ನಾನು ವಿಧಾನಸೌಧದಲ್ಲಿ ಹಿಜಾಬ್ ಧರಿಸಿಯೇ ಕೂರುತ್ತೇನೆ, ಧೈರ್ಯವಿದ್ರೆ ತಡೆಯಲಿ: ಶಾಸಕಿ ಖನೀಜ್ ಫಾತೀಮಾ ಸವಾಲ್

ಕಲಬುರಗಿ: ನಾನು ವಿಧಾನಸೌಧದಲ್ಲಿ(vidhana soudha) ಹಿಜಾಬ್(Hijab) ಧರಿಸಿಯೇ ಕೂರುತ್ತೇನೆ. ಧೈರ್ಯವಿದ್ದರೆ ಯಾರಾದರೂ ತಡೆಯಲಿ. ರಾಜ್ಯದಲ್ಲಿ ಅಭಿವೃದ್ಧಿಯಾಗುತ್ತಿಲ್ಲ. ಅದಕ್ಕಾಗಿ ಈ ರೀತಿಯ ವಿಚಾರಗಳನ್ನು ಮುನ್ನಲೆಗೆ ತರಲಾಗುತ್ತಿದೆ. ನಾನು ಸಾಧ್ಯವಾದರೆ ಉಡುಪಿಗೆ ಹೋಗಿ ವಿದ್ಯಾರ್ಥಿಗಳ(Students) ಹೋರಾಟಕ್ಕೆ ಬೆಂಬಲ ನೀಡುತ್ತೇನೆ ಎಂದು ಕಲಬುರಗಿ ಉತ್ತರ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಖನೀಜ್ ಪಾತೀಮಾ ಹಿಜಾಬ್ ಬೆಂಬಲಸಿ ಹೇಳಿಕೆ ನೀಡಿದ್ದಾರೆ.

ಹಿಜಾಬ್ ಹೆಸರಿನಲ್ಲಿ ಮುಸ್ಲಿಂ ಮಹಿಳೆಯರನ್ನು ಅವಮಾನಿಸಲಾಗುತ್ತಿದೆ: ಕೆಪಿ ಫಾತಿಮ್ ಶೆರಿನ್

ಮುಸ್ಲಿಂ ಮಹಿಳೆಯರನ್ನು ಅವಮಾನಿಸುವ ಘಟನೆಗಳು ನಡೆಯುತ್ತಿದೆ. ಕಳೆದ ವರ್ಷ ಜುಲೈ ತಿಂಗಳಲ್ಲಿ ಸುಲ್ಲಿ ಡೀಲ್ಸ್ ಆಪ್ ಮೂಲಕ ಮುಸ್ಲಿಂ ಮಹಿಳೆಯರ ಮಾರಾಟ ನಡೆಸುವ ದುರ್ಘಟನೆ ನಡೆದಿತ್ತು. ಇದರ ಮೂಲಕ 108 ಮುಸ್ಲಿಂ ಮಹಿಳೆಯರ ಮಾರಾಟ ಮಾಡಲಾಗಿದೆ. ತನಿಖೆಯಲ್ಲಿ ಸತ್ಯಾಂಶ ಬಯಲಾಗಿದೆ. 18 ರಿಂದ 25 ವರ್ಷದ ಯುವಕರು ಸಿಕ್ಕಿಬಿದ್ದಿದ್ದಾರೆ. ಈ ಗುಂಪಿನ ಹಿಂದೆ ಷಡ್ಯಂತ್ರ ಅಡಗಿದೆ. ಒಂದರ ಹಿಂದೆ ಒಂದು ಘಟನೆಗಳು ಮರುಕಳಿಸುತ್ತಿದೆ. ಇದೀಗ ಶಿಕ್ಷಣ ವಲಯದಲ್ಲಿ ಹಿಜಾಬ್ ಹೆಸರಿನಲ್ಲಿ ಮುಸ್ಲಿಂ ಮಹಿಳೆಯರನ್ನು ಅವಮಾನಿಸಲಾಗುತ್ತಿದೆ. ಉಡುಪಿಯಿಂದ ಶುರುವಾದ ವಿವಾದ ರಾಜ್ಯದ 6 ಕಾಲೇಜುಗಳಲ್ಲಿ ಹಬ್ಬಿದೆ. ಕೇಸರಿ ಶಾಲು ತೊಟ್ಟ ವಿದ್ಯಾರ್ಥಿಗಳು ಜೈ ಶ್ರೀರಾಮ ಘೋಷಣೆ ಕೂಗುತ್ತಿದ್ದಾರೆ. ಹಿಜಾಬ್ ಧಾರಣೆ ಮುಸ್ಲಿಂ ಧರ್ಮದ ಆಚರಣೆಯಾಗಿದೆ. ಶಾಸಕ ರಘುಪತಿ ಭಟ್, ಶಿಕ್ಷಣ ಸಚಿವರ ಹೇಳಿಕೆ ಆಶ್ಚರ್ಯಕರವಾಗಿದೆ ಎಂದು ಕ್ಯಾಂಪಸ್ ಫ್ರಂಟ್ ರಾಷ್ಟ್ರೀಯ ಸಮಿತಿ ಸದಸ್ಯೆ ಕೆ. ಪಿ. ಫಾತಿಮ್ ಶೆರಿನ್ ಹೇಳಿದ್ದಾರೆ.

ಶಿಕ್ಷಣ ಸಂಸ್ಥೆಯಲ್ಲಿ ಸರಸ್ವತಿ ಪೂಜೆ ಮಾಡಲು ಅನುಮತಿ ಇದೆ. ಗಣಪತಿ ಹಬ್ಬ ಮಾಡಲು ಅವಕಾಶ ಇದೆ ಎಂದು ಉಡುಪಿ ಶಾಸಕರು ಹೇಳುತ್ತಾರೆ. ಹಾಗಿದ್ದರೆ ಹಿಜಾಬ್ ಹಾಕಲು ಅವಕಾಶಯಾಕಿಲ್ಲ. ಹಿಜಾಬ್ ಕೂಡ ಸಾಂವಿಧಾನಿಕ ಹಕ್ಕು. ಕಾರ್ಯಕ್ರಮಗಳಲ್ಲಿ ಅಥವಾ ಸೋಶಿಯಲ್ ಮೀಡಿಯಾದಲ್ಲಿ ಹಿಜಾಬ್ ಧರಿಸುವುದು ಬಿಡುವುದು ಅವರವರ ಚಾಯ್ಸ್. ಇದನ್ನು ಶಿಕ್ಷಣ ವಲಯಕ್ಕೆ ಹೋಲಿಸಬಾರದು ಎಂದು ಹಿಜಾಬ್ ವಿವಾದದ ಬೆನ್ನಲ್ಲೇ ಸಿಎಫ್​ಐ ರಾಷ್ಟ್ರೀಯ ಸಮಿತಿ ಸದಸ್ಯೆ ಫಾತಿಮಾ ಶೆರಿನ್ ಹೇಳಿಕೆ ನೀಡಿದ್ದಾರೆ.

ಕರಾವಳಿಯಲ್ಲಿ ಬಿಜೆಪಿಯವರು ಹಿಜಾಬ್ ವಿವಾದ ಹುಟ್ಟು ಹಾಕಿದ್ದಾರೆ: ಜಯನಗರ ಶಾಸಕಿ ಸೌಮ್ಯ ರೆಡ್ಡಿ

ಕರಾವಳಿಯಲ್ಲಿ ಬಿಜೆಪಿಯವರು ಹಿಜಾಬ್ ವಿವಾದ ಹುಟ್ಟು ಹಾಕಿದ್ದಾರೆ. ದೆಹಲಿಯಲ್ಲಿ ನಾರಾಯಣ ಗುರುಗಳ ಸ್ತಬ್ಧ ಚಿತ್ರ ಹೊರಗಿಡಲಾಗಿತ್ತು. ಅದಕ್ಕೆ ವಿರುದ್ಧವಾಗಿ ಕರಾವಳಿಯಲ್ಲಿ ಬಜರಂಗದಳದವರೇ ಪ್ರತಿಭಟನೆ ಮಾಡಿದ್ದರು. ಅದಾಗಿ ಕೆಲವೇ ದಿನಗಳಲ್ಲಿ ಹಿಜಾಬ್ ವಿಚಾರ ಮುನ್ನೆಲೆಗೆ ಬಂದಿದೆ. ಈ ಸೂಕ್ಷ್ಮ ವಿಚಾರ ಅರ್ಥ ಮಾಡಿಕೊಂಡರೆ ಅದರ ಹಿಂದಿನ ಅಜೆಂಡಾ ಗೊತ್ತಾಗುತ್ತದೆ. ವಿದ್ಯಾರ್ಥಿನಿಯರನ್ನು ಗೇಟ್ ಹೊರಗಡೆ ನಿಲ್ಲಿಸಿದ ಪ್ರಾಂಶುಪಾರನ್ನು ಕೂಡಲೇ ಅಮಾನತ್ತು ಮಾಡಬೇಕು. ಇದು ಬಿಜೆಪಿ ನಡೆಸುತ್ತಿರುವ ಕುತಂತ್ರ ಎಂದು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಜಯನಗರ ಶಾಸಕಿ ಸೌಮ್ಯ ರೆಡ್ಡಿ ಹೇಳಿಕೆ ನೀಡಿದ್ದಾರೆ.

ಸಿಎಂ ಬೊಮ್ಮಾಯಿ ಕೂಡ ಹಿಜಾಬ್ ಹಾಕಿಕೊಂಡಿದ್ದಾರೆ: ಸಿ.ಎಂ ಇಬ್ರಾಹಿಂ

ಮೈಸೂರು ಮಹಾರಾಜ ಕಾಲದಿಂದಲೂ ಜಾರಿಯಲ್ಲಿದೆ. ಹೆಣ್ಣು ಮಕ್ಕಳು ತೆರಳುವ ಚಕ್ಕಡಿ ಗಾಡಿಗೂ ಪರದೆ ಹಾಕಿರುವ ಇತಿಹಾಸ ಇದೆ. ಇದು ಕೋವಿಡ್ ಸಮಯದಲ್ಲಿ ಹಾಕಿಕೊಳ್ಳುವಂತೆ. ನಾನು ಹಾಕೊಂಡಿದ್ದೀನಿ. ಸಿಎಂ ಬೊಮ್ಮಾಯಿ ಕೂಡ ಹಿಜಾಬ್ ಹಾಕಿಕೊಂಡಿದ್ದಾರೆ. ಇನ್ನು ಆ ಪ್ರಾಂಶುಪಾಲರು ಪಾಠ ಮಾಡುವವರು. ಅವರಿಗೆ ಬುದ್ದಿ ಇದೆಯಾ? ಈ ಹಿಂದೆ ಪೋಲಿಸರಿಗೂ ಸಮವಸ್ತ್ರ ಹಾಕಿಸಿ ಬಿಟ್ಟರು. ಎಲ್ಲಿಗೆ ತೆಗೆದುಕೊಂಡು ಹೋಗುತ್ತಾ ಇದಿರಿ? ಅಧಿಕಾರಿಗಳಿಗೆ ಹೇಳುತ್ತಾ ಇದ್ದೀನಿ ಹುಷಾರ್. ಬಿಜೆಪಿ ಇದೇ ಕೊನೆ ಬಾರಿ ಗಮನಿಸಿ , ಗಾಳಿ ಬದಲಾಗುತ್ತಿದೆ ಎಂದು ಮೈಸೂರಿನಲ್ಲಿ ಸಿ. ಎಂ. ಇಬ್ರಾಹಿಂ ಹೇಳಿದ್ದಾರೆ.

ಪರಿಸ್ಥಿತಿ ಕೈ ಮೀರುವ ಮುನ್ನ ಸರಿ ಪಡಿಸಿ: ಸಿಎಂಗೆ ಮಾಜಿ ಶಿಕ್ಷಣ ಸಚಿವ ತನ್ವೀರ್ ಸೇಠ್ ಪತ್ರ

ಮುಸ್ಲಿಂ ಹೆಣ್ಣು ಮಕ್ಕಳು ತಲೆಗೆ ಹಿಜಾಬ್ ಧರಿಸುವುದು ನಿಷೇಧ ವಿಚಾರಕ್ಕೆ ಸಂಬಂಧಪಟ್ಟಂತೆ ಮಾಜಿ ಸಚಿವ ತನ್ವೀರ್ ಸೇಠ್ ಸಿಎಂ ಬಸವರಾಜ ಬೊಮ್ಮಾಯಿಗೆ ಪತ್ರ ಬರೆದಿದ್ದಾರೆ. ಉಡುಪಿ ಕಾಲೇಜಿನ ಈ ಆದೇಶ ವಿವಾದದ ಸುಳಿಯಲ್ಲಿದೆ. ಅಲ್ಪಸಂಖ್ಯಾತ ಮಕ್ಕಳು ತಮ್ಮ ಮಾತೃ ಭಾಷೆಯಲ್ಲಿ ಮಾತನಾಡುವುದನ್ನು ನಿಷೇಧಿಸಿರುವುದು ಆಕ್ಷೇಪಣಿಯ. ಇಸ್ಲಾಂನಲ್ಲಿ ಹೆಣ್ಣು ಮಕ್ಕಳು ಹಿಜಾಬ್ ಧರಿಸುವುದು, ಸಿಖ್ಖರಲ್ಲಿ ಪೇಟ ಧರಿಸುವುದು, ಕ್ರೈಸ್ತರಲ್ಲಿ ಸನ್ಯಾಸಿ ದೀಕ್ಷೆ ಪಡೆದ ಹೆಣ್ಣು ಮಕ್ಕಳು ಸ್ಕಾರ್ಫ್ ಧರಿಸುವುದು ಹಿಂದಿನ ಕಾಲದಿಂದಲೂ ನಡೆದು ಬರುತ್ತಿರುವ ಪದ್ಧತಿ. ಇದಕ್ಕೆ ಯಾವುದೇ ನಿಷೇಧವಾಗಲೀ ತಡೆಯಾಗಲೀ ಇಲ್ಲಿಯವರೆಗೂ ವಿಧಿಸಿರುವುದಿಲ್ಲ. ಈ ವಿವಾದವನ್ನು ಅನೇಕ ಸಂಘಟನೆಗಳನ್ನು ವೈಭೀಕರಿಸಿ ಸಾರ್ವಜನಿಕರನ್ನು ದಾರಿ ತಪ್ಪಿಸುತ್ತಿದ್ದಾರೆ. ಕಾನೂನು ಸುವ್ಯವಸ್ಥೆ ಹದೆಗೆಡಿಸಿ ಲಾಭ ಪಡೆಯಲು ಯತ್ನಿಸಿವೆ. ನಾನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವನಾಗಿದ್ದಾಗ ಹೆಣ್ಣು ಮಕ್ಕಳಿಗೆ ಸ್ಕರ್ಟ್ ಮತ್ತು ಶರ್ಟ್ ಸಮವಸ್ತ್ರವನ್ನು ಬದಲಾಯಿಸಿದ್ದೆ. ಚೂಡಿದಾರ್ ಧರಿಸುವುದನ್ನು ಕಡ್ಡಾಯಗೊಳಿಸಿದ್ದೆ. ಇದು ಹೆಣ್ಣು ಮಕ್ಕಳಿಗೆ ಶಾಲೆಗಳಲ್ಲಿ ಆಗುತ್ತಿದ್ದ ಲೈಂಗಿಕ ಕಿರುಕುಳವನ್ನು ತಡೆಯಲು ಸಹಕಾರಿ ಆಗಿದೆ ಎಂದು ತಿಳಿಸಿದ್ದಾರೆ.

