ಪಿಎಸ್ಐ, ಕೆಇಎ ಹಗರಣಗಳ ಕಿಂಗ್ ಪಿನ್ ಆರ್ ಡಿ ಪಾಟೀಲ್ ಅವಿತುಕೊಳ್ಳಲು ಬಾಡಿಗೆ ಮನೆ ನೀಡಿದ ಆರೋಪ; ಇಬ್ಬರ ಸೆರೆ

ಹೈಲೈಟ್ಸ್‌:

  • ಆರ್ ಡಿ ಪಾಟೀಲ್ ಅವಿತುಕೊಳ್ಳಲು ಅಪಾರ್ಟ್ ಮೆಂಟ್ ನೀಡಿದ್ದ ಇಬ್ಬರ ಬಂಧನ
  • ಅಪಾರ್ಟ್ ಮೆಂಟ್ ಮಾಲೀಕ ಶಂಕರಗೌಡ, ಸೂಪರ್ವೈಸರ್ ದಿಲೀಪ್ ಬಂಧಿತರು
  • ಸರಿಯಾಗಿ ಮಾಹಿತಿ ಪಡೆಯದೆ ಅಪಾರ್ಟ್ ಮೆಂಟ್ ಬಾಡಿಗೆ ನೀಡಿದ್ದ ಆರೋಪ

ಕಲಬುರಗಿ: ಕೆಇಎ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣದ ತನಿಖೆ ಚುರುಕಾಗಿದ್ದು ಪ್ರಕರಣದ ಕಿಂಗ್ ಪಿನ್ ಆರ್ ಡಿ ಪಾಟೀಲ್ ಗೆ ಅಪಾರ್ಟ್‌ಮೆಂಟ್ ನಲ್ಲಿ ಮನೆ ಬಾಡಿಗೆ ನೀಡಿದ ಮಾಲೀಕ‌ , ಸುಪರ್ ವೈಸರ್ ಪೊಲೀಸರು ಬಂಧಿಸಿದ್ದಾರೆ.

ಅಪಾರ್ಟ್‌ಮೆಂಟ್ ಮಾಲೀಕ ಶಂಕರಗೌಡ ಯಾಳವಾರ , ಸೂಪರ್ ವೈಸರ್ ದಿಲಿಪ್ ಪವಾರ್ ಬಂಧಿತರು. ಪಿಎಸ್ ಐ ಹಗರಣದಲ್ಲೂ ಪ್ರಮುಖ ಆರೋಪಿಯಾಗಿದ್ದ ಆರ್ ಡಿ ಪಾಟೀಲ್ ಗೆ ಯಾದಗಿರಿ ಜಿಲ್ಲೆಯ ಶಹಾಪುರ ಮೂಲದ ಔಷಧ ವ್ಯಾಪಾರಿ ಶಂಕರಗೌಡ ಯಾಳವಾರ ಅವರು ತಮಗೆ ಸೇರಿದ ಅಪಾರ್ಟ್ ಮೆಂಟ್ ಅನ್ನು ಸರಿಯಾದ ಮಾಹಿತಿ ಪಡೆಯದೆ ಬಾಡಿಗೆ ನೀಡಿದ್ದರು ಎನ್ನಲಾಗಿದೆ.

ಆರ್ ಡಿ ಪಾಟೀಲ್ ನನ್ನು ಪೊಲೀಸರು ಹುಡುಕಾಡುತ್ತಿದ್ದರು. ಈ ವೇಳೆ ಮನೆ ಬಾಡಿಗೆ ನೀಡಿ ತೆಲೆ ಮರೇಸಿಕೊಳ್ಳಲು ಸಹಕಾರ ಮಾಡಿದ ಹಿನ್ನಲೆ ಯಲ್ಲಿ ಬಂಧಿಸಲಾಗಿದೆ.

ಅಧಿಕಾರಿಗಳ ತಲೆದಂಡ ಸಂಭವ
ಖಚಿತ ಮಾಹಿತಿ ಸಿಕ್ಕರೂ ಕಿಂಗ್‌ಪಿನ್‌ ಆರ್ ಡಿ ಪಾಟೀಲ್ ಬಂಧಿಸದೇ ಇರುವ ಪ್ರಕರಣದಲ್ಲಿ ಇಬ್ಬರು ಪೊಲೀಸ್‌ ಅಧಿಕಾರಿಗಳ ತಲೆದಂಡವಾಗುವ ಸಾಧ್ಯತೆ ಇದೆ. ಮಾಹಿತಿ ಸಿಕ್ಕರೂ ತಡಮಾಡಿ ಬಂಧಿಸಲು ಹೋಗಿರುವುದು ಒಂದೆಡೆಯಾದರೆ, ಪರಾರಿಯಾಗಲು ಕೆಲ ಪೊಲೀಸರೇ ಸಹಕಾರ ನೀಡಿದ್ದಾರೆ ಎಂಬ ಗುಮಾನಿ ಇದೆ.

ಪೊಲೀಸ್‌ ಅಧಿಕಾರಿಗಳು ಬಂಧಿಸಲು ಹೋಗಿದ್ದಾಗ ಆತ ಯಾರೊಂದಿಗೆ ಫೋನ್‌ನಲ್ಲಿ ಮಾತನಾಡುತ್ತಿದ್ದ ಎನ್ನುವುದು ಕುತೂಹಲ ಮೂಡಿಸಿದ್ದು, ಇಲಾಖೆಯವರೇ ಸುಳಿವು ಕೊಟ್ಟರೆ ಎಂಬ ಪ್ರಶ್ನೆ ಎದ್ದಿದೆ. ಅದು ದೃಢಪಟ್ಟರೆ ತಲೆದಂಡ ಖಚಿತ ಎಂದು ಮೂಲಗಳು ತಿಳಿಸಿವೆ.

ಸ್ಟ್ರಾಂಗ್‌ ರೂಂ ಪರಿಶೀಲನೆ
ಪಿಎಸ್‌ಐ ನೇಮಕ ಅಕ್ರಮದ ಬಗ್ಗೆ ತನಿಖೆ ನಡೆಸಲು ನೇಮಿಸಿರುವ ನ್ಯಾ ಬಿ ವೀರಪ್ಪ ನೇತೃತ್ವದ ಆಯೋಗ ಗುರುವಾರ ಬೆಂಗಳೂರಿನ ಸಿಐಡಿ ಕಚೇರಿಗೆ ಭೇಟಿ ನೀಡಿ ಅಲ್ಲಿನ ಸ್ಟ್ರಾಂಗ್‌ ರೂಂ ಪರಿಶೀಲನೆ ನಡೆಸಿತು

ನ್ಯಾ ಬಿ ವೀರಪ್ಪ, ಕಾರ್ಯದರ್ಶಿ ನಂಜುಂಡಸ್ವಾಮಿ, ವಕೀಲ ಅಶೋಕ್‌ ನಾಯಕ್‌ ಅವರು ಕಾಲ್‌ರ್‍ಟನ್‌ ಭವನಕ್ಕೆ ಭೇಟಿ ನೀಡಿ ಹಗರಣಕ್ಕೆ ಸಂಬಂಧಿಸಿದಂತೆ ಉತ್ತರ ಪತ್ರಿಕೆಗಳನ್ನು ಇಟ್ಟಿದ್ದ ಸ್ಟ್ರಾಂಗ್‌ ರೂಂ ಪರಿಶೀಲಿಸಿತು. ಸ್ಟ್ರಾಂಗ್‌ ರೂಂ ಹೇಗೆ ಕಾರ್ಯನಿರ್ವಹಿಸುತ್ತದೆ, ಅದರ ಕೀ ಯಾರ ಬಳಿ ಇರುತ್ತದೆ, ಆ ಕೋಣೆಯಲ್ಲಿನ ಸಿಸಿಟಿವಿಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದರ ಮಾಹಿತಿಗಳನ್ನು ಅಧಿಕಾರಿಗಳಿಂದ ಪಡೆದು, ಖುದ್ದು ಪರಿಶೀಲಿಸಿದರು.

ಇದೇ ವೇಳೆ ನ್ಯಾಯಮೂರ್ತಿ, ಡಿಜಿಪಿ ನೇಮಕಾತಿ ಕಮಲ್‌ ಪಂತ್‌, ಸಿಐಡಿ ಡಿಜಿ ಎಂ.ಎ.ಸಲೀಂ ಸೇರಿದಂತೆ ಹಿರಿಯ ಪೊಲೀಸ್‌ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಹಗರಣದ ಬಗ್ಗೆ ವಿವರ ಪಡೆದುಕೊಂಡರು.

ಅಲ್ಲದೆ, ಉತ್ತರ ಪತ್ರಿಕೆಗಳನ್ನು ತಿದ್ದುವ ಸಮಯದಲ್ಲಿ ಸಿಸಿಟಿವಿ ಆಫ್‌ ಮಾಡಲಾಗಿತ್ತು ಎಂಬ ವರದಿಗಳ ಹಿನ್ನೆಲೆಯಲ್ಲಿ ಯಾವಾಗ ಸಿಸಿಟಿವಿ ಆಫ್‌ ಆಗಿತ್ತು? ಅದಕ್ಕೆ ಕಾರಣಗಳೇನು ಎಂಬ ಬಗ್ಗೆ ವರದಿ ನೀಡುವಂತೆ ಆಯೋಗ ಪೊಲೀಸ್‌ ಅಧಿಕಾರಿಗಳಿಗೆ ಸೂಚನೆ ನೀಡಿದೆ.

ಪಿಎಸ್‌ಐ ನೇಮಕ ಅಕ್ರಮದ ಬಗ್ಗೆ ಸಮಗ್ರ ವಿಚಾರಣೆ ನಡೆಸಿ ವರದಿ ನೀಡಲು ಸರಕಾರ ನ್ಯಾ ಬಿ ವೀರಪ್ಪ ನೇತೃತ್ವದ ನ್ಯಾಯಾಂಗ ಆಯೋಗವನ್ನು ರಚಿಸಿದೆ. ಆಯೋಗ 120ಕ್ಕೂ ಅಧಿಕ ಆರೋಪಿಗಳೂ ಸೇರಿ ಸಂಬಂಧಿಸಿದ ಅಧಿಕಾರಿಗಳಿಗೆ ನೋಟಿಸ್‌ ನೀಡಿ ಅವರ ವಿಚಾರಣೆ ನಡೆಸುತ್ತಿದೆ. ಅಲ್ಲದೆ ಸಾರ್ವಜನಿಕರಿಂದಲೂ ಮಾಹಿತಿ ಸಂಗ್ರಹ ಮಾಡಿದೆ. ಇದೀಗ 27 ಸಾಕ್ಷಿಗಳ ವಿಚಾರಣೆ ನಡೆಸುತ್ತಿದ್ದು, ಆನಂತರ ಅಫಿಡವಿಟ್‌ ಸಲ್ಲಿಸಿರುವ ಆರೋಪಿಗಳ ಪಾಟೀ ಸವಾಲು ನಡೆಸಿ ಎಲ್ಲಆಯಾಮಗಳಿಂದ ವಿಚಾರಣೆ ನಡೆಸಲು ಸಿದ್ಧತೆ ನಡೆಸಿದೆ.

 

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *