ದಲಿತ ಯುವಕನ ಕೊಲೆ ಆರೋಪಿಗಳ ಬಂಧನಕ್ಕೆ ಆಗ್ರಹ
ವಿಜಯಪುರ ಜಿಲ್ಲಾ ಸಿಂದಗಿ ತಾಲೂಕಿನ ಬೂದಿಹಾಳ ಗ್ರಾಮದ ದಲಿತ ಯುವಕ ಅನೀಲ ಇಂಗಳಗಿ ಕೊಲೆ ಮಾಡಿದ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಿ ಆರೋಪಿಗಳಿಗೆ ಕಠಿಣ ಶಿಕ್ಷೆ ಹಾಗೂ ಮೃತ ಯುವಕನ ಕುಟುಂಬಕ್ಕೆ ಶಾಶ್ವತ ಪರಿಹಾರ ನೀಡಬೇಕು ಎಂದು ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗ ವರದಿ ಜಾರಿ ಹೋರಾಟ ಸಮನ್ವಯ ಸಮಿತಿ ಜಿಲ್ಲಾ ಕಾರ್ಯದ್ಯಕ್ಷರಾದ ಆನಂದ ತೆಗನೂರ ರವರು ಆಗ್ರಹಿಸಿದ್ದಾರೆ.
ಈ ಕುರಿತು ಗೃಹ ಸಚಿವರಿಗೆ ಪತ್ರ ಬರೆದಿರುವ ಅವರು , ರಾಜ್ಯದಲ್ಲಿ ದಲಿತರ ಮೇಲೆ ದೌರ್ಜನ್ಯ , ಕೊಲೆ ಸುಲಿಗೆ ಪದೇ ಪದೇ ನಡೆಯುತ್ತಿವೆ. ಆದರೆ ರಾಜ್ಯ ಸರಕಾರ ಇದಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ ಎಂಬಂತೆ ಕೈ ಕಟ್ಟಿ ಕುಳಿತ್ತಿದೆ. ಅಗಸ್ಟ್ 26 ರಂದು ಬೆಳಿಗ್ಗೆ 9 ರ ಸುಮಾರಿಗೆ ದಲಿತ ಯುವಕ ಅನೀಲ ಇಂಗಳಗಿ ಈತನ ಬೆಳವಣಿಗೆಯನ್ನು ಸಹಿಸದ ಸವರ್ಣಿಯರು ಬರ್ಬರವಾಗಿ ಕೊಲೆ ಮಾಡಿದ್ದಾರೆ. ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಗಳಿಗೆ ಸಾರ್ವಜನಿಕವಾಗಿ ಗಲ್ಲು ಶಿಕ್ಷೆಯಾದಗ ಮಾತ್ರ ಇಂತಹ ಪ್ರಕರಣಗಳು ಮತ್ತೆ ಮರುಕಳಿಸದು. ಕಾರಣ ಕೂಡಲೇ ಪೋಲಿಸ್ ಇಲಾಖೆ ಅಧಿಕಾರಿಗಳು ಈ ಪ್ರಕರಣದ ಆರೋಪಿಗಳ ಹಿಂದಿನ ಕಾಣದ ಕೈಗಳು ಆಟವಾಡಿದ್ದು ಮೇಲ್ನೋಟಕ್ಕೆ ಕಂಡು ಬಂದಿದ್ದು ಅಂತಹ ದಲಿತ ವಿರೋಧಿಗಳನ್ನು ಗುರುತಿಸಿ ಹತ್ಯೆಗೊಳಗಾದ ಕುಟುಂಬಕ್ಕೆ ನ್ಯಾಯ ಒದಗಿಸಿ ಕೊಡಬೇಕು. ಇಲ್ಲದೇ ಹೋದಲ್ಲಿ ರಾಜ್ಯದಂತ ಬೀದಿಗಿಳಿದು ಉಗ್ರವಾದ ಹೋರಾಟ ನಡೆಸುವುದು ಅನಿವಾರ್ಯ ವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.