ಪಂಚರಾಜ್ಯಗಳಲ್ಲಿ ಬಿಜೆಪಿಗೆ ಬಹುಮತ: ಪ್ರಧಾನಿ ಮೋದಿ ವಿಶ್ವಾಸ
ನವದೆಹಲಿ: ಪಂಚರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಸರ್ಕಾರ ರಚಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಉತ್ತರ ಪ್ರದೇಶ, ಪಂಜಾಬ್, ಗೋವಾ, ಉತ್ತರಾಖಂಡ್, ಮಣಿಪುರ ವಿಧಾನಸಭೆಗಳಿಗೆ ಫೆ.10 ರಂದು ಚುನಾವಣೆ ಪ್ರಾರಂಭವಾಗಲಿದ್ದು, ಈ ಹಿನ್ನೆಲೆಯಲ್ಲಿ ಎಎನ್ಐ ಸುದ್ದಿ ಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ ಎಲ್ಲಾ ರಾಜ್ಯಗಳಲ್ಲಿಯೂ ಬಿಜೆಪಿ ಪರವಾದ ಅಲೆ ಇರುವುದನ್ನು ಕಂಡಿದ್ದೇನೆ ಹಾಗೂ ಸಂಪೂರ್ಣ ಬಹುಮತದೊಂದಿಗೆ ಬಿಜೆಪಿ ಎಲ್ಲಾ ರಾಜ್ಯಗಳಲ್ಲಿಯೂ ಅಧಿಕಾರಕ್ಕೆ ಬರುತ್ತದೆ, ಎಲ್ಲಾ 5 ರಾಜ್ಯಗಳ ಜನತೆಯೂ ಅವರ ಸೇವೆ ಮಾಡುವುದಕ್ಕೆ ಬಿಜೆಪಿಗೆ ಅವಕಾಶ ನೀಡುತ್ತಾರೆ ಎಂದು ಮೋದಿ ಹೇಳಿದ್ದಾರೆ.
ದೇ ವೇಳೆ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಂಬ ತಮ್ಮ ಪಕ್ಷದ ದೃಷ್ಟಿಕೋನವನ್ನು ಪುನರುಚ್ಚರಿಸಿರುವ ಪ್ರಧಾನಿ ಮೋದಿ ಚುನಾವಣೆ ಸಂದರ್ಭವಾಗಲೀ ಅಥವಾ ಅಲ್ಲದೇ ಇರಲಿ ಅಧಿಕಾರದಲ್ಲಿರಲಿ, ಸಮ್ಮಿಶ್ರ ಸರ್ಕಾರದಲ್ಲಿರಲಿ ಜನತೆಯ ಕಲ್ಯಾಣಕ್ಕಾಗಿ ಶ್ರಮಿಸುತ್ತದೆ ಎಂದು ಮೋದಿ ತಿಳಿಸಿದ್ದಾರೆ.
ಈಗಾಗಲೇ ಬಿಜೆಪಿ ಅಧಿಕಾರವಿರುವ ರಾಜ್ಯಗಳಲ್ಲಿ ಪಕ್ಷಕ್ಕೆ ಆಡಳಿತ ವಿರೋಧಿ ಅಲೆ ಇದೆ ಎಂಬ ಅಂಶವನ್ನು ಪ್ರಧಾನಿ ಮೋದಿ ಅಲ್ಲಗಳೆದಿದ್ದು, ಬಿಜೆಪಿ ಪರವಾದ ಅಲೆ ಇದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಉತ್ತರ ಪ್ರದೇಶದಲ್ಲಿನ ಉದಾಹರಣೆಯನ್ನು ಉಲ್ಲೇಖಿಸಿರುವ ಪ್ರಧಾನಿ, 2014, 2017, 2019 ರ ಲೋಕಸಭೆ, ವಿಧಾನಸಭೆ ಚುನಾವಣೆಗಳಲ್ಲಿ ಬಿಜೆಪಿ ಗೆದ್ದಿದೆ, ಉತ್ತರ ಪ್ರದೇಶದ ಜನತೆ ಒಮ್ಮೆ ಅಧಿಕಾರಕ್ಕೆ ಬನ್ನಿ ಮತ್ತೆ ಹೋಗಿ ಎಂಬ ಥಿಯರಿಗೆ ತಿಲಾಂಜಲಿ ನೀಡಿದ್ದಾರೆ. ಬಿಜೆಪಿ ತನ್ನನ್ನು ಉತ್ತರ ಪ್ರದೇಶ ಒಪ್ಪಿಕೊಂಡಿದೆ ಎಂಬುದನ್ನು 2014 ರಲ್ಲೇ ಕಂಡುಕೊಂಡಿದೆ. ಜನತೆ ನಮ್ಮ ಸರ್ಕಾರದ ಕೆಲಸಗಳನ್ನು ಕಂಡು 2017 ರಲ್ಲಿ ಬಹುಮತ ನೀಡಿದರು 2019 ರಲ್ಲಿಯೂ ಇದೇ ಪುನರಾವರ್ತನೆಯಾಯಿತು ಈಗ 2022 ಬಂದಿದೆ ಜನತೆ ನಮ್ಮ ಸರ್ಕಾರದ ಕೆಲಸಗಳನ್ನು ಗಮನಿಸಿ ಮತ್ತೆ ನಮ್ಮನ್ನು ಒಪ್ಪಿಕೊಳ್ಳುತ್ತಾರೆ ಎಂದು ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.