ಕಾಂಗ್ರೆಸ್‌ನ ಒಳಜಗಳದಿಂದಲೇ ರಾಜ್ಯ ಸರ್ಕಾರ ಪತನ: ನಳಿನ್ ಕಟೀಲ್

ಹುಬ್ಬಳ್ಳಿ (ನ.04): ಕಾಂಗ್ರೆಸ್‌ನಲ್ಲಿ ಈಗ ಮೂರು ಬಣಗಳಾಗಿದ್ದು, ದಿನದಿಂದ ದಿನಕ್ಕೆ ಕಾಂಗ್ರೆಸ್ ಒಳಜಗಳ ಹೆಚ್ಚುತ್ತಲೇ ಇದೆ. ಒಳಜಗಳದಿಂದ ಈ ಸರ್ಕಾರ ಬಿದ್ದು ಹೋಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್‌ ಕಟೀಲ್ ಹೇಳಿದರು. ಮಾಧ್ಯಮಗಳೊಂದಿಗೆ ಶುಕ್ರವಾರ ಮಾತನಾಡಿ, ಪ್ರತಿಪಕ್ಷ ಸ್ಥಾನಕ್ಕೆ ಸೂಕ್ತ ಸಮಯದಲ್ಲಿ ಆಯ್ಕೆ ಮಾಡಲಾಗುತ್ತದೆ. ಈ ಹಿಂದೆ ಕಾಂಗ್ರೆಸ್ ಕೂಡ ಪ್ರತಿಪಕ್ಷ ನಾಯಕನನ್ನು ಆಯ್ಕೆ ಮಾಡಿರಲಿಲ್ಲ ಎಂದು ಕಾಂಗ್ರೆಸ್ ಮುಖಂಡರ ಟೀಕೆಗೆ ತಿರುಗೇಟು ನೀಡಿದರು.

ಜನವರಿ ಬಳಿಕ ಮಾತುಕತೆ: ಜೆಡಿಎಸ್ ಪಕ್ಷ ಎನ್‌ಡಿಎ ಮೈತ್ರಿಕೂಟ ಸೇರಿದ್ದು, ಜನವರಿ ಬಳಿಕ ಮಾತುಕತೆಗಳು ಮುಂದುವರಿಯಲಿವೆ ಎಂದು ಕಟೀಲ್ ಸ್ಪಷ್ಟಪಡಿಸಿದರು. ಸದ್ಯ ನಡೆಯಲಿರುವ ವಿಧಾನಪರಿಷತ್ ಚುನಾವಣೆಯಲ್ಲಿ ಜೆಡಿಎಸ್-ಬಿಜೆಪಿ ಹೊಂದಾಣಿಕೆ ಸ್ಥಾನ ಹಂಚಿಕೆ ಬಗ್ಗೆ ಕೇಂದ್ರ ನಾಯಕರು ನಿರ್ಧರಿಸಲಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ 6 ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದು, ಜನವರಿ ಬಳಿಕ ಈ ಕುರಿತು ಸ್ಪಷ್ಟತೆ ಸಿಗಲಿದೆ ಎಂದು ತಿಳಿಸಿದರು.

ಲೋಕಸಭಾ ಚುನಾವಣೆ ದೃಷ್ಟಿಯಿಂದ ಪಕ್ಷವನ್ನು ಮತ್ತೆ ಸಂಘಟನೆ ಮಾಡುತ್ತಿದ್ದು, ಜನವರಿ ನಂತರ ಮತ್ತಷ್ಟು ವೇಗ ದೊರೆಯಲಿದೆ. ಸಮೀಕ್ಷೆ ನಡೆಸಿ ಟಿಕೆಟ್ ಹಂಚಿಕೆ ಮಾಡಲಿದ್ದು, ಗೆಲ್ಲುವ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತೇವೆ ಎಂದರು.ರಾಜ್ಯ ವಿಧಾನಸಭೆ ಪ್ರತಿಪಕ್ಷ ನಾಯಕ ಸ್ಥಾನಕ್ಕೆ ಎಚ್.ಡಿ. ಕುಮಾರಸ್ವಾಮಿ ನೇಮಕ ಕುರಿತು ಉತ್ತರಿಸಲು ನಿರಾಕರಿಸಿದರು

ಬಿಜೆಪಿ, ಹಿಂದುಗಳ ವಿರುದ್ಧ ಕಾಂಗ್ರೆಸ್‌ ದ್ವೇಷ: ಪ್ರತಿಪಕ್ಷ ಬಿಜೆಪಿ ಹಾಗೂ ಹಿಂದುತ್ವ ಪರವಾದ ಸಂಘಟನೆಗಳ ವಿರುದ್ಧ ವಿನಾಕಾರಣ ಕೇಸು ದಾಖಲಿಸುವ ಮೂಲಕ ರಾಜ್ಯದ ಕಾಂಗ್ರೆಸ್‌ ಸರ್ಕಾರ ದ್ವೇಷ ರಾಜಕಾರಣ ಮಾಡುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಆರೋಪಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜನಪ್ರತಿನಿಧಿಗಳ ಮೇಲೆ ಕೇಸು ದಾಖಲಿಸಿ ಅವರ ಹಕ್ಕುಗಳಿಗೆ ದಿಗ್ಬಂಧನ ವಿಧಿಸಲಾಗುತ್ತಿದೆ.

 

ಕೋಲಾರದಲ್ಲಿ ಉಸ್ತುವಾರಿ ಸಚಿವರ ಸಭೆಗೆ ತೆರಳುತ್ತಿದ್ದ ಸಂಸದರನ್ನು ಪೊಲೀಸ್‌ ವರಿಷ್ಠಾಧಿಕಾರಿ ಹೊರಗೆ ಕ‍ಳುಹಿಸಿದ ವಿದ್ಯಮಾನ ನಡೆದಿದೆ. ದ.ಕ.ದ ಬೆಳ್ತಂಗಡಿಯಲ್ಲಿ ಅಲ್ಲಿನ ಶಾಸಕರು ಜನಸಾಮಾನ್ಯ ಹಾಗೂ ರೈತರ ಪರ ಧ್ವನಿ ಎತ್ತಿದಾಗ ಅವರ ವಿರುದ್ಧವೇ ಕೇಸು ದಾಖಲಿಸಿ ಹೋರಾಟವನ್ನು ದಮನಿಸುವ ಕೆಲಸ ಮಾಡಲಾಗಿದೆ. ಯಾರೋ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ ಮಾತ್ರಕ್ಕೆ ಶಾಸಕರ ವಿರುದ್ಧವೇ ಬೆಳ್ತಂಗಡಿ ಪೊಲೀಸ್‌ ಠಾಣೆಯಲ್ಲಿ ಕೇಸು ದಾಖಲಿಸಲಾಗಿದೆ. ಶಾಸಕರಿಗೇ ಈ ಗತಿಯಾದರೆ, ಸಾಮಾನ್ಯರ ಪಾಡೇನು ಎಂದು ಪ್ರಶ್ನಿಸಿದರು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *