ಸದಾಶಿವ್ ಆಯೋಗದ ವರದಿ ಜಾರಿ: ಸಚಿವ ಕೆ.ಎಚ್. ಮುನಿಯಪ್ಪ ವಜಾಕ್ಕೆ ಘೋರ್ ಸೇನಾ ಆಗ್ರಹ

ಕಲಬುರಗಿ : ನಿವೃತ್ತ ನ್ಯಾಯಾಧೀಶ ಎ. ಸದಾಶವ್ ಆಯೋಗದ ವರದಿ ಜಾರಿಗೆ ತರುವ ಕುರಿತು ಹೇಳಿಕೆ ನೀಡಿರುವ ರಾಜ್ಯದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್. ಮುನಿಯಪ್ಪ ಅವರಿಗೆ ಸಂಪುಟದಿಂದ ವಜಾಗೊಳಿಸಬೇಕು ಎಂದು ಗೋರ್ ಸೇನಾ ಜಿಲ್ಲಾಧ್ಯಕ್ಷ ಮಾನಸಿಂಗ್ ಆರ್. ಚವ್ಹಾಣ್ ಅವರು ಆಗ್ರಹಿಸಿದರು.
ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆ.ಎಚ್. ಮುನಿಯಪ್ಪ ಅವರು ಒಬ್ಬ ಸಚಿವರಾಗಿ ಪ್ರಮಾಣವಚನ ಬೋಧನಾ ಮತ್ತು ಗೌಪ್ಯತೆಯನ್ನು ಗಾಳಿಗೆ ತೂರಿ ತಮ್ಮ ಸಮುದಾಯವನ್ನು ಸರ್ಕಾರದ ವಿರುದ್ಧ ಬಹಿರಂಗವಾಗಿ ಎತ್ತಿ ಕಟ್ಟುತ್ತಿದ್ದಾರೆ. ಸದಾಶಿವ್ ಆಯೋಗದ ಹಿನ್ನೆಲೆ, ಮುನ್ನೆಲೆ ಯಾವುದೂ ತಿಳಿಯದೇ ರಾಜಕೀಯ ಕಾರಣಗಳಿಗಾಗಿ ಮುಗ್ದ ಜನರನ್ನು ಒಬ್ಬರ ವಿರುದ್ಧ ಮತ್ತೊಬ್ಬರನ್ನು ಎತ್ತಿ ಕಟ್ಟಿ ಪ್ರಚೋದನೆ ಮಾಡುವ ಮೂಲಕ ಕರ್ನಾಟಕದಲ್ಲಿ ದಲಿತರ ಐಕ್ಯತೆಗೆ ಭಂಗ ತಂದಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.
ಹಿಂದಿನ ಬಿಜೆಪಿ ಸರ್ಕಾರವು ಸದಾಶಿವ್ ಆಯೋಗದ ವರದಿಯನ್ನು ತಿರಸ್ಕರಿಸಿರುವುದರಿಂದ ರಾಜ್ಯ ಸರ್ಕಾರವು ಒತ್ತಡಗಳಿಗೆ ಮಣಿದು ವರದಿಗೆ ಮರುಜೀವ ಕೊಡಬಾರದು., ಕಾನೂನು ಬಾಹಿರ ಸಂಪ್ರದಾಯಕ್ಕೆ ಕೈ ಹಾಕಬಾರದು ಎಂದು ಒತ್ತಾಯಿಸಿದ ಅವರು, ಹಿಂದಿನ ಸರ್ಕಾರ ಸಂವಿಧಾನದಲ್ಲಿ ಅವಕಾಶ ಇಲ್ಲದ ಸರ್ವೋಚ್ಛ ನ್ಯಾಯಾಲಯದಲ್ಲಿ ಬಾಕಿ ಇರುವ ಒಳ ಮೀಸಲಾತಿ ಪ್ರಕರಣಕ್ಕೆ ಕೈ ಹಾಕಿ ಸುಟ್ಟುಕೊಂಡು ಅಧಿಕಾರ ಕಳೆದುಕೊಂಡು ವಿಲ, ವಿಲ ಒದ್ದಾಡುತ್ತಿದೆ. ಈಗಿನ ಸರ್ಕಾರವು ಕೈ ಹಾಕಿದರೆ ಮುಂಬರುವ ಜಿಲ್ಲಾ ಪಂಚಾಯಿತಿ ಮತ್ತು ಲೋಕಸಭಾ ಚುನಾವಣೆಗಳಲ್ಲಿ ಸಂಕಷ್ಟ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಹಿಂದುಳಿದ ವರ್ಗಗಳ ಆರ್ಥಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಸ್ಥಿತಿಗತಿಗಳನ್ನು ತಿಳಿಯಲು ಹಿಂದುಳಿದ ಆಯೋಗದ ಅಂದಿನ ಅಧ್ಯಕ್ಷ ಕಾಂತರಾಜ್ ಅವರ ನೇತೃತ್ವದಲ್ಲಿನ ಆಯೋಗದ ವರದಿಯನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿದ ಅವರು, ಜಾತಿ ಸಮೀಕ್ಷೆ ಮತ್ತು ಜಾತಿಗಣತಿಗೆ ಇರುವ ಮೂಲಭೂತ ವ್ಯತ್ಯಾಸವೇನೆಂದರೆ ಸಂವಿಧಾನದ ಅನುಚ್ಛೇದ 46ರಂತೆ ರಾಜ್ಯ ಸರ್ಕಾರಗಳು ಜಾತಿಗಳ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಸಮೀಕ್ಷೆ ಕೈಗೊಂಡು ಅಭಿವೃದ್ಧಿಯಲ್ಲಿ ಆಗಿರಬಹುದಾದ ತಾರತಮ್ಯಗಳನ್ನು ಸೂಕ್ತ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪ್ರತಿ ಹತ್ತು ವರ್ಷಗಳಿಗೊಮ್ಮೆ ಸಂವಿಧಾನದ ಅನುಚ್ಛೇದ 246 ಶೆಡ್ಯೂಲ್‍ನಂತೆ ಒಕ್ಕೂಟದ ಸರ್ಕಾರದ ಪಟ್ಟಿ ಒಂದರಡಿ ಬರುವ ಎಂಟ್ರಿ 69ರ ಪ್ರಕಾರ ಪ್ರತಿ ಜಾತಿಯಲ್ಲಿ ಬರುವ ಕುಟುಂಬಗಳ ಜಾತಿ ಗಣತಿಯನ್ನು ಮಾಡಿಸುವಂತೆ ಆಗ್ರಹಿಸಿದ ಅವರು, ಆ ಕೆಲಸ 1935ರಲ್ಲಿ ಆಗಿದೆ ಮತ್ತು ವರದಿ ಬಿಡುಗಡೆ ಆಗಿದೆ. ನಂತರ ಸ್ವತಂತ್ರ ಭಾರತದಲ್ಲಿ ಯುಪಿಎ ಸರ್ಕಾರದ ಜಾತಿ ಜನಗಣತಿ ನಡೆದಿದೆ. ಆದಾಗ್ಯೂ, ವರದಿ ಬಿಡುಗಡೆಯಾಗಿಲ್ಲ ಎಂದರು.
ಕೂಡಲೇ ಎ. ಸದಾಶಿವ್ ಆಯೋಗದ ವರದಿಯನ್ನು ಸಂಪೂರ್ಣವಾಗಿ ತಿರಸ್ಕರಿಸಬೇಕು ಹಾಗೂ ಕಾಂತರಾಜ್ ಅವರ ಆಯೋಗದ ವರದಿಯನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದ ಅವರು, ಸಚಿವ ಕೆ.ಎಚ್. ಮುನಿಯಪ್ಪ ಅವರಿಗೆ ಸಂಪುಟದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.
ಪದೇ ಪದೇ ಎ. ಸದಾಶಿವ್ ಆಯೋಗದ ವರದಿ ಜಾರಿ ಕುರಿತು ಸರ್ಕಾರದಲ್ಲಿನ ಸಚಿವರೇ ಹೇಳಿಕೆಯನ್ನು ನೀಡುವುದನ್ನು ಮುಂದುವರೆಸಿದರೆ ಲಂಬಾಣಿ, ಕೊರವ, ಕೊರಮ್, ಭೋವಿ ಮುಂತಾದ ಸಮಾಜದವರು ಸುಮ್ಮನೇ ಕುಳಿತುಕೊಳ್ಳುವುದಿಲ್ಲ. ಬರುವ 2024ರ ಫೆಬ್ರವರಿಯಲ್ಲಿ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ಮಾಡಲಾಗುವುದು ಎಂದು ಅವರು ಎಚ್ಚರಿಸಿದರು. ಸುದ್ದಿಗೋಷ್ಠಿಯಲ್ಲಿ ವಿನೋದ್ ರಾಠೋಡ್, ಶ್ರೀಧರ್ ಚವ್ಹಾಣ್, ಪ್ರಭು ರಾಠೋಡ್, ರಾಹುಲ್ ನಾಯಕ್ ಮುಂತಾದವರು ಉಪಸ್ಥಿತರಿದ್ದರು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *