‘ನನ್ನ ಧರ್ಮದ ಬಗ್ಗೆ ಮಾತಾಡ್ಬೇಡಿ’; ಪಕ್ಕದ ಮನೆಯವರಿಗೆ ಎಚ್ಚರಿಕೆ ನೀಡಿ ಕೇಸ್​ ಜಡಿದ ಸಲ್ಮಾನ್​ ಖಾನ್

ಅನೇಕ ಸಂದರ್ಭಗಳಲ್ಲಿ ನಟ ಸಲ್ಮಾನ್​ ಖಾನ್​ (Salman Khan) ಅವರು ಬಹುಬೇಗ ಕೋಪಗೊಳ್ಳುತ್ತಾರೆ. ಬಿಗ್​ ಬಾಸ್​ ಕಾರ್ಯಕ್ರಮವನ್ನು ನಿರೂಪಣೆ ಮಾಡುವಾಗ ಅವರು ಕೆಂಡಾಮಂಡಲ ಆದ ಅನೇಕ ಉದಾಹರಣೆಗಳಿವೆ. ಸಾರ್ವಜನಿಕ ಸ್ಥಳಗಳಲ್ಲಿ ಅಭಿಮಾನಿಗಳು ಅತಿಯಾಗಿ ವರ್ತಿಸಿದಾಗಲೂ ಅವರು ಕೂಗಾಡಿದ್ದುಂಟು. ಈಗ ಸಲ್ಮಾನ್​ ಖಾನ್​ ಅವರು ಪಕ್ಕದ ಮನೆಯವರ ವಿರುದ್ಧ ಗುಡುಗಿದ್ದಾರೆ. ಅದು ಧರ್ಮದ (Salman Khan Religion) ಕಾರಣಕ್ಕೆ ಎಂಬುದು ಗಮನಿಸಬೇಕಾದ ಅಂಶ. ಸಲ್ಮಾನ್​ ಖಾನ್​ ಅವರ ತಂದೆ ಮುಸ್ಲಿಂ, ಸಲ್ಲು ತಾಯಿ ಹಿಂದೂ. ಹಾಗಾಗಿ ಅವರ ಮನೆಯಲ್ಲಿ ಎರಡೂ ಧರ್ಮದ ಆಚರಣೆಯನ್ನು ಪಾಲಿಸಲಾಗುತ್ತದೆ. ಆದರೆ ಸಲ್ಮಾನ್​ ಖಾನ್​ ಅವರ ಧರ್ಮದ ಬಗ್ಗೆ ಅವರ ಪನ್ವೇಲ್​ ಫಾರ್ಮ್​ಹೌಸ್​ನ (Panvel Farmhouse) ನೆರೆಹೊರೆಯವರು ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದು ಸಲ್ಲು ಕೋಪಕ್ಕೆ ಕಾರಣ ಆಗಿದೆ. ಈ ಜಗಳದ ಕುರಿತಂತೆ ಅವರು ನೇರವಾಗಿ ಕೋರ್ಟ್​ ಮೆಟ್ಟಿಲು ಏರಿದ್ದಾರೆ. ಈ ಪ್ರಕರಣದ ಪೂರ್ತಿ ವಿವರ ಇಲ್ಲಿದೆ..

ಮುಂಬೈನ ಹೊರ ವಲಯದ ಪನ್ವೇಲ್​ನಲ್ಲಿ ಸಲ್ಮಾನ್​ ಖಾನ್​ ಅವರು ಫಾರ್ಮ್​ಹೌಸ್​ ಹೊಂದಿದ್ದಾರೆ. ಅದು ಸಲ್ಲು ಅಚ್ಚುಮೆಚ್ಚಿನ ಜಾಗ ಕೂಡ ಹೌದು. ಶೂಟಿಂಗ್​ ಇಲ್ಲದಿರುವಾಗ ಅವರು ಹೆಚ್ಚಿನ ಸಮಯವನ್ನು ಈ ಫಾರ್ಮ್​ಹೌಸ್​ನಲ್ಲಿಯೇ ಕಳೆಯುತ್ತಾರೆ. ಪನ್ವೇಲ್​ ಫಾರ್ಮ್​ಹೌಸ್​ ಪಕ್ಕದಲ್ಲಿ ಕೇತನ್​ ಕಕ್ಕಡ್​ ಎಂಬ ವ್ಯಕ್ತಿ ಆಸ್ತಿ ಹೊಂದಿದ್ದಾರೆ. ಅವರಿಗೂ ಸಲ್ಮಾನ್​ ಖಾನ್​ಗೂ ಕೆಲವು ವಿಚಾರಗಳಲ್ಲಿ ಕಿರಿಕ್​ ಆಗಿದೆ. ಈ ಜಗಳದ ನಡುವೆ ಸಲ್ಮಾನ್​ ಖಾನ್​ ಅವರ ಧರ್ಮದ ವಿಚಾರವನ್ನು ಕೇತನ್​ ಎಳೆದುತಂದಿದ್ದಾರೆ. ಇದು ಸಲ್ಲು ಕೋಪಕ್ಕೆ ಕಾರಣ ಆಗಿದೆ.

ಸಲ್ಮಾನ್​ ಜೊತೆಗಿನ ಕಿರಿಕ್​ ಕುರಿತಂತೆ ಯೂಟ್ಯೂಬ್​ ಚಾನೆಲ್​ಗಳಿಗೆ ಕೇತನ್ ಅವರು ಇತ್ತೀಚೆಗೆ ಸಂದರ್ಶನ ನೀಡಿದ್ದರು. ಅದರಲ್ಲಿ ಸಲ್ಮಾನ್​ ಖಾನ್​ ವಿರುದ್ಧ ಅನೇಕ ಗಂಭೀರ ಆರೋಪಗಳನ್ನು ಮಾಡಲಾಗಿದೆ. ಈ ಎಲ್ಲ ವಿಚಾರಗಳನ್ನು ಸಲ್ಲು ತುಂಬ ಗಂಭೀರವಾಗಿ ಪರಿಗಣಿಸಿದ್ದಾರೆ. ಹಾಗಾಗಿ ಅವರು ಕೋರ್ಟ್​ ಮೊರೆ ಹೋಗಿದ್ದಾರೆ. ತಮ್ಮ ಬಗ್ಗೆ ಬಾಯಿಗೆ ಬಂದಂತೆ ಮಾತನಾಡಿರುವವ ಕೇತನ್​ ಕಕ್ಕಡ್​ ವಿರುದ್ಧ​ ಮಾನಹಾನಿ ಮೊಕದ್ದಮೆ ದಾಖಲಿಸಿದ್ದಾರೆ.

‘ಆಸ್ತಿ ಜಗಳಲ್ಲಿ ನನ್ನ ವೈಯಕ್ತಿಕ ಘನತೆಗೆ ಯಾಕೆ ಧಕ್ಕೆ ಉಂಟು ಮಾಡುತ್ತಿದ್ದೀರಿ? ನನ್ನ ಧರ್ಮವನ್ನು ಯಾಕೆ ಎಳೆದು ತರುತ್ತಿದ್ದೀರಿ? ನನ್ನ ತಂದೆ ಮುಸ್ಲಿಂ, ತಾಯಿ ಹಿಂದೂ. ನನ್ನ ಸಹೋದರರು ಹಿಂದೂಗಳನ್ನು ಮದುವೆ ಆಗಿದ್ದಾರೆ. ನಾವು ಎಲ್ಲ ಹಬ್ಬವನ್ನು ಆಚರಣೆ ಮಾಡ್ತೀವಿ’ ಎಂದು ಸಲ್ಮಾನ್​ ಖಾನ್​ ಗುಡುಗಿದ್ದಾರೆ. ಫೇಸ್​ಬುಕ್​, ಟ್ವಿಟರ್​, ಯೂಟ್ಯೂಬ್​, ಗೂಗಲ್ ಮುಂತಾದ ಕಡೆಗಳಲ್ಲಿ ತಮ್ಮ ಬಗ್ಗೆ ಇರುವ ಮಾನಹಾನಿಕಾರಕ ಮಾಹಿತಿಯನ್ನು ತೆಗೆದು ಹಾಕಲು ಸೂಚನೆ ನೀಡಬೇಕು ಎಂದು ಸಲ್ಮಾನ್​ ಖಾನ್​ ಅವರು ಕೋರ್ಟ್​ಗೆ ಮನವಿ ಮಾಡಿಕೊಂಡಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *