ವೀಕೆಂಡ್ ಕರ್ಫ್ಯೂ ತೆರವು ರಾಜಕೀಯ ಪ್ರೇರಿತವೇ?: ಸರ್ಕಾರಕ್ಕೆ ರಾಮಲಿಂಗಾ ರೆಡ್ಡಿ ಪ್ರಶ್ನೆ

ಬೆಂಗಳೂರು: ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ವಾರಾಂತ್ಯದ ಕರ್ಫ್ಯೂ ಹಿಂತೆಗೆದುಕೊಳ್ಳುವ ನಿರ್ಧಾರ ರಾಜಕೀಯ ಪ್ರೇರಿತವೇ ಅಥವಾ ತಜ್ಞರ ಅಭಿಪ್ರಾಯವನ್ನು ಅನುಸರಿಸಿದೆಯೇ ಎಂದು ಮಾಜಿ ಸಚಿವ ಮತ್ತು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ ಅವರು ಶನಿವಾರ ಪ್ರಶ್ನಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇಕೆದಾಟು ಅಣೆಕಟ್ಟು ಯೋಜನೆ ಜಾರಿಗೆ ಆಗ್ರಹಿಸಿ ಪಕ್ಷದಿಂದ ಹಮ್ಮಿಕೊಂಡಿದ್ದ ಪಾದಯಾತ್ರೆ ನಿಲ್ಲಿಸಬೇಕೆಂಬ ಉದ್ದೇಶದಿಂದಲೇ ಸರಕಾರ ವಾರಾಂತ್ಯದ ಕರ್ಫ್ಯೂ ಹೇರಿತ್ತು. ನಿನ್ನೆ 48 ಪ್ರಕರಣಗಳು ದೃಢಪಟ್ಟಿದ್ದರೂ ವಾರಾಂತ್ಯದ ಕರ್ಫ್ಯೂ ತೆರವು ಮಾಡಿದ್ದಾರೆ. ಪ್ರಪಂಚದಲ್ಲಿ ಎಲ್ಲಾದರೂ ಸೋಂಕು ಹೆಚ್ಚುತ್ತಿರುವಾಗ ಕರ್ಫ್ಯೂ ತೆರವು ಮಾಡುವುದನ್ನು ನೋಡಿದ್ದೀರಾ? ಇವರು ನಿರ್ಬಂಧ ಹೇರುವಾಗ, ಹೇರುವುದಿಲ್ಲ, ಯಾವಾಗ ಹೇರಬಾರದೋ ಆಗ ನಿರ್ಬಂಧ ಹೇರುತ್ತಾರೆಂದು ಹೇಳಿದ್ದಾರೆ.

 

ಐಸಿಎಂಆರ್ ವರದಿಗಳ ಪ್ರಕಾರ ಸಾಂಕ್ರಾಮಿಕ ರೋಗಕ್ಕೆ ಬಲಿಯಾದ 37,000 ಜನರಲ್ಲಿ ಕೇವಲ ಶೇ.5ರಷ್ಟು ಕುಟಂಬಗಳಿಗೆ ಮಾತ್ರ ಪರಿಹಾರವನ್ನು ನೀಡಲಾಗಿದೆ, ಆದರೆ ಲಾಕ್‌ಡೌನ್‌ಗಳ ನಡುವೆ ಜೀವನೋಪಾಯಕ್ಕೆ ತೊಂದರೆಯಾದ ಎಲ್ಲಾ ಕಾರ್ಮಿಕರು, ಚಾಲಕರು ಮತ್ತು ಇತರರಲ್ಲಿ ಕೇವಲ ಶೇ.7 ರಷ್ಟು ಜನರಿಗೆ ರೂ.2,000-3,000 ರೂ.ಗಳ ಪರಿಹಾರ ಪಡೆದುಕೊಂಡಿದ್ದಾರೆಂದು ಆರೋಪಿಸಿದ್ದಾರೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 20 ಲಕ್ಷ ಕೋಟಿ ರೂ.ಗಳನ್ನು ಆತ್ಮನಿರ್ಭರ್ ಪ್ಯಾಕೇಜ್ ಎಂದು ಘೋಷಿಸಿದ್ದರು, ಆದರೆ ಅದರಿಂದ ಎಷ್ಟು ಮಂದಿ ಪ್ರಯೋಜನ ಪಡೆದಿದ್ದಾರೆ ಎಂಬುದು ನಮಗೆ ತಿಳಿದಿಲ್ಲ ಎಂದು ತಿಳಿಸಿದರು.

ಏಪ್ರಿಲ್‌ನಲ್ಲಿ ಬಿಬಿಎಂಪಿ ಚುನಾವಣೆ
ಬಿಬಿಎಂಪಿಗೆ ಏಪ್ರಿಲ್‌ನಲ್ಲಿ ಚುನಾವಣೆ ನಡೆಯಲಿದೆ. ಕೋರ್ಟ್‍ಗೆ ಸರ್ಕಾರ ಅಫಿಡವಿಟ್ ಸಲ್ಲಿಸಿದೆಯೋ, ಇಲ್ಲವೋ ಗೊತ್ತಿಲ್ಲ. ಚಾಮರಾಜಪೇಟೆ ಬಿಜೆಪಿ ಶಕ್ತಿ ಕೇಂದ್ರದಲ್ಲಿ ನಾಯಕರನ್ನು ಕರೆದು ಚರ್ಚಿಸಿ ಚುನಾವಣೆಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಮಧ್ಯದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಹಿನ್ನಡೆಯಾಗಿದೆ. ಡಿಲಿಮಿಟೇಶನ್‍ನ್ನು ಬಿಬಿಎಂಪಿ ಆಯುಕ್ತರು ಮಾಡಬೇಕಿತ್ತು. ಆದರೆ, ಬೇರೆಯವರ ಕಚೇರಿಯಲ್ಲಿ ಮಾಡಿ ಅದನ್ನು ತಂದಿಡಲು ಪ್ರಯತ್ನಿಸುತ್ತಿದ್ದಾರೆ. ಡಿಲಿಮಿಟೇಷನ್ ಮನಸಿಗೆ ಬಂದಂತೆ ಮಾಡಿದ್ದಾರೆ. 243 ವಾರ್ಡ್ ಮಾಡಲು ಅಸೆಂಬ್ಲಿಯಲ್ಲಿ ಅನುಮೋದನೆ ನೀಡಲಾಗಿದ್ದು, ಇದನ್ನು ಅವೈಜ್ಞಾನಿಕವಾಗಿ, ಅವರಿಗೆ ಅನುಕೂಲವಾಗುವಂತೆ ಮಾಡುತ್ತಿದ್ದಾರೆಂದಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *