ದೇಶಕ್ಕೆ ಮುಂದಿನ 25 ವರ್ಷಗಳು ಅತ್ಯಂತ ಪ್ರಮುಖ ವರ್ಷಗಳಾಗಿರಲಿವೆ: ಪ್ರಧಾನಿ ಮೋದಿ

ನರ್ಮದಾ (ಗುಜರಾತ್): ಭಾರತಕ್ಕೆ ಮುಂದಿನ 25 ವರ್ಷಗಳು ಅತ್ಯಂತ ಪ್ರಮುಖ ವರ್ಷಗಳಾಗಿರಲಿವೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಂಗಳವಾರ ಹೇಳಿದರು.

ಗುಜರಾತ್ ಪ್ರವಾಸದಲ್ಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ಮಂಗಳವಾರ ರಾಷ್ಟ್ರೀಯ ಏಕತಾ ದಿನದ ಪ್ರಯುಕ್ತ ಏಕತಾ ನಗರದಲ್ಲಿರುವ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಪ್ರತಿಮೆಗೆ ಜಲ ಅರ್ಚನೆ ಮತ್ತು ಪುಷ್ಪಾರ್ಚನೆ ಮಾಡಿದರು.

ಬಳಿಕ ಮಾತನಾಡಿದ ಅವರು, ಈ ದಿನ ನಮ್ಮ ಸಮಾಜದಲ್ಲಿ ಏಕತೆ ಮತ್ತು ಸಹೋದರತ್ವದ ಮನೋಭಾವವನ್ನು ಇನ್ನಷ್ಟು ಹೆಚ್ಚಿಸಲಿ, ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಇಲ್ಲಿ ನೆರೆದಿರುವ ಯುವಕರು ಮತ್ತು ಧೈರ್ಯಶಾಲಿಗಳ ಉತ್ಸಾಹವು ‘ರಾಷ್ಟ್ರೀಯ ಏಕತಾ ದಿನ’ದ ದೊಡ್ಡ ಶಕ್ತಿಯಾಗಿದೆ ಎಂದು ಹೇಳಿದರು.

ಮಿನಿ ಭಾರತದ ರೂಪ ವಿಭಿನ್ನವಾಗಿ ಕಾಣಿಸುತ್ತಿದೆ. ಇಲ್ಲಿ ಭಾಷೆ, ಸಂಪ್ರದಾಯ ವಿಭಿನ್ನವಾಗಿದೆ. ಆದರೆ, ಪ್ರತಿಯೊಬ್ಬ ವ್ಯಕ್ತಿಯೂ ಒಗ್ಗಟ್ಟಾಗಿದ್ದಾರೆ. ಅದು ಬಲವಾದ ಸಂಪರ್ಕವನ್ನು ಹೊಂದಿದೆ.

ಆಗಸ್ಟ್ 15 ರಂದು ಕೆಂಪು ಕೋಟೆಯಲ್ಲಿ ನಡೆದ ಕಾರ್ಯಕ್ರಮ, ಜನವರಿ 26 ರಂದು ಕರ್ತವ್ಯ ಪಥದಲ್ಲಿ ನಡೆದ ಪರೇಡ್ ಮತ್ತು ನರ್ಮದಾ ತೀರದಲ್ಲಿ ಏಕತಾ ದಿನಾಚರಣೆ ದೇಶದ ಮೂರು ಶಕ್ತಿಗಳಾಗಿವೆ. ಮುಂದಿನ 25 ವರ್ಷಗಳಲ್ಲಿ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡಲು ಒತ್ತು ನೀಡಲಾಗುವುದು. ಈ 25 ವರ್ಷಗಳು ನಮ್ಮ ದೇಶಕ್ಕೆ ಅತ್ಯಂತ ಮಹತ್ವದ ವರ್ಷಗಳಾಗಿರಲಿವೆ ಎಂದು ಹೇಳಿದರು.

ರಾಷ್ಟ್ರೀಯ ಏಕತಾ ದಿನವನ್ನು ಪ್ರತಿವರ್ಷ ಅಕ್ಟೋಬರ್ 31ರಂದು ಆಚರಿಸಲಾಗುತ್ತದೆ. ದೇಶದ ಉಕ್ಕಿನ ಮನುಷ್ಯ ಎಂದೇ ಜನಪ್ರಿಯರಾದ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಜನ್ಮದಿನವನ್ನು ಏಕತಾ ದಿನವನ್ನಾಗಿ ಆಚರಿಸುವುದಕ್ಕೆ ಕೇಂದ್ರ ಸರ್ಕಾರ 2014ರಲ್ಲಿ ಜಾರಿಗೆ ತಂದಿತು. ಈ ವರ್ಷ ಅವರ 145ನೇ ಜಯಂತಿ.

ಭಾರತದ ಸ್ವಾತಂತ್ರ್ಯ ಚಳವಳಿ ಮತ್ತು ಭಾರತದ ಏಕೀಕರಣಕ್ಕೆ ಸರ್ದಾರ್ ವಲ್ಲಭಬಾಯಿ ಪಟೇಲರು ಸಾಕಷ್ಟು ಶ್ರಮಿಸಿದ್ದರು. ಸ್ವತಂತ್ರ ಭಾರತದಲ್ಲಿ ಪಟೇಲರು ಈ ದೇಶ ಕಂಡ ಮೊದಲ ಉಪ ಪ್ರಧಾನಿ ಮತ್ತು ಮೊದಲ ಗೃಹ ಸಚಿವ. ದೇಶದ ಐಕ್ಯತೆ ಮತ್ತು ಸಮಗ್ರತೆಗಾಗಿ ಪಟೇಲರು ಕಂಡಿದ್ದ ಕನಸು ಮತ್ತು ಅದಕ್ಕಾಗಿ ಅವರು ಪಟ್ಟ ಶ್ರಮವನ್ನು ಗುರುತಿಸಿ ಕೇಂದ್ರ ಸರ್ಕಾರ ಅವರ ಜನ್ಮದಿನದಂದು ರಾಷ್ಟ್ರೀಯ ಏಕತಾ ದಿವಸ ಎಂದು ಜಾರಿಗೆ ತಂದಿದೆ.

ಭಾರತ ವೈವಿಧ್ಯತೆ ಹೊಂದಿರುವ ದೇಶ, ಇಲ್ಲಿನ ಧರ್ಮ, ಸಂಸ್ಕೃತಿ, ಸಂಪ್ರದಾಯ, ಭಾಷೆಗಳು ಪ್ರದೇಶದಿಂದ ಪ್ರದೇಶಕ್ಕೆ ವಿಭಿನ್ನವಾಗಿದೆ. ವಿವಿಧತೆಯಲ್ಲಿ ಏಕತೆ, ಒಗ್ಗಟ್ಟು ಕಾಪಾಡಿಕೊಂಡು ಹೋಗುವುದು ದೇಶದ ಅಭಿವೃದ್ಧಿಗೆ ಮುಖ್ಯವಾಗಿದೆ. ಹೀಗೆ ಸರ್ದಾರ್ ಪಟೇಲರು ಏಕತೆಗೆ ಯಾವ ರೀತಿ ಕೊಡುಗೆ ನೀಡಿದ್ದರು ಎಂಬ ಬಗ್ಗೆ ಇಂದಿನ ಜನಾಂಗದವರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಈ ದಿನವನ್ನು ಆಚರಿಸುತ್ತಿದೆ.

2018ರಲ್ಲಿ ಪ್ರಧಾನಿ ನರೇಂದ್ರ ಮೋದಿ ಗುಜರಾತ್ ನ ಕೆವಾಡಿಯಾದಲ್ಲಿ ನರ್ಮದಾ ನದಿ ತೀರದಲ್ಲಿ ಸರ್ದಾರ ಅಣೆಕಟ್ಟಿನ ಎದುರಿಗೆ ಸರ್ದಾರ್ ವಲ್ಲಭಬಾಯಿ ಪಟೇಲರ ವಿಶ್ವದ ಅತಿ ಎತ್ತರದ ಪ್ರತಿಮೆ(597 ಅಡಿ)ಯನ್ನು ಉದ್ಘಾಟಿಸಿದ್ದರು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *