ವಾರಕ್ಕೆ 70 ಗಂಟೆ ಕೆಲಸ: ಇನ್ಫಿ ಮೂರ್ತಿ ಹೇಳಿಕೆಗೆ ಪ್ರಿಯಾಂಕ್‌ ಖರ್ಗೆ ಬೆಂಬಲ

ನವದೆಹಲಿ (ನ.01): ನಾರಾಯಣ ಮೂರ್ತಿಯವರು ಇನ್ಫೋಸಿಸ್‌ ಸಂಸ್ಥೆಯನ್ನು ಕಷ್ಟಪಟ್ಟು ಕಟ್ಟಿದ್ದಾರೆ. ಯುವಕರು ಪ್ರತಿ ವಾರಕ್ಕೆ 70 ಗಂಟೆ ಕೆಲಸ ಮಾಡಬೇಕು ಎಂದು ಅವರು ತಮ್ಮ ಅಭಿಪ್ರಾಯ ಹೇಳಿದ್ದಾರೆ. ಭವಿಷ್ಯದ ಭಾರತಕ್ಕೆ ಇದೊಂದು ಉತ್ತಮವಾದ ಸಲಹೆ. ನಾನು ಇದನ್ನು ಸ್ವಾಗತಿಸುತ್ತೇನೆ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದ್ದಾರೆ. ಭಾರತದ ಉತ್ಪಾದಕತೆ ಕಡಿಮೆಯಾಗಿದ್ದು, ಜಿಡಿಪಿ ಹೆಚ್ಚಾಗಲು ಯುವಕರು ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡಬೇಕು ಎಂಬ ಇನ್ಫೋಸಿಸ್‌ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಹೇಳಿಕೆ ಇತ್ತೀಚೆಗೆ ಭಾರೀ ಪರ ವಿರೋಧಗಳ ಚರ್ಚೆಗೆ ಗ್ರಾಸವಾಗಿದ್ದ ಬೆನ್ನಲ್ಲೇ ಮೂರ್ತಿ ಹೇಳಿಕೆಗೆ ಪ್ರಿಯಾಂಕ್‌ ಬೆಂಬಲ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಿಯಾಂಕ್‌ ‘ಮೂರ್ತಿ ಅವರು ಕಠಿಣ ಪರಿಶ್ರಮದಿಂದ ಕಂಪನಿ ನಿರ್ಮಿಸಿ ಹೆಚ್ಚಿನ ಜನರಿಗೆ ಉದ್ಯೋಗ ನೀಡುವ ಮೂಲಕ ತಮ್ಮನ್ನು ತಾವು ಏನೆಂದು ಸಾಬೀತುಪಡಿಸಿದ್ದಾರೆ. ಅವರು ದೇಶದ ಹಿತದೃಷ್ಟಿಯಿಂದ ತಮ್ಮ ಅಭಿಪ್ರಾಯ ಹೇಳಿದ್ದಾರೆ. ನಾವು ಉತ್ಪಾದಕ ಕೆಲಸಗಳತ್ತ ಹೆಚ್ಚು ಗಮನ ಹರಿಸಬೇಕು. ಜಾಗತಿಕ ಉತ್ಪಾದನಾ ಕೇಂದ್ರವಾಗಿ ಹೊರಹೊಮ್ಮಲು ಉತ್ಪಾದಕತೆ ಹೆಚ್ಚಿಸಿಕೊಳ್ಳಬೇಕು. ಅದಕ್ಕಾಗಿ ಎಲ್ಲರೂ ಶ್ರಮಿಸಬೇಕು’ ಎಂದಿದ್ದಾರೆ.

ವಾರಕ್ಕೆ 70 ಗಂಟೆ ಕೆಲಸ ಮಾಡಬೇಕು: ಭಾರತ ಗಮನಾರ್ಹ ಬದಲಾವಣೆಯನ್ನು ಸಾಧಿಸಬೇಕಾದರೆ ಭಾರತದ ಯುವಕರು ವಾರಕ್ಕೆ ಗರಿಷ್ಠ 70 ಗಂಟೆಗಳ ಕಾಲ ಕೆಲಸ ಮಾಡಬೇಕು. ಅಲ್ಲದೇ ಅನಪೇಕ್ಷಿತ ಹವ್ಯಾಸಗಳನ್ನು ಪಾಶ್ಚಿಮಾತ್ಯರಿಂದ ಕಲಿಯಬಾರದು ಎಂದು ಇನ್ಫೊಸಿಸ್‌ ಸ್ಥಾಪಕ ನಾರಾಯಣ ಮೂರ್ತಿ ಗುರುವಾರ ಹೇಳಿದ್ದಾರೆ. ಇನ್ಫೋಸಿಸ್‌ನ ಮಾಜಿ ಸಿಎಫ್‌ಒ ಮೋಹನ್‌ದಾಸ್‌ ಪೈ ಅವರ ಜೊತೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಮೂರ್ತಿ, ಭಾರತೀಯರು ಪಾಶ್ಚಿಮಾತ್ಯರಿಂದ ಅನಪೇಕ್ಷಿತ ಹವ್ಯಾಸಗಳನ್ನು ಕಲಿಯಬಾರದು. ಭಾರತ ನನ್ನ ದೇಶ, ಇದಕ್ಕಾಗಿ ನಾನು 70 ಗಂಟೆಗಳ ಕಾಲ ದುಡಿಯುತ್ತೇನೆ ಎಂಬ ಮನಃಸ್ಥಿತಿಯನ್ನು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.

ಕಳೆದ 25ರಿಂದ 30 ವರ್ಷಗಳಲ್ಲಿ ಇತರ ದೇಶಗಳ ಅಭಿವೃದ್ಧಿಯನ್ನು ನಾವು ಗಮನಿಸಿದರೆ ಇದು ನಮಗೆ ಅರ್ಥವಾಗುತ್ತದೆ. ಇಷ್ಟು ಕಾಲಮಾನವನ್ನು ಏಕೆ ಹೇಳುತ್ತಿದ್ದೇನೆ ಎಂದರೆ, ಈ ಅವಧಿಯಲ್ಲಿ ಈ ದೇಶಗಳು ಏಳು ಬೀಳುಗಳನ್ನು ಕಂಡಿವೆ. ಚೀನಾದಂತಹ ದೇಶಗಳು ಆರ್ಥಿಕ ಅಭಿವೃದ್ಧಿ ಸಾಧಿಸಲು ತೆಗೆದುಕೊಂಡ ನಿರ್ಧಾರಗಳನ್ನು ಗಮನಿಸಿದರೆ ನಾವು ಏನು ಮಾಡಬೇಕು ಎಂಬುದು ಗೊತ್ತಾಗುತ್ತದೆ ಎಂದು ಹೇಳಿದರು. ವಿಶ್ವಕ್ಕೆ ಹೋಲಿಸಿದರೆ ಭಾರತದ ಕೆಲಸದ ಉತ್ಪನ್ನ ಬಹಳ ಕಡಿಮೆ ಇದೆ. ಹಾಗಾಗಿ ನಾವು ನಮ್ಮ ಕೆಲಸವನ್ನು ಹೆಚ್ಚು ಮಾಡದಿದ್ದರೆ, ಸರ್ಕಾರದಲ್ಲಿ ಭ್ರಷ್ಟಾಚಾರವನ್ನು ಕಡಿಮೆ ಮಾಡದಿದ್ದರೆ, ನಾವು ಅಂದುಕೊಂಡಿರುವ ಅವಧಿಯಲ್ಲಿ ಅಭಿವೃದ್ಧಿಯನ್ನು ಸಾಧಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *