ಕೊಬ್ಬರಿ ದರ ಕುಸಿತ, ಬೆಂಬಲ ಬೆಲೆ ಘೋಷಿಸಿ ಸುಮ್ಮನಾದ ಸರಕಾರ, ಬೀದಿಗಿಳಿದ ಬೆಳೆಗಾರರು

ಹೈಲೈಟ್ಸ್‌:

  • ಕೊಬ್ಬರಿ ಬೆಳೆಗಾರರಿಗೆ ಸಿಗದ ಬೆಂಬಲ ಬೆಲೆಯ ರಕ್ಷೆ, ಘೋಷಣೆಗಷ್ಟೇ ಸೀಮಿತವಾದ ಬೆಂಬಲ ಬೆಲೆ
  • ಬೆಂಬಲ ಬೆಲೆ ಘೋಷಿಸಿ ಸುಮ್ಮನಾದ ರಾಜ್ಯ ಸರಕಾರ, ಇನ್ನೂ ಆರಂಭವಾಗದ ಖರೀದಿ ಕೇಂದ್ರ
  • ಮಂಗಳವಾರ ತೆಂಪ್ರತಿಭಟನೆ ನಡೆಸಿ ಸರಕಾರದ ವಿರುದ್ಧ ತಮ್ಮ ಆಕ್ರೋಶ ಹೊರಹಾಕಿದ ತೆಂಗು ಬೆಳೆಗಾರರು

ಬೆಂಗಳೂರು: ಕೊಬ್ಬರಿ ಬೆಲೆ ಕುಸಿಯುತ್ತಿದೆ. ಬೆಂಬಲ ಬೆಲೆ ಎಂಬುದು ಘೋಷಣೆಗಷ್ಟೇ ಸೀಮಿತವಾಗಿದೆ. ಖರೀದಿ ಕೇಂದ್ರ ತೆರೆಯಲು ಸರಕಾರ ಮೀನಮೇಷ ಎಣಿಸುತ್ತಿರುವುದರಿಂದ ತೆಂಗು ಬೆಳೆಗಾರರು ದಿಕ್ಕು ತೋಚದಾಗಿದ್ದಾರೆ. ಮಂಗಳವಾರ ಪ್ರತಿಭಟನೆ ನಡೆಸಿ ಸರಕಾರದ ವಿರುದ್ಧ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ಆರು ತಿಂಗಳ ಹಿಂದೆ ಕೊಬ್ಬರಿಗೆ ಕ್ವಿಂಟಲ್‌ಗೆ 11,730 ರೂ. ಬೆಂಬಲ ಬೆಲೆ ಘೋಷಿಸಲಾಗಿತ್ತು. ಆ ನಂತರ ರಾಜ್ಯ ಸರಕಾರ 1 ಸಾವಿರ ರೂ. ಪ್ರೋತ್ಸಾಹಧನವನ್ನೂ ಘೋಷಿಸಿದೆ. ಆದರೆ ಈ ಘೋಷಣೆ ಈಡೇರಿಸುವಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ವಿಫಲವಾಗಿವೆ. ನೆಪಮಾತ್ರಕ್ಕೆ ಬೆಂಬಲ ಬೆಲೆ ನೀಡಿರುವ ಸರಕಾರ ಖರೀದಿ ಕೇಂದ್ರ ಆರಂಭಿಸುವ ಮನಸ್ಸು ಮಾಡಿಲ್ಲ.

ಕೊಬ್ಬರಿ ಉತ್ಪಾದನಾ ವೆಚ್ಚ ಕ್ವಿಂಟಾಲ್‌ಗೆ ಸರಾಸರಿ 16,750 ರೂ. ಇದೆ. ಆದರೆ ಮಾರುಕಟ್ಟೆಯಲ್ಲಿ ಕ್ವಿಂಟಾಲ್‌ ಕೊಬ್ಬರಿ ದರ 8,000 ರೂ. ಆಸುಪಾಸಿನಲ್ಲೇ ಗಿರಿಕಿ ಹೊಡೆಯುತ್ತಿದೆ. ಹಾಕಿದ ಬಂಡವಾಳವೂ ಕೈಗೆಟುಕದೆ ರೈತರು ಕಂಗಾಲಾಗಿದ್ದಾರೆ.

ರಾಜ್ಯದಲ್ಲಿ ತೆಂಗು ಪ್ರಧಾನ ಬೆಳೆ. ಅದರಲ್ಲೂ ತುಮಕೂರು ಸೇರಿದಂತೆ ಮಧ್ಯ ಕರ್ನಾಟಕದ 12 ಜಿಲ್ಲೆಗಳ ಪ್ರಮುಖ ವಾಣಿಜ್ಯ ಬೆಳೆ ಇದಾಗಿದೆ. ವರ್ಷಪೂರ್ತಿ ಖರೀದಿ ಕೇಂದ್ರ ಇರಬೇಕು. ಬೆಂಬಲ ಬೆಲೆಯಲ್ಲಿ ಕೊಬ್ಬರಿ ಖರೀದಿ ಆಗಬೇಕೆಂಬುದು ರೈತರ ಆಗ್ರಹ. ರೈತ ಉತ್ಪಾದಕ ಸಂಘ (ಎಫ್‌ಪಿಒ)ಗಳ ಮೂಲಕ ಬೆಂಬಲ ಬೆಲೆ ನೀಡಿ ಕೊಬ್ಬರಿ ಖರೀದಿಗೆ ಕ್ರಮವಹಿಸಬೇಕೆಂಬ ಸಲಹೆಯನ್ನು ಕೂಡ ರೈತರು ಸರಕಾರಕ್ಕೆ ನೀಡಿದ್ದಾರೆ.

ಹೋರಾಟ ಶುರು

ಕೊಬ್ಬರಿಗೆ ಬೆಂಬಲ ಬೆಲೆ ಘೋಷಿಸಿ ಖರೀದಿ ಕೇಂದ್ರ ಆರಂಭಿಸದೆ ರೈತರನ್ನು ನಂಬಿಸಿ ಸರಕಾರಗಳು ಅನ್ಯಾಯ ಎಸಗುತ್ತಿವೆ ಎಂದು ರೈತರಲ್ಲಿ ಅಸಮಾಧಾನ ಭುಗಿಲೆದ್ದಿದೆ. ಪ್ರತಿಭಟನೆಯ ಕಾವು ರಾಜ್ಯಾದ್ಯಂತ ಹರಡುವ ಸೂಚನೆ ಸಿಕ್ಕಿದೆ. ಮಂಗಳವಾರ ಕಲ್ಪತರು ನಾಡು ತುಮಕೂರಲ್ಲಿ ಭಾರತೀಯ ಕಿಸಾನ್‌ ಸಂಘ-ಕರ್ನಾಟಕ ಪ್ರದೇಶ (ರಿ) ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ರೈತರು, ನಗರದ ಜ್ಯೂನಿಯರ್‌ ಕಾಲೇಜು ಮೈದಾನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆಯಲ್ಲಿ ತೆರಳಿ ಡಿಸಿಗೆ ಮನವಿ ಸಲ್ಲಿಸಿದರು.

ಎರಡು ವರ್ಷದ ಹಿಂದೆ 18,000 
ರೂ. ದರ

ಎರಡು ವರ್ಷದ ಹಿಂದೆ ಕೊಬ್ಬರಿ ಕ್ವಿಂಟಾಲ್‌ಗೆ 18 ಸಾವಿರ ರೂ. ವರೆಗೂ ತಲುಪಿತ್ತು. ಆ ನಂತರ ದರ ಕುಸಿಯುತ್ತಾ ಬಂದಿದೆ.

ತೆಂಗು ಸಾರ್ವಕಾಲಿಕ ಬೆಳೆಯಾಗಿದ್ದು ವರ್ಷವಿಡೀ ಕೊಬ್ಬರಿ ಖರೀದಿ ಕೇಂದ್ರ ತೆರೆದಿಡಬೇಕು. ಬೆಂಬಲ ಬೆಲೆ ಘೋಷಿಸಿದರೆ ಸಾಲದು ಖರೀದಿಗೂ ಕ್ರಮ ವಹಿಸಬೇಕಲ್ಲವೇ? ಜತೆಗೆ ಎಫ್‌ಪಿಒ ಮೂಲಕವೂ ಖರೀದಿ ಮಾಡಬಹುದು ಎಂದು ಭಾರತೀಯ ಕಿಸಾನ್‌ ಸಂಘ-ಕರ್ನಾಟಕ ಪ್ರದೇಶ (ರಿ)
ಪ್ರಧಾನ ಕಾರ್ಯದರ್ಶಿ ಗಂಗಾಧರಸ್ವಾಮಿ ಹೇಳಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *