ಅಲ್ಲು ಅರ್ಜುನ್, ರಾಜಮೌಳಿ ಕನ್ನಡಿಗರಾಗಿದ್ದರೆ ಮೋದಿ ಸ್ಯಾಂಡಲ್ವುಡ್ನ ಹೊಗಳುತ್ತಿದ್ದರು’; ಆರ್ಜಿವಿ ಟೀಕೆ
ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಸದಾ ಸುದ್ದಿಯಲ್ಲಿರೋಕೆ ಇಷ್ಟಪಡುತ್ತಾರೆ. ಅವರು ಒಂದಿಲ್ಲೊಂದು ವಿಚಾರದಲ್ಲಿ ಟ್ವೀಟ್ ಮಾಡುತ್ತಾ ಯಾರನ್ನಾದರೂ ಟೀಕೆ ಮಾಡುತ್ತಲೇ ಇರುತ್ತಾರೆ. ಇದರಿಂದ ಹಲವು ಬಾರಿ ವಿವಾದ ಹುಟ್ಟಿಕೊಂಡಿದ್ದೂ ಇದೆ. ಆರ್ಜಿವಿ ಸಾಕಷ್ಟು ಯುವ ನಟಿಯರ ಜತೆ ಸಮಯ ಕಳೆಯುತ್ತಾರೆ, ಸಾಕಷ್ಟು ಸ್ಟಾರ್ಗಳ ವಿರುದ್ಧ ನೇರವಾಗಿ ತೊಡೆತಟ್ಟುತ್ತಾರೆ. ಈ ಬಗ್ಗೆ ಅನೇಕರಿಂದ ಟೀಕೆಗೆ ಒಳಗಾಗಿದ್ದಾರೆ. ಆದರೆ, ಆರ್ಜಿವಿ ಅದಕ್ಕೆ ತಲೆಕೆಡಿಸಿಕೊಂಡಿಲ್ಲ. ಬದಲಿಗೆ ಆ ಓಪನ್ ಆಗಿಯೇ ಟ್ವೀಟ್ ಮಾಡುವುದನ್ನು ಮುಂದುವರಿಸಿದ್ದಾರೆ. ಈ ಬಾರಿ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆ ಇಟ್ಟುಕೊಂಡು ಟಾಲಿವುಡ್ಅನ್ನು ಟೀಕೆ ಮಾಡಿದ್ದಾರೆ!
‘ತೆಲುಗು ಚಿತ್ರರಂಗ ಪ್ರಪಂಚದಾದ್ಯಂತ ಹೆಸರು ಮಾಡುತ್ತಿದೆ. ಟಾಲಿವುಡ್ನ ಜನಪ್ರಿಯತೆಯು ಕೇವಲ ತೆಲುಗು ನಾಡಿಗೆ ಮಾತ್ರ ಸೀಮಿತವಾಗಿಲ್ಲ. ಇಡೀ ಪ್ರಪಂಚವು ಈಗ ಟಾಲಿವುಡ್ ಬಗ್ಗೆ ಚರ್ಚಿಸುತ್ತದೆ. ಬೆಳ್ಳಿತೆರೆಯಿಂದ ಒಟಿಟಿ ಪ್ಲಾಟ್‌ಫಾರ್ಮ್ ವರೆಗೆ ತೆಲುಗು ಸಿನಿಮಾ ಸದ್ದು ಮಾಡುತ್ತಿದೆ. ಹೊರ ದೇಶಗಳಲ್ಲೂ ಜನರು ತೆಲುಗು ಚಿತ್ರಗಳನ್ನು ನೋಡಲು ಇಷ್ಟಪಡುತ್ತಾರೆ’ ಎಂದು ಪ್ರಧಾನಿ ಮೋದಿ ಇತ್ತೀಚೆಗೆ ಮಾತನಾಡಿದ್ದರು.
ಪ್ರಭಾಸ್, ರಾನಾ ದಗ್ಗುಬಾಟಿ, ತಮನ್ನಾ ಹಾಗೂ ಅನುಷ್ಕಾ ಶೆಟ್ಟಿ ನಟಿಸಿದ್ದ, ರಾಜಮೌಳಿ ನಿರ್ದೇಶನದ ‘ಬಹುಬಲಿ’ ಸರಣಿಯ ಎರಡೂ ಚಿತ್ರಗಳು ಹಿಟ್ ಆಗಿದ್ದವು. ಈ ಸಿನಿಮಾ ವಿಶ್ವ ಮಟ್ಟದಲ್ಲಿ ಸದ್ದು ಮಾಡಿತ್ತು. ಕಳೆದ ವರ್ಷಾಂತ್ಯಕ್ಕೆ ತೆರೆಕಂಡ ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ನಟನೆಯ ‘ಪುಷ್ಪ’ ಚಿತ್ರ ಕೂಡ ಒಳ್ಳೆಯ ಹೆಸರು ಮಾಡಿತ್ತು. ಈ ಚಿತ್ರಗಳನ್ನು ಮೋದಿ ಹೊಗಳಿದ್ದರು. ಈ ಸಿನಿಮಾಗಳು ನಮ್ಮ ಹೆಮ್ಮೆ ಎಂದು ಕೊಂಡಾಡಿದ್ದರು. ಈ ವಿಚಾರದಲ್ಲಿ ರಾಮ್ ಗೋಪಾಲ್ ವರ್ಮಾ ಟಾಲಿವುಡ್ಅನ್ನು ಟೀಕಿಸಿದ್ದಾರೆ.
‘ಟಾಲಿವುಡ್ ಮಂದಿ ಪ್ರಧಾನಿ ಮೋದಿ ಹೊಗಳಿದ ವಿಚಾರಕ್ಕೆ ಸಂತಸ ಪಡುವ ಅಗತ್ಯವಿಲ್ಲ. ಅವರು ‘ಬಾಹುಬಲಿ’ ಹಾಗೂ ‘ಪುಷ್ಪ’ ಚಿತ್ರಗಳ ಬಗ್ಗೆ ಮಾತ್ರ ಮಾತನಾಡಿದ್ದಾರೆ. ನಾವು ಪ್ರತಿ ವರ್ಷ ಮಾಡುವ ಇತರ 150 ಚಿತ್ರಗಳ ಬಗ್ಗೆ ಅವರು ಮಾತನಾಡಿಲ್ಲ. ರಾಜಮೌಳಿ ಹಾಗೂ ಅಲ್ಲು ಅರ್ಜುನ್ ಕನ್ನಡಿಗರಾಗಿದ್ದರೆ ಮೋದಿ ಸ್ಯಾಂಡಲ್‌ವುಡ್ ಅನ್ನು ಹೊಗಳುತ್ತಿದ್ದರು’ ಎಂದಿದ್ದಾರೆ. ಈ ಮೂಲಕ ಆ ದಿಗ್ಗಜರು ಇರುವುದಕ್ಕೆ ಟಾಲಿವುಡ್ನ ಖ್ಯಾತಿ ಹೆಚ್ಚಿದೆ. ಇದಕ್ಕೆ ಎಲ್ಲಾ ಚಿತ್ರಗಳು ಕಾರಣವಾಗಿಲ್ಲ. ಕೆಲವೇ ಸ್ಟಾರ್ಗಳು ಇದಕ್ಕೆ ಸಹಾಯ ಮಾಡಿದ್ದಾರೆ ಎಂಬರ್ಥದಲ್ಲಿ ಅವರು ಬರೆದುಕೊಂಡಿದ್ದಾರೆ.