೋನ್ ಗಳ ರಚನೆ ಮಾಡಲಾಗಿದೆ.
ಯಾವ್ಯಾವ ವಲಯಗಳಲ್ಲಿ ಎಷ್ಟೆಷ್ಟು ಕಂಟೈನ್ಮೆಂಟ್ ಜೋನ್ ಗಳು ರಚನೆಯಾಗಿವೆ.!?
ಬೊಮ್ಮನಹಳ್ಳಿ ವಲಯ – 100
ಮಹದೇವಪುರ – 143
ದಕ್ಷಿಣ ವಲಯ – 49
ಪಶ್ಚಿಮ ವಲಯ – 44
ಪೂರ್ವ ವಲಯ – 33
ಯಲಹಂಕ ವಲಯ – 33
ದಾಸರಹಳ್ಳಿ ವಲಯ – 6
ಆರ್‌ಆರ್ ನಗರ ವಲಯ – 4
ಒಟ್ಟು – 412 ಕಂಟೈನ್ಮೆಂಟ್ ಜೋನ್ ಗಳು
ಹೋಮ್ ಐಸೋಲೇಶನ್ ನಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್
ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೆ ನಿನ್ನೆ ಕೋವಿಡ್ ಸೋಂಕು ತಗುಲಿರೋದು ದೃಢವಾಗಿತ್ತು. ಹೀಗಾಗಿ ಅವರ ಪ್ರಾಥಮಿಕ ಸಂಪರ್ಕದಲ್ಲಿದ್ದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೋಮ್ ಐಸೋಲೇಶನ್ ಆಗಿದ್ದಾರೆ, ಈ ಕುರಿತು ಟ್ವಿಟರ್ ಮೂಲಕ ಮಾಹಿತಿ ನೀಡಿದ್ದಾರೆ.
ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ ಅವರಿಗೆ ಇಂದು ಕೊರೊನಾ ಸೋಂಕು ದೃಢಪಟ್ಟಿದ್ದು, ಅವರ ಪ್ರಾಥಮಿಕ ಸಂಪರ್ಕಿತನಾದ್ದರಿಂದ ನಾನು ಎರಡು ದಿನಗಳ ಕಾಲ ಸ್ವಯಂ ಪ್ರೇರಿತನಾಗಿ ಐಸೋಲೇಶನ್ ಗೆ ಒಳಪಡುತ್ತಿದ್ದೇನೆ. ಇಂದು ಸಂಜೆ ಮಾಡಿಸಿದ Abott ID NOW ಪರೀಕ್ಷೆಯಲ್ಲಿ ನೆಗಟಿವ್ ಬಂದಿದ್ದು, 2 ದಿನಗಳ ನಂತರ RT-PCR ಪರೀಕ್ಷೆಗೆ ಒಳಪಡಲಿದ್ದೇನೆ.
ನನಗೆ ಯಾವುದೇ ರೀತಿಯ ರೋಗ ಲಕ್ಷಣಗಳಿಲ್ಲದಿದ್ದರೂ, ಇತರರ ಆರೋಗ್ಯ ಮತ್ತು ಸುರಕ್ಷತೆಯ ಹಿತದೃಷ್ಟಿಯಿಂದ ನೈತಿಕ ಜವಾಬ್ದಾರಿ ಹೊತ್ತು ಮುಂದಿನ ಎರಡು ದಿನಗಳ ಕಾಲ ನಾನು ಪ್ರತ್ಯೇಕವಾಗಿರಲಿದ್ದೇನೆ. ನನ್ನ ಎಲ್ಲ ಅಧಿಕೃತ ಕಾರ್ಯಕ್ರಮಗಳು ರದ್ದಾಗಿದ್ದು, ಸಭೆ, ಕಡತ ವಿಲೇವಾರಿ ಕಾರ್ಯಗಳನ್ನು ವರ್ಚ್ಯುಯಲ್ ಮಾಧ್ಯಮಗಳ ಮೂಲಕ ಮುಂದುವರಿಸಲಿದ್ದೇನೆ.
ಆದ್ದರಿಂದ ಮುಂದಿನ ಎರಡು ದಿನಗಳ ಕಾಲ ನನ್ನನ್ನು ಭೌತಿಕವಾಗಿ ಭೇಟಿ ಮಾಡಲು ಯಾರೂ ಬರಬಾರದೆಂದು ಮನವಿ ಮಾಡುತ್ತೇನೆ. ಎರಡು ದಿನಗಳ ನಂತರ ಆರ್ ಟಿ-ಪಿಸಿಆರ್ ಪರೀಕ್ಷೆ ಮಾಡಿಸಿ ವರದಿ ನೆಗಟಿವ್ ಬಂದಲ್ಲಿ ಬುಧವಾರದಿಂದ ಎಂದಿನಂತೆ ನನ್ನ ಕಾರ್ಯ-ಕಲಾಪಗಳಲ್ಲಿ ತೊಡಗಿಸಿಕೊಳ್ಳುತ್ತೇನೆ ಎಂದು ಸಚಿವ ಸುಧಾಕರ್ ತಿಳಿಸಿದ್ದಾರೆ.
ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಿ ಸಿಎಂ ಮನವಿ
ನಿನ್ನೆ ಕೋವಿಡ್ ಸೋಂಕಿಗೆ ತುತ್ತಾಗಿರುವ ಬಗ್ಗೆ ಮುಖ್ಯಮಂತ್ರಿಗಳೇ ಟ್ವಿಟರ್ ಮೂಲಕ ಹೇಳಿಕೊಂಡಿದ್ದರು. ನನಗೆ ಇಂದು ಕೋವಿಡ್-19 ಸೋಂಕು ದೃಢಪಟ್ಟಿದ್ದು, ಆರೋಗ್ಯವಾಗಿ ಇದ್ದೇನೆ. ನನ್ನ ಸಂಪರ್ಕಕ್ಕೆ ಬಂದವರು ದಯವಿಟ್ಟು ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಟ್ವೀಟ್ ಮೂಲಕ ಸಿಎಂ ಮನವಿ ಮಾಡಿಕೊಂಡಿದ್ದಾರೆ.