ಜಾರಕಿಹೊಳಿ ಸಹೋದರರ ವಿರುದ್ಧ ತಿರುಗಿಬಿದ್ದ ಬೆಳಗಾವಿ ಬಿಜೆಪಿ ನಾಯಕರು!

ಬೆಳಗಾವಿ: ಪಕ್ಷದ ಹಿತಾಸಕ್ತಿಗೆ ವಿರುದ್ಧವಾಗಿರುವ ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಬೆಳಗಾವಿಯ ಬಿಜೆಪಿ ಶಾಸಕರು ಹಾಗೂ ಮುಖಂಡರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಗುರುವಾರ ಒತ್ತಾಯಿಸಿದ್ದಾರೆ.

ನಿನ್ನೆಯಷ್ಟೇ ಸಿಎಂ ಬೊಮ್ಮಾಯಿಯವರನ್ನು ಭೇಟಿ ಮಾಡಿದ ಬಿಜೆಪಿ ನಾಯಕರು, ಇತ್ತೀಚೆಗೆ ನಡೆದ ಬೆಳಗಾವಿಯ ಸ್ಥಳೀಯ ಎಂಎಲ್‌ಸಿ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ (ಕವಟಗಿಮಠ) ಸೋಲಿಗೆ ಜಾರಕಿಹೊಳಿ ಸಹೋದರರಿಬ್ಬರು ಕಾರಣ ಆರೋಪಿಸಿದರು.

 

ಶಾಸಕರಾದ ಅಭಯ ಪಾಟೀಲ, ದುರ್ಯೋಧನ ಐಹೊಳೆ, ಪಿ ರಾಜೀವ್, ಮಹಾದೇವಪ್ಪ ಯಾದವಾಡ, ಸಂಸದರಾದ ಈರಣ್ಣ ಕಡಾಡಿ, ಅಣ್ಣಾಸಾಹೇಬ ಜೊಲ್ಲೆ, ಮಾಜಿ ಎಂಎಲ್‌ಸಿ ಮಹಾಂತೇಶ ಕವಟಗಿಮಠ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಜಾರಕಿಹೊಳಿ ಸಹೋದರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

ರಮೇಶ್ ಜಾರಕಿಹೊಳಿ ಸಹೋದರ ಲಖನ್ ಜಾರಕಿಹೊಳಿ ಅಖಾಡಕ್ಕೆ ಧುಮುಕಿದ್ದರಿಂದಲೇ ಕವಟಗಿಮಠ ಸೋಲನುಭವಿಸಿದ್ದರು, ರಮೇಶ್ ಮತ್ತು ಬಾಲಚಂದ್ರ ಲಖನ್ ಅವರನ್ನು ಬೆಂಬಲಿಸಿದ್ದಾರೆ ಎಂದು ಹೇಳಿದರು.

ಮೂಲಗಳ ಪ್ರಕಾರ, ಬಿಜೆಪಿ ಕೇಂದ್ರ ನಾಯಕತ್ವವು ಈ ಬಾರಿ ರಮೇಶ್ ಅಥವಾ ಬಾಲಚಂದ್ರ ಜಾರಕಿಹೊಳಿ ಇಬ್ಬರ ಪೈಕಿ ಯಾರನ್ನಾದರೂ ಒಬ್ಬರನ್ನು ಸಂಪುಟಕ್ಕೆ ಸೇರ್ಪಡೆಗೊಳಿಸಲು ಉತ್ಸುಕವಾಗಿದೆ ಎಂದು ಹೇಳಲಾಗುತ್ತಿರುವ ಕಾರಣ, ಶಾಸಕರು ರಮೇಶ್ ಅಥವಾ ಬಾಲಚಂದ್ರ ಅವರಿಗೆ ಕ್ಯಾಬಿನೆಟ್ ಸ್ಥಾನ ನೀಡುವುದನ್ನು ತಡೆಯಲು ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದ್ದಾರೆಂದು ಹೇಳಲಾಗುತ್ತಿದೆ.

 

ಈ ನಡುವೆ ವಿಧಾನ ಪರಿಷತ್ತಿನಲ್ಲಿ ಬಿಜೆಪಿಗೆ ಬಹುಮತದ ಕೊರತೆಯಿದ್ದು, ಗುರಿ ಸಾಧಿಸಲು ಲಖನ್ ಬೆಂಬಲ ಪಡೆಯುವ ಭರವಸೆಯನ್ನು ಜಾರಕಿಹೊಳಿ ಸಹೋದರರು ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

“ಬೆಳಗಾವಿಯ ಶಾಸಕರು ಜಾರಕಿಹೊಳಿಯವರ ಬೆಂಬಲವನ್ನು ಪಡೆಯುವ ಬದಲು ಪರಿಷತ್ತಿನಲ್ಲಿ ಬಹುಮತವನ್ನು ಸಾಧಿಸಲು ಇತರ ಪರ್ಯಾಯಗಳನ್ನು ಹುಡುಕಲು ಪಕ್ಷದ ನಾಯಕರ ಮೇಲೆ, ವಿಶೇಷವಾಗಿ ಬೊಮ್ಮಾಯಿ ಅವರ ಮೇಲೆ ಒತ್ತಡ ಹೇರುತ್ತಿದ್ದಾರೆ” ಎಂದು ಮೂಲಗಳು ಮಾಹಿತಿ ನೀಡಿವೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *