`ಸಾಲ ಮನ್ನಾ ಮಾಡಿದ್ರ ಸ್ವಲ್ಪ ಉಸಿರು ಬಿಡೊಹಂಗ ಆಗ್ತಾದರಿ’: ವಿಪಕ್ಷ ನಾಯಕ ಆರ್ ಅಶೋಕ ಮುಂದೆ ರೈತರ ಅಳಲು

ಹೈಲೈಟ್ಸ್‌:

  • ವಿಪಕ್ಷ ನಾಯಕರಾದ ಬಳಿಕ ಕಲಬುರಗಿ ಜಿಲ್ಲೆಗೆ ಮೊದಲ ಬಾರಿ ಭೇಟಿ ನೀಡಿದ ಆರ್ ಅಶೋಕ
  • ಈ ವೇಳೆ ಜಿಲ್ಲೆಯ ಶ್ರೀನಿವಾಸ ಸರಡಗಿ ಮತ್ತು ಆಳಂದದ ಸರಡಗಿ ಗ್ರಾಮಗಳಲ್ಲಿ ಬರ ಪರಿಶೀಲನೆ
  • ಮಳೆ ಕೊರತೆಯಿಂದ ಬೆಳೆಗಳೆಲ್ಲಾ ಒಣಗಿ ಹೋಗಿವೆ ಎಂದು ಅಳಲು ತೋಡಿಕೊಂಡ ರೈತರು
  • ಈ ಬಾರಿ ಸಾಲಮನ್ನಾ ಮಾಡಿದರೆ ಕೊಂಚ ಮಟ್ಟಿಗೆ ಅನುಕೂಲವಾಗುತ್ತದೆ ಎಂದು ರೈತರ ಮನವಿ

ಕಲಬುರಗಿ: “ನಾಲ್ಕು ತಿಂಗಳ ಮ್ಯಾಲಿನ ಬೆಳಿ ಆದಾರ್ರೀ, ನೆಲ ಬಿಟ್ಟು ಮ್ಯಾಗ್‌ ಬಂದಿಲ್ಲ, ಬರೀ ಹೂವಾ ಆಗಿದ್ದು ಕಾಯಿ ಕಾಣಿಸ್ತಿಲ್ಲ, ನೆಲದಾಗ ಹಸಿ ಇಲ್ಲದಿದ್ದರ್ರ ಮುಂದಿನ ತಿಂಗಳ ಬೆಳಿ ಒಣಿಗಿ ಹೋಗ್ತಾವ್, ಸರಕಾರ ಮಾತ್ರ ಇನ್ನಾ ಯಾವುದೇ ಸಹಾಯಕ್ಕೆ ಬಂದಿಲ್ಲ, ಪರಿಹಾರ ಕೊಡ್ತೀವಿ ಅಂತಾರ ಯಾವಾ ಗ ಕೊಡ್ತಾರೋ, ಏನೋ ! ಈ ಸಲ ಸಾಲ ಮನ್ನಾ ಮಾಡಿದ್ರ ಸ್ವಲ್ಪ ಉಸಿರು ಬಿಡೊಹಂಗ ಆಗ್ತಾದರಿ, ನೀವು ಸರಕಾರದ ಮ್ಯಾಲ ಒತ್ತಡ ಹಾಕ್ರೀ”

– ವಿಧಾನಸಭೆ ಪ್ರತಿಪಕ್ಷ ನಾಯಕ ಆರ್‌.ಅಶೋಕ್‌ ಅವರು ಶ್ರೀನಿವಾಸ ಸರಡಗಿ ಗ್ರಾಮದ ರೈತ ಸುರೇಶ ಗಣು ಬರ ಪೀಡಿತ ಜಮೀನಿಗೆ ಭೇಟಿ ನೀಡಿದಾಗ ಕೇಳಿ ಬಂದ ನೋವಿನ ನುಡಿಗಳಿವು. ಬೆಳಗ್ಗೆ ಶ್ರೀನಿವಾಸ ಸರಡಗಿಯ ರೈತರೊಂದಿಗೆ ಬರದಿಂದ ಹಾಳಾದ ಬೆಳೆ ಪರಿಶೀಲಿಸಿದ ಅವರು, ನಂತರ ಆಳಂದ ತಾಲೂಕಿನ ಕಡಗಂಚಿ ಗ್ರಾದಮ ರೈತ ದೇವೇಂದ್ರಪ್ಪ ಡೊಂಕಿ ಜಮೀನಿನಲ್ಲಿ ಬೆಳೆದ ತೊಗರಿ, ಸೋಯಾಬೀನ್‌ ಪರಿಶೀಲಿಸಿದರು. ಬಳಿಕ ಜಿಲ್ಲೆಯ ಬಿಜೆಪಿ ಕಚೇರಿಗೆ ಭೇಟಿ ನೀಡಿ ಮುಖಂಡರು, ಕಾರ್ಯಕರ್ತರ ಜೊತೆ ಸಭೆ ನಡೆಸಿ, ಜಿಲ್ಲಾ ಬಿಜೆಪಿ ವತಿಯಿಂದ ಗೌರವ ಸ್ವೀಕರಿಸಿದರು.

ರೈತರ ಬದುಕಿನ ಜೊತೆ ಸರ್ಕಾರ ಚೆಲ್ಲಾಟ
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬರ ಪರಿಸ್ಥಿತಿಯಿಂದ ಕಂಗಾಲಾಗಿರುವ ರೈತರ ನೆರವಿಗೆ ಮುಂದಾಗದ ರಾಜ್ಯ ಕಾಂಗ್ರೆಸ್ ಸರ್ಕಾರ ಅವರ ಬದುಕಿನ ಜತೆ ಚೆಲ್ಲಾಟ ಆಡುತ್ತಿದೆ ಎಂದು ಆರೋಪಿಸಿದರು. ಯಾವುದೇ ರೀತಿಯ ಪರಿಹಾರ ಕಾರ್ಯಕ್ರಮಗಳಿಗೆ ಹಣ ಬಿಡುಗಡೆ ಮಾಡದೆ ಕೇವಲ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಎನ್ ಡಿಎ ಸರ್ಕಾರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡಲಾಗುತ್ತಿದೆ ಎಂದು ತರಾಟೆಗೆ ತೆಗೆದುಕೊಂಡರು.
ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿ ಇದ್ದಾಗ ಒಂದಕ್ಕೆ ಎರಡರಷ್ಟು ಪರಿಹಾರ ನೀಡುವ ಮೂಲಕ ರೈತರ ಹಿತವನ್ನು ಕಾಯಲಾಗಿತ್ತು. ಕೇಂದ್ರ ಸರ್ಕಾರ ಎನ್ ಡಿ ಆರ್ ಎಫ್ ಮಾನದಂಡಗಳ ಅನ್ವಯ ಪರಿಹಾರ ನೀಡುವುದು ನಿಯಮ. ಅದಕ್ಕೂ ಮುಂಚೆಯೇ ರಾಜ್ಯದ ರೈತರ ನೆರವಿಗೆ ಧಾವಿಸಬೇಕಿದ್ದ ರಾಜ್ಯ ಸರಕಾರ ಹೊಣೆಗಾರಿಕೆ ಯಿಂದ ನುಣುಚಿಕೊಳ್ಳುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರದಿಂದ ನೆಲ ಡೊಂಕು ನಾಟಕ
ಮಾಜಿ ಪ್ರಧಾನಿ ಮನಮೋನ್ ಸಿಂಗ್ ಅವರ ಕಾಲದಿಂದಲೂ ಅನುಸರಿಸಿರುವ ನೀತಿ ಅನ್ವಯವೇ ಕೇಂದ್ರ ಸರ್ಕಾರದಿಂದ ಪರಿಹಾರ ಬಿಡುಗಡೆ ಆಗುತ್ತದೆ. ಅಲ್ಲಿಯವರೆಗೆ ಕಾಯದೆ ನಿಮ್ಮ ಪಾಲಿನ ಕರ್ತವ್ಯ ನಿರ್ವಹಿಸಿ. ಅದನ್ನು ಬಿಟ್ಟು ನೆಲ ಡೊಂಕು ನಾಟಕ ಆಡುವುದನ್ನು ನಿಲ್ಲಿಸಿ ಎಂದು ಹರಿಹಾಯ್ದರು.

ಶಾಸಕ ಬಸವರಾಜ ಮತ್ತಿಮಡು, ಶರಣು ಸಲಗರ, ವಿಧಾನ ಪರಿಷತ್‌ ಸದಸ್ಯ ಬಿ.ಜಿ.ಪಾಟೀಲ್‌, ಮಾಜಿ ಶಾಸಕರಾದ ಸುಭಾಷ ಗುತ್ತೇದಾರ್‌, ದತ್ತಾತ್ರೇಯ ಪಾಟೀಲ್‌, ಕ್ರೆಡಲ್‌ ಮಾಜಿ ಅಧ್ಯಕ್ಷ ಚಂದು ಪಾಟೀಲ್‌, ಬಿಜೆಪಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ್‌ ರದ್ದೇವಾಡಗಿ, ನಗರಾಧ್ಯಕ್ಷ ಸಿದ್ದಾಜಿ ಪಾಟೀಲ್‌, ಮಾಜಿ ಎಂಎಲ್ಸಿ ಅಮರನಾಥ ಪಾಟೀಲ್‌, ಡಿಸಿಸಿ ಬ್ಯಾಂಕ್‌ ಉಪಾಧ್ಯಕ್ಷ ಸುರೇಶ ಸಜ್ಜನ್‌, ಹರ್ಷಾನಂದ ಗುತ್ತೇದಾರ್‌, ಸಂತೋಷ ಹಾದಿಮನಿ, ಬಿ.ರೇಣುಕಾಚಾರ್ಯ ಸಲಗರ, ಮೇಯರ್‌ ವಿಶಾಲ ದರ್ಗಿ, ಉಪಮೇಯರ ಶಿವಾನಂದ ಪಿಸ್ತಿ, ನೂರಾರು ಕಾರ್ಯಕರ್ತರು ಇದ್ದರು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *