ಮಕರ ಸಂಕ್ರಾಂತಿ ಹಿನ್ನೆಲೆ ನದಿ ಸ್ನಾನಕ್ಕೆ ತೆರಳಿದ್ದ ಇಬ್ಬರು ಸ್ನೇಹಿತರು ನೀರುಪಾಲು
ರಾಯಚೂರು: ಮಕರ ಸಂಕ್ರಾಂತಿ ಹಿನ್ನೆಲೆ ನದಿಯಲ್ಲಿ ಸ್ನಾನಕ್ಕೆ ತೆರಳಿದ್ದ ಸ್ನೇಹಿತರು ನೀರುಪಾಲಾದ ಘಟನೆ ರಾಯಚೂರು ತಾಲೂಕಿನ ಶಕ್ತಿನಗರದ ಬಳಿ ಕೃಷ್ಣಾ ನದಿಯಲ್ಲಿ ನಡೆದಿದೆ. ಮಕರ ಸಂಕ್ರಾಂತಿ ಹಬ್ಬ ಹಿನ್ನೆಲೆ ನದಿ ಸ್ನಾನ ಮಾಡಲು ಹೋಗಿದ್ದ ಸ್ನೇಹಿತರು ನೀರುಪಾಲಾಗಿದ್ದಾರೆ. ಗಣೇಶ್(42), ಉದಯ್ ಕುಮಾರ್(43) ಮೃತರು.
ಸಂಕ್ರಾಂತಿ ಹಬ್ಬ ಹಿನ್ನೆಲೆ ಪೂಜೆ ಹಾಗೂ ಪುಣ್ಯ ಸ್ನಾನಕ್ಕೆ ಎಂದು ನಿನ್ನೆ ಐದಾರು ಜನ ಸ್ನೇಹಿತರು ಕೃಷ್ಣಾ ನದಿಗೆ ಹೋಗಿದ್ದರು. ಈ ವೇಳೆ ಗಣೇಶ್ ಮತ್ತು ಉದಯ್ ಕುಮಾರ್ ನದಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಗಣೇಶ್ ಶವ ಪತ್ತೆಯಾಗಿದ್ದು ಉದಯ್ ಮೃತದೇಹಕ್ಕಾಗಿ ಶೋಧ ಕಾರ್ಯ ಮುಂದುವರೆದಿದೆ. ಮೃತ ಗಣೇಶ್ ರಾಯಚೂರಿನ ನಿಜಲಿಂಗಪ್ಪ ಕಾಲೋನಿ ನಿವಾಸಿ ಹಾಗೂ ಉದಯ್‌ಕುಮಾರ್ ರಾಯಚೂರಿನ KEB ಕಾಲೋನಿಯ ನಿವಾಸಿ. ಸದ್ಯ ಶಕ್ತಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಬ್ಬದ ಸಂಭ್ರಮದಲ್ಲಿರಬೇಕಾಗಿದ್ದ ಕುಟುಂಬದಲ್ಲಿ ಸೂತಕನ ಛಾಯೆ ಆವರಿಸಿದೆ.