ಜಿಎಸ್‌ಟಿ ಪರಿಹಾರವನ್ನು 2024-25ರವರೆಗೆ ವಿಸ್ತರಿಸಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್’ಗೆ ಸಿಎಂ ಬೊಮ್ಮಾಯಿ ಮನವಿ

ಬೆಂಗಳೂರು: ರಾಜ್ಯಗಳಿಗೆ ಕೇಂದ್ರ ಸರ್ಕಾರ ನೀಡುವ ಜಿಎಸ್’ಟಿ ಪರಿಹಾರವನ್ನು 2024-25ರವರೆಗೆ ವಿಸ್ತರಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕೇಂದ್ರ ಸರ್ಕಾರಕ್ಕೆ ಸೋಮವಾರ ಮನವಿ ಮಾಡಿದ್ದಾರೆ.

ನಿನ್ನೆಯಷ್ಟೇ ನವದೆಹಲಿಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿದ ಮುಖ್ಯಮಂತ್ರಿಗಳು ಈ ಬಗ್ಗೆ ಮನವಿ ಸಲ್ಲಿಸಿದರು. ಬರುವ ಮಾರ್ಚ್ ತಿಂಗಳಿಗೆ ಜಿಎಸ್’ಟಿ ಪರಿಹಾರದ ಅವಧಿ ಮುಕ್ತಾಯಗೊಳ್ಳಲಿದೆ. ಆದರೆ, ಕೋವಿಡ್ ನಿಂದಾಗಿ ರಾಜ್ಯ ಸರ್ಕಾರಗಳು ಸಂಪನ್ಮೂಲ ಕ್ರೋಢಿಕರಿಸಲು ಸಮಸ್ಯೆ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಜಿಎಸ್’ಟಿ ಪರಿಹಾರದ ಅವಧಿ ವಿಸ್ತರಿಸುವ ಮೂಲಕ ರಾಜ್ಯ ಸರ್ಕಾರಗಳ ಸಂಕಷ್ಟ ಬಗೆಹರಿಸಲು ಮುಂದಾಗಬೇಕು ಎಂದು ಹೇಳಿದರು.

 

ಕಳೆದ ಎರಡು ವರ್ಷಗಳಲ್ಲಿ ಸಾಲದ ಮೂಲಕ ರಾಜ್ಯಗಳಿಗೆ ಜಿಎಸ್’ಟಿ ಪರಿಹಾರ ಒದಗಿಸಿದಂತೆ ಮುಂದಿನ ಮೂರು ವರ್ಷಗಳೂ ಇದೇ ಕ್ರಮ ಅನುಸರಿಸಬೇಕು. ಜಿಎಸ್’ಟಿ ಸೆಸ್ ಸಂಗ್ರಹದಿಂದ ಈ ಸಾಲ ಮರುಪಾವತಿ ಮಾಡಬಹುದು ಎಂದು ಮುಖ್ಯಮಂತ್ರಿಗಳು ಪ್ರಸ್ತಾಪಿಸಿದರು.

ವಿತ್ತ ಸಚಿವರ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ಮಾಹಿತಿ ನೀಡಿದ ಬೊಮ್ಮಾಯಿಯವರು, ಕೇಂದ್ರದಲ್ಲಿ ಯಾವ ವಿಷಯಗಳನ್ನು ಪ್ರಸ್ತಾಾಪ ಮಾಡಬೇಕೆನ್ನುವ ವಿಚಾರಗಳ ಬಗ್ಗೆ ಸೌಹಾರ್ದಯುತವಾಗಿ ಚರ್ಚೆ ನಡೆಸಲಾಯಿತು. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೂಡ ಸಂಸದರ ಸಭೆಯಲ್ಲಿ ಭಾಗವಹಿಸಿದ್ದರು. ಕೇಂದ್ರ ಸಚಿವರ ನೇತೃತ್ವದಲ್ಲಿ ಬಜೆಟ್ನಲ್ಲಿ ಘೋಷಿಸಿರುವ ಯೋಜನೆಗಳನ್ನು ಅನುಷ್ಠಾಾನ ಮಾಡಲು ಎಲ್ಲ ರೀತಿಯ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಹೇಳಿದರು.

15ನೇ ಹಣಕಾಸು ಯೋಜನೆಯಡಿ ಮಂಜೂರಾತಿ ದೊರೆತಿರುವ ಯೋಜನೆಗಳನ್ನು ಸಂಪೂರ್ಣವಾಗಿ ರಾಜ್ಯಕ್ಕೆ ಒದಗಿಸಿಕೊಡುವುದಾಗಿಯೂ ಭರವಸೆ ನೀಡಿದ್ದಾರೆ ಎಂದರು.

ವಿತ್ತ ಸಚಿವರೊಂದಿಗೆ ನಡೆದ ಮಾತುಕತೆಯಲ್ಲಿ 1 ಲಕ್ಷ ಕೋಟಿ ರೂ.ಗಳ ಬಂಡವಾಳ ಅನುದಾನದಲ್ಲಿ 50 ವರ್ಷಗಳ ಅವಧಿಗೆ ಬಡ್ಡಿರಹಿತವಾಗಿ ಒಂದು ಲಕ್ಷ ಕೋಟಿ ರೂ.ಗಳನ್ನು ರಾಜ್ಯಕ್ಕೆ ಸಾಲದ ರೂಪದಲ್ಲಿ ನೀಡಬೇಕೆನ್ನುವ ಬಗ್ಗೆ ಚರ್ಚೆಯಾಗಿದೆ. ಕರ್ನಾಟಕಕ್ಕೆ ಎಷ್ಟು ಬರಬೇಕೆನ್ನುವುದು ಚರ್ಚೆಯಾಗಿ ಸುಮಾರು 3800 ರಿಂದ 4000 ಕೋಟಿ ರೂ.ಗಳು ದೊರೆಯಬಹುದೆಂಬ ಅಂದಾಜಿದೆ ಎಂದರು.

ಇದೇ ವೇಳೆ ರೈಲ್ವೇ ಸಚಿವ ಅಶ್ವನಿ ವೈಷ್ಣವ್ ಅವರನ್ನೂ ಭೇಟಿ ಮಾಡಿರುವ ಸಿಎಂ ಬೊಮ್ಮಾಯಿಯವರು, ಕಲ್ಲಿದ್ದಲು ಸಾಗಾಣಿಕೆಗೆ ರೇಕ್‌ಗಳ ಕೊರತೆಯ ಬಗ್ಗೆ ಚರ್ಚಿಸಿದ್ದು, ಈ ವೇಳೆ ರೈಲ್ವೆ ಮಂಡಳಿಯ ಅಧಿಕಾರಿಗಳಿಗೆ ನಿರ್ದೇಶನ ನೀಡುವುದಾಗಿ ವೈಷ್ಣವ್ ಅವರು ಭರವಸೆ ನೀಡಿದ್ದಾರೆಂದು ತಿಳಿದುಬಂದಿದೆ.

ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರನ್ನೂ ಭೇಟಿ ಮಾಡಿರುವ ಬೊಮ್ಮಾಯಿಯವರು, “ಆರೋಗ್ಯ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ವಿಶೇಷ ಅನುದಾನವನ್ನು ಕೋರಲಾಗಿದೆ. ಇದಕ್ಕೆ ಕೇಂದ್ರ ಸಚಿವರು ಒಪ್ಪಿಗೆ ನೀಡಿದ್ದಾರೆಂದು ಮುಖ್ಯಮಂತ್ರಿಗಳು ಮಾಹಿತಿ ನೀಡಿದರು.

ವಿದ್ಯುತ್‌ ಪ್ರಸರಣಾ ಸಂಸ್ಥೆಗಳು (ಎಸ್ಕಾಂ) ಸಾಲ ಪಡೆಯಲು ವಿಧಿಸಿರುವ ಕೆಲ ಷರತ್ತುಗಳನ್ನು ಸಡಿಲಿಸುವಂತೆ ಕೇಂದ್ರ ಇಂಧನ ಸಚಿವ ಆರ್‌.ಕೆ. ಸಿಂಗ್‌ ಅವರಿಗೆ ಮನವಿ ಮಾಡಲಾಗಿದ್ದು, ಈ ಸಂಬಂಧ ಕೆಲವು ಸ್ಪಷ್ಟೀಕರಣದ ಅಗತ್ಯವಿದ್ದು, ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ತೀರ್ಮಾನ ಕೈಗೊಳ್ಳಲಾಗುವುದಾಗಿ ಕೇಂದ್ರ ಸಚಿವರು ಹೇಳಿದ್ದಾರೆಂದು ಬೊಮ್ಮಾಯಿಯವರು ಹೇಳಿದರು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *