ಆರ್.ಡಿ. ಪಾಟೀಲ್ ವೈದ್ಯಕೀಯ ಪರೀಕ್ಷೆ ಸಂದರ್ಭದಲ್ಲಿ ಕರ್ತವ್ಯಲೋಪ: ಇಬ್ಬರು ಪೋಲಿಸ್ ಪೇದೆಗಳ ಅಮಾನತ್ತು

ಕಲಬುರಗಿ: ನ. 18: ವೈದ್ಯಕೀಯ ಪರೀಕ್ಷೆಗಾಗಿ ಕಳೆದ ಶುಕ್ರವಾರ ನಗರದ ಜಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋದ ಸಂದರ್ಭದಲ್ಲಿ ಪಿಎಸ್‍ಐ ಮತ್ತು ಎಫ್‍ಡಿಎ ಪರೀಕ್ಷೆಗಳ ಅಕ್ರಮದ ಪ್ರಮುಖ ಆರೋಪಿ ಆರ್.ಡಿ. ಪಾಟೀಲ್‍ನಿಗೆ ಸಲಾಂ ಹೊಡೆದು ಕರ್ತವ್ಯ ಲೋಪ ಎಸಗಿದ ಆರೋಪದ ಮೇಲೆ ಬ್ರಹ್ಮಪುರ ಪೋಲಿಸ್ ಠಾಣೆಯ ಪೇದೆ ಮಾಳಪ್ಪ ಜಿ. ಭರಗಿ ಅವರನ್ನು ಅಮಾನತ್ತುಗೊಳಿಸಲಾಗಿದ್ದು, ಅದೇ ರೀತಿ ಕರ್ತವ್ಯ ಲೋಪ ಎಸಗಿದ ಆರೋಪದ ಮೇಲೆ ಅಶೋಕ್ ನಗರ ಪೋಲಿಸ್ ಠಾಣೆಯ ಮುಖ್ಯ ಪೋಲಿಸ್ ಪೇದೆ ಮಲ್ಲಿಕಾರ್ಜುನ್ ಹೆಬ್ಬಾಳ್ ಅವರಿಗೆ ಅಮಾನತ್ತುಗೊಳಿಸಿ ನಗರ ಪೋಲಿಸ್ ಆಯುಕ್ತ ಆರ್. ಚೇತನ್ ಅವರು ಆದೇಶ ಹೊರಡಿಸಿದ್ದಾರೆ.
ಕೆಎಇ ಅಕ್ರಮದ ಪ್ರಮುಖ ಆರೋಪಿ ಆರ್.ಡಿ. ಪಾಟೀಲ್‍ನಿಗೆ ಪೋಲಿಸ್ ಪೇದೆ ಸಲಾಂ ಹೊಡೆದಿದ್ದ. ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದಲ್ಲದೇ ಮಾಧ್ಯಮಗಳು ಹಾಗೂ ಪತ್ರಿಕೆಗಳಲ್ಲಿ ವರದಿಯಾಗಿದ್ದು, ಇಡೀ ಪೋಲಿಸ್ ಇಲಾಖೆಗೆ ಮುಜುಗುರ ಉಂಟು ಮಾಡಿತ್ತು.
ಅದೇ ರೀತಿ ಮಾಧ್ಯಮದವರಿಗೆ ಮಾತನಾಡಲು ಅವಕಾಶ ಮಾಡಿಕೊಟ್ಟ ಆರೋಪದ ಮೇಲೆ ಬ್ರಹ್ಮಪೂರ್ ಪೋಲಿಸ್ ಠಾಣೆಯ ಪೇದೆ ಮಾಳಪ ಜಿ. ಭರಗಿ ಅವರನ್ನೂ ಸಹ ನಗರ ಪೋಲಿಸ್ ಆಯುಕ್ತ ಆರ್. ಚೇತನ್ ಅವರು ಅಮಾನತ್ತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಆರ್.ಡಿ. ಪಾಟೀಲ್‍ನಿಗೆ ಜಿಲ್ಲಾ ಆಸ್ಪತ್ರೆ ವೈದ್ಯಕೀಯ ಪರೀಕ್ಷೆಗೆ ಕರೆತಂದಾಗ ಆಸ್ಪತ್ರೆಯ ಒಳಭಾಗಕ್ಕೆ ವೈದ್ಯಕೀಯ ಪರೀಕ್ಷೆಗೆ ಬೇಗನೇ ಕರೆದುಕೊಂಡು ಹೋಗದೇ ಆರೋಪಿಯನ್ನು ಆಸ್ಪತ್ರೆಯ ಪ್ರವೇಶ ದ್ವಾರದ ಹತ್ತಿರ ನಿಲ್ಲಿಸಿಕೊಂಡು ಮಾಧ್ಯಮ ಮಿತ್ರರಿಗೆ ಪ್ರತಿಕ್ರಿಯೆ ನೀಡಲು ಅವಕಾಶ ಮಾಡಿಕೊಟ್ಟು ಕರ್ತವ್ಯದಲ್ಲಿ ಅತೀವ ದುರ್ನಡತೆ ಮತ್ತು ಅಶಿಸ್ತು ಪ್ರದರ್ಶಿಸಿ ಕರ್ತವ್ಯಲೋಪ ಎಸಗಿದ್ದಕ್ಕಾಗಿ ಅಮಾನತ್ತು ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಅಮಾನತ್ತು ಆದ ಪೋಲಿಸ್ ಪೇದೆಗಳು ಅಮಾನತ್ತಿಗೆ ಮುಂಚೆ ಪಡೆಯುತ್ತಿದ್ದ ವೇತನದ ಶೇಕಡಾ 50ರಷ್ಟು ಪ್ರಮಾಣದಲ್ಲಿ ಜೀವನಾಧಾರ ಭತ್ಯೆಯಾಗಿ ಪಡೆಯಲು ಅರ್ಹರು. ಆಯಾ ಕಾಲಕ್ಕೆ ಮಂಜೂರು ಮಾಡುವ ಜೀವನಾಧಾರ ಭತ್ಯೆಯು ಒಳಗೊಂಡಿದೆ. ವೇತನವು ಅವರ ಅಮಾನತ್ತು ಅವಧಿಯಲ್ಲಿ ಅಂದರೆ ಪೋಲಿಸ್ ಆಯುಕ್ತರ ಅಧೀನದಲ್ಲಿ ಮುಂದುವರೆಯಲು ಕೆಸಿಎಸ್‍ಆರ್ ನಿಯಮ-104ರ ಪ್ರಕಾರ ಬದ್ದರಾಗಿರುತ್ತಾರೆ ಎಂದು ಅವರು ಆದೇಶದಲ್ಲಿ ವಿವರಿಸಿದ್ದಾರೆ.
ಅಮಾನತ್ತು ಅವಧಿಯಲ್ಲಿ ಬೇರೆ ಯಾವುದೇ ಖಾಸಗಿ ನೌಕರಿಯಲ್ಲಾಗಲಿ, ವ್ಯಾಪಾರ ವಹಿವಾಟುಗಳನ್ನು ಮಾಡಕೂಡದು. ಆ ರೀತಿ ಕಂಡುಬಂದಲ್ಲಿ ಪ್ರತ್ಯೇಕವಾಗಿ ಶಿಸ್ತು ಕ್ರಮ ಕೈಗೊಳ್ಳುವುದರ ಜೊತೆಗೆ ಅಮಾನತ್ತಿನ ಅವಧಿಯಲ್ಲಿ ನೀಡಲಾಗುವ ಜೀವನಾಧಾರ ಭತ್ಯೆಯನ್ನೂ ಸಹ ತಡೆಹಿಡಿಯಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.
ಅಮಾನತ್ತು ಅವಧಿಯಲ್ಲಿ ಪೂರ್ವಾನುಮತಿ ಇಲ್ಲದೇ ಕೇಂದ್ರ ಸ್ಥಾನವನ್ನು ಬಿಡಬಾರದು. ರಜೆಯ ಸೌಲಭ್ಯವನ್ನು ಪಡೆಯುವಂತಿಲ್ಲ. ಯಾವುದೇ ಖಾಸಗಿ ವೃತ್ತಿಯಲ್ಲಿ ತೊಡಗಿಲ್ಲ ಎಂಬ ಪ್ರಮಾಣಪತ್ರವನ್ನು ಪ್ರತಿ ತಿಂಗಳು ಜೀವನಾಧಾರ ಭತ್ಯೆ ಪಡೆಯುವ ಮೊದಲು ಹಾಜರುಪಡಿಸಬೇಕು ಎಂದು ಅವರು ಸೂಚಿಸಿದ್ದಾರೆ.
ಅಮಾನತ್ತು ಅವಧಿಯಲ್ಲಿ ಕೇಂದ್ರ ಸ್ಥಾನ ಬಿಡುವುದಾದರೆ ಸಂಬಂಧಪಟ್ಟ ಮೇಲಾಧಿಕಾರಿಗಳ ಅನುಮತಿ ಪಡೆಯತಕ್ಕದ್ದು. ತಮ್ಮ ವಿಳಾಸವನ್ನು ಸಹ ಮೇಲಾಧಿಕಾರಿಗಳಿಗೆ ತಿಳಿಸತಕ್ಕದ್ದು. ಇಲಾಖೆಯ ಶಿಸ್ತಿನ ಕ್ರಮಕ್ಕೆ ಅನುಕೂಲವಾಗುವ ರೀತಯಲ್ಲಿ ಎಲ್ಲ ನಿಯಮಗಳನ್ನು ಪಾಲಿಸತಕ್ಕದ್ದು ಎಂದು ಅವರು ತಾಕೀತು ಮಾಡಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *