ಬೂಸ್ಟರ್ ಡೋಸ್ ಲಸಿಕೆಗೆ ಚಾಲನೆ ನೀಡಿದ ಬೆನ್ನಲ್ಲೇ ಸಿಎಂ ಬೊಮ್ಮಾಯಿಗೆ ಕೊರೋನಾ ಪಾಸಿಟಿವ್
ಬೆಂಗಳೂರು: ಕೊರೋನಾ ಮೂರನೇ ಅಲೆ ಅಬ್ಬರಿಸುತ್ತಿರುವುದರ ನಡುವೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೋಮವಾರ ರಾಜ್ಯದಲ್ಲಿ 60 ವರ್ಷ ದಾಟಿದ ಅನಾರೋಗ್ಯ ಪೀಡಿತರು, ಆರೋಗ್ಯ ಕಾರ್ಯಕರ್ತರು ಹಾಗೂ ಮುಂಚೂಣಿ ಕಾರ್ಯಕರ್ತರಿಗೆ ಮುಂಜಾಗ್ರತಾ ಡೋಸ್(ಬೂಸ್ಟರ್ ಡೋಸ್) ಲಸಿಕಾ ಅಭಿಯಾನಕ್ಕೆ ನೀಡಿದ್ದಾರೆ. ಇದರ ಬೆನ್ನಲ್ಲೇ ಸಿಎಂ ಬೊಮ್ಮಾಯಿ ಅವರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದ್ದು, ತೀವ್ರ ಆತಂಕಕ್ಕೆ ಕಾರಣವಾಗಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಸಿಎಂ ಬೊಮ್ಮಾಯಿ ಅವರು, ನನಗೆ ಇಂದು ಕೋವಿಡ್-19 ಸೋಂಕು ದೃಢಪಟ್ಟಿದ್ದು, ಆರೋಗ್ಯವಾಗಿ ಇದ್ದೇನೆ. ನನ್ನ ಸಂಪರ್ಕಕ್ಕೆ ಬಂದವರು ದಯವಿಟ್ಟು ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಮನವಿ ಮಾಡಿದ್ದಾರೆ.
ಸಿಎಂ ಇಂದು ಬೆಳಗ್ಗೆ ಕೊರೋನಾ ಟೆಸ್ಟ್ ಮಾಡಿಸಿಕೊಂಡಿದ್ದು, ಸಂಜೆ ಪಾಸಿಟಿವ್ ಎಂದು ಕೊವಿಡ್ ರಿಪೋರ್ಟ್ ಬಂದಿದೆ. ಈ ಹಿನ್ನೆಲೆಯಲ್ಲಿ ನಾಳೆ ಸಿಎಂ ಬೊಮ್ಮಾಯಿ ನಡೆಸಬೇಕಿದ್ದ ಸಿಟಿ ರೌಂಡ್ಸ್ ರದ್ದಾಗಿದೆ.
ಸಿಎಂ ಬೊಮ್ಮಾಯಿ ಅವರು ಕೋವಿಡ್ ಬೂಸ್ಟರ್ ಡೋಸ್ ಲಸಿಕೆಗೆ ಚಾಲನೆ ನೀಡಿದ ನಂತರ ಇಂದು ನಿಧನರಾದ ಹಿರಿಯ ಸಾಹಿತಿ ಪ್ರೋ. ಚಂದ್ರಶೇಖರ ಪಾಟೀಲ ಅವರ ಅಂತಿಮ ದರ್ಶನ ಪಡೆದಿದ್ದರು. ಅಲ್ಲದೆ ಆಡಳಿತ ಸುಧಾರಣಾ ಸಭೆಯಲ್ಲೂ ಸಹ ಸಿಎಂ ಭಾಗಿಯಾಗಿದ್ದರು.