ಹೆಣ್ಣು ಮಕ್ಕಳಲ್ಲಿ ಆಗುವ ವಯೋ ಸಹಜ ದೈಹಿಕ ಕ್ರಿಯೆಯನ್ನು ಮರೆಮಾಚಲು ಅನುಕೂಲವಾಗಿದೆ ಭಾರತ ದೇಶದಲ್ಲಿ ಪ್ರತಿಯೊಂದು ಧರ್ಮಗಳಲ್ಲೂ ವಯಸ್ಸಿಗೆ ಅನುಗುಣವಾಗಿ ವಸ್ತ್ರಗಳನ್ನು ಧರಿಸುವುದು ಸರ್ವೇಸಾಮಾನ್ಯ. ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಪ್ರಸ್ತುತ ಹೆಣ್ಣು ಮಕ್ಕಳು ವಿದ್ಯಾಭ್ಯಾಸ ಹಾಗೂ ರಕ್ಷಣೆಗಾಗಿ ಅನೇಕ ಕಾನೂನು ಜಾರಿಗೆ ತಂದಿದೆ. ಹೆಣ್ಣು ಮಕ್ಕಳ ರಕ್ಷಣೆ ಹಾಗೂ ವಿದ್ಯಾಭ್ಯಾಸ ಸರ್ಕಾರದ ಹೊಣೆಯಾಗಿದೆ. ಭಾರತ ಜಾತ್ಯಾತೀತ ರಾಷ್ಟ್ರವಾಗಿದ್ದು, ಉಡುಪಿ ಕಾಲೇಜಿನ ಪ್ರಾಂಶುಪಾಲರ ನಡೆ ಮಕ್ಕಳಲ್ಲಿ ಜಾತಿ ಬೇಧ ಭಾವಗಳನ್ನು ಹುಟ್ಟು ಹಾಕುತ್ತಿದೆ. ಇದು ಆತಂಕಕಾರಿ ಬೆಳವಣಿಗೆ ಹಾಗೂ ಉತ್ತಮ ಸಮಾಜಕ್ಕೆ ಮಾರಣಾಂತಿಕವಾಗಿದೆ. ಪರಿಸ್ಥಿತಿ ಕೈಮೀರುವ ಮುನ್ನ ವಿದ್ಯಾರ್ಥಿಗಳ ಹಾಗೂ ಸಮಾಜದ ಹಿತದೃಷ್ಟಿಯಿಂದ ಪ್ರಾಂಶುಪಾಲರಿಗೆ ಸೂಕ್ತ ಆದೇಶವನ್ನು ನೀಡಿ. ಈ ವಿವಾದಕ್ಕೆ ತೆರೆ ಎಳೆಯುವಂತೆ ಮನವಿ ಪತ್ರದ ಮೂಲಕ‌ ಶಾಸಕ‌ ತನ್ವೀರ್ ಸೇಠ್ ಮನವಿ ಮಾಡಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *