ಸತತ ಎರಡನೇ ವರ್ಷವೂ ಕೊಪ್ಪಳದ ಗವಿ ಮಠದ ಜಾತ್ರೆ ರದ್ದು: ಭಕ್ತರಲ್ಲಿ ನಿರಾಸೆ

ಹೈಲೈಟ್ಸ್‌:

  • ದಕ್ಷಿಣ ಭಾರತದ ಮಹಾಕುಂಭ ಮೇಳ ಎಂಬ ಖ್ಯಾತಿ ಹೊಂದಿರುವ ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಜಾತ್ರೆ ರದ್ದು
  • ಜನವರಿ 19ರಂದು ನಡೆಯಬೇಕಿದ್ದ ಮಹಾರಥೋತ್ಸವ ತೀರಾ ಸರಳವಾಗಿ ಕೋವಿಡ್ ನಿಯಮಾವಳಿಯಂತೆ ನಡೆಯಲಿದೆ
  • 15 ದಿನ ನಡೆಯುವ ಈ ಜಾತ್ರೆಯು ಉತ್ತರ ಕರ್ನಾಟಕ ಭಾಗದ ಪ್ರಮುಖ ಜಾತ್ರೆಯಾಗಿದೆ

ಕೊಪ್ಪಳ: ರಾಜ್ಯದಲ್ಲಿ ಕೋವಿಡ್‌ ರೂಪಾಂತರಿ ಓಮಿಕ್ರಾನ್ ಸೋಂಕು ತೀವ್ರವಾಗಿ ಹರಡುತ್ತಿರುವುದರಿಂದ, ದಕ್ಷಿಣ ಭಾರತದ ಮಹಾಕುಂಭ ಮೇಳ ಎಂಬ ಖ್ಯಾತಿ ಹೊಂದಿರುವ ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಜಾತ್ರೆ ರದ್ದು ಮಾಡಲಾಗಿದೆ.

ಜಾತ್ರೆ ರದ್ದು ಮಾಡಿ ಗವಿಮಠದಿಂದ ಅಧಿಕೃತ ಪ್ರಕಟಣೆ ಹೊರಬಿದ್ದಿದೆ. ಈ ಮಧ್ಯೆ ಜನವರಿ 19ರಂದು ನಡೆಯಬೇಕಿದ್ದ ಮಹಾರಥೋತ್ಸವ ತೀರಾ ಸರಳವಾಗಿ ಕೋವಿಡ್ ನಿಯಮಾವಳಿಯಂತೆ ನಡೆಯಲಿದೆ. ಆ ಮೂಲಕ ಸತತ ಎರಡನೇ ವರ್ಷವೂ ಭಕ್ತರ ಖುಷಿಗೆ ಕೋವಿಡ್‌ ಮಹಾಮಾರಿ ತಣ್ಣೀರು ಎರಚಿದೆ.

15 ದಿನ ನಡೆಯುವ ಈ ಜಾತ್ರೆಯು ಉತ್ತರ ಕರ್ನಾಟಕ ಭಾಗದ ಪ್ರಮುಖ ಜಾತ್ರೆಯಾಗಿದೆ. ಇಲ್ಲಿಯವರೆಗೂ ಜಾತ್ರೆ ನಡೆಯುತ್ತೊ ಇಲ್ಲವೋ ಎಂಬ ಗೊಂದಲವಿತ್ತು. ಈಗ ಜಾತ್ರೆ ರದ್ದು ಮಾಡಲಾಗಿದೆ ಎಂದು ಮಠದಿಂದಲೇ ಅಧಿಕೃತ ಪ್ರಕಟಣೆ ಬಂದಿದ್ದು, ಆ ಮೂಲಕ ಎಲ್ಲಾ ಗೊಂದಲಗಳಿಗೆ ತೆರೆ ಬಿದ್ದಿದೆ. ಇನ್ನು ಜಾತ್ರೆ ನಡೆಯುಲು ಉದ್ದೇಶಿಸಲಾದ 15 ದಿನಗಳ ದಾಸೋಹ ಎಂದಿನಂತೆ ನಡೆಯಲಿದೆ. ಕೋವಿಡ್‌ ನಿಯಮಾವಳಿ ಪಾಲಿಸಿ, ಅತೀ ಕಡಿಮೆ ಸಂಖ್ಯೆಯ ಜನರಿಗೆ ದಾಸೋಹ ನಡೆಯಲಿದೆ. ಈ ಮಧ್ಯೆ ಜಾತ್ರೆಯಲ್ಲಿ ಮಹಾದಾಸೋಹಕ್ಕೆ ಯಾರೂ ಕೂಡ ದವಸ ಧಾನ್ಯ ನೀಡದಂತೆ ಮಠದ ಪ್ರಕಟಣೆಯಲ್ಲಿ ಹೇಳಲಾಗಿದೆ.

ಜಾತ್ರೆ ರದ್ದಾದರೂ, ಗವಿಮಠದ ಜಾತ್ರೆಯ ಸಂದರ್ಭದಲ್ಲಿ ವರ್ಷಂಪ್ರತಿ ನಡೆಯುತ್ತಿದ್ದ ಧಾರ್ಮಿಕ ಹಾಗೂ ಸಂಪ್ರಾದಾಯಿಕ ವಿಧಿ ವಿಧಾನಗಳು ಎಂದಿನಂತೆ ನಡೆಯಲಿವೆ. ಆದರೆ ಸಾಂಸ್ಕೃತಿಕ, ಸಮಾಜಿಕ ಕಾರ್ಯಕ್ರಮಗಳಿಗೆ ಅವಕಾಶ ಇಲ್ಲ. ಜಾತ್ರೆಯ ಮೆರುಗನ್ನು ಹೆಚ್ಚಿಸುತ್ತಿದ್ದ, 1000ಕ್ಕೂ ಹೆಚ್ಚು ವಿವಿಧ ವ್ಯಾಪಾರ ಮಳಿಗೆಗಳು ಇರುವುದಿಲ್ಲ. ಬರುವ ದಿನಗಳಲ್ಲಿ ಇನ್ನೂ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಳವಾದರೆ ಶ್ರೀ ಗವಿಸಿದ್ದೇಶ್ವರ ದರ್ಶನವನ್ನು ಸಹ ಬಂದ್ ಮಾಡುವ ಸಾಧ್ಯತೆಯೂ ಇದೆ. ಈ ಬಾರಿ ಉತ್ತಮ ಮಳೆ ಹಾಗೂ ಬೆಳೆ ಬಂದಿದ್ದು ಅದ್ಧೂರಿ ಜಾತ್ರೆಯಾಗುತ್ತದೆ ಎಂದುಕೊಂಡಿದ್ದ ಭಕ್ತರಿಗೆ ನಿರಾಸೆಯಾಗಿದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